ಹಿಂದೂಗಳು ನಮ್ಮ ಶತ್ರುಗಳಲ್ಲ. ಆರ್‌ಎಸ್‌ಎಸ್, ಬ್ರಾಹ್ಮಣವಾದಿ ವಿಚಾರಧಾರೆ ಇರುವ ಜನರು ನಮ್ಮ ಶತ್ರುಗಳು. ಆರ್‌ಎಸ್‌ಎಸ್ ಎಲ್ಲ ಜನರಿಗೆ ಅಪಾಯಕಾರಿಯಾಗಿದ್ದು, ಅದರ ವಿರುದ್ಧ ಹೆದರದೆ ಮಾತಾಡಬೇಕಿದೆ ಎಂದು ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಜಿ ಕೋಲ್ಸೆ ಪಾಟೀಲ್ ಅವರು ಹೇಳಿದರು.
ಬಸವಕಲ್ಯಾಣದಲ್ಲಿ ನಡೆದ ಹಜರತ್ ಮಹಮ್ಮದ್ ಪೈಗಂಬರ್ ಅವರ 1,500ನೇ ಜಯಂತ್ಯುತ್ಸವದ ನಿಮಿತ್ತ ‘ಸೂಫಿ ಸಂತ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ‘ನಾನು 1976ರಿಂದ ಹೇಳುತ್ತಿದ್ದೇನೆ. ಆರ್‌ಎಸ್‌ಎಸ್ ಎಲ್ಲ ಜನರಿಗೆ ಅತ್ಯಂತ ಅಪಾಯಕಾರಿಯಾಗಿದೆ. ಆದರೆ, ಯಾರಿಗೂ ಅದರ ವಿರುದ್ಧ ಮಾತನಾಡುವ ಧೈರ್ಯವಿಲ್ಲ. ಸಂವಿಧಾನದಿಂದಲೇ ಅಧಿಕಾರಕ್ಕೆ ಬಂದರೂ ಕೂಡ, ಅದು ಸಂವಿಧಾನವನ್ನು ಕೊನೆಗೊಳಿಸುವ ಹುನ್ನಾರ ನಡೆಸಿದೆʼ ಎಂದು ಕಿಡಿ ಕಾರಿದರು.
‘ಆರ್‌ಎಸ್‌ಎಸ್‌ನವರು ಯಾರೊಬ್ಬರೂ ಸ್ವತಂತ್ರ ಆಂದೋಲನದಲ್ಲಿ ಭಾಗವಹಿಸಲಿಲ್ಲ. ಅವರು ದೇಶಕ್ಕೆ ಯಾವುದೇ ರೀತಿಯಿಂದ ಒಳ್ಳೆಯದು ಮಾಡಲಿಲ್ಲ. ಎಲ್ಲಿವರೆಗೆ ನಾವು ಹೆದರುತ್ತೀವೋ ಅಲ್ಲಿವರೆಗೆ ಅವರು ನಮ್ಮ ಬೆನ್ನು ಹತ್ತುತ್ತಾರೆ. ಧೈರ್ಯದಿಂದ ಎದ್ದು ನಿಂತರೆ ಅವರು ತನ್ನಿಂದ ತಾನೇ ಹಿಂದೆ ಸರಿಯುತ್ತಾರೆ. ಅವರು ವಿಷಕಾರಿ ಜನರಾಗಿದ್ದು, ತುಂಬಾ ಹೆದರುಪುಕ್ಕಲಿದ್ದಾರೆ. ಹಾಗೆಯೇ ಅವರು ತುಂಬಾ ಕಡಿಮೆ ಜನ ಇದ್ದಾರೆ. ಆದರೆ ನಮ್ಮ ಜನರು ಒಗ್ಗಟ್ಟಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಹಿಂದೂ ಧರ್ಮದಲ್ಲಿ ವರ್ಣ ವ್ಯವಸ್ಥೆ ಇದೆ. ನಾವೆಲ್ಲರೂ ಆ ವ್ಯವಸ್ಥೆಯಲ್ಲಿ ಎಲ್ಲಕ್ಕಿಂತ ಕೆಳಗಡೆ ಇದ್ದೇವೆ. ನಾವು ಅವರಲ್ಲಿ ಸಮಾನವಾದ ಹಕ್ಕುಗಳನ್ನು ಕೇಳುತ್ತಿದ್ದೇವೆ. ನಮ್ಮನ್ನು ತುಳಿಯುವುದಕ್ಕಾಗಿ ಅವರು ಮುಸ್ಲಿಮರನ್ನು ಮುಂದೆ ತರುತ್ತಾರೆ. ಹಾಗಾಗಿ ಮುಸ್ಲಿಂ, ದಲಿತ, ಆದಿವಾಸಿ, ಇಸಾಯಿ, ಸಿಖ್ ಗಳೆಲ್ಲ ಒಗ್ಗಟ್ಟಾಗಬೇಕು. ಗೌತಮ್ ಬುದ್ಧ, ಮಹಾವೀರ, ಸಂತ ಕಬೀರ್, ಸಂತ ರೋಹಿದಾಸ್, ಸಂತ ಜ್ಞಾನೇಶ್ವರ್, ಸಂತ ತುಕಾರಾಮ್, ಸಂತ ಗಾಡಗೆ ಬಾಬಾ ಎಲ್ಲರೂ ಮಂದಿರದಲ್ಲಿ ದೇವರಿಲ್ಲ ಎಂದು ಹೇಳಿದ್ದರು. ಆದರೆ ಅದರ ಪ್ರಚಾರವಾಗಲಿಲ್ಲ. ಇವರೆಲ್ಲರೂ ಮನುವಾದಿಗಳ ವಿರುದ್ಧ ಹೋರಾಟ ಮಾಡಿದವರಾಗಿದ್ದಾರೆ’ ಎಂದರು.
‘ನಾವು ನಮ್ಮ ಇತಿಹಾಸ ಕೂಡ ಸರಿಯಾದ ರೀತಿಯಲ್ಲಿ ಜನರಿಗೆ ಹೇಳುವುದಿಲ್ಲ. ನಮ್ಮಲ್ಲಿ ಹೆದರಿಕೆ ಮನೆ ಮಾಡಿದೆ. ಯಾರು ಹೆದರುತ್ತಾರೋ ಅವರು ದಿನಾಲೂ ಸಾಯುತ್ತಿರುತ್ತಾರೆ. ನಾವು ಹೆದರಿಕೆ ಬಿಟ್ಟರೆ ಬ್ರಾಹ್ಮಣವಾದಿಗಳು ನಮ್ಮಿಂದ ದೂರ ಓಡಿ ಹೋಗುತ್ತಾರೆ. ಆದರೆ ಅದು ಆಗುತ್ತಿಲ್ಲ. ಸುಳ್ಳು ಇತಿಹಾಸ ನಮ್ಮೆಲ್ಲರ ದೊಡ್ಡ ಸಮಸ್ಯೆಯಾಗಿದೆ. ಶಿವಾಜಿ ಮಹಾರಾಜ್ ಅವರ ದರ್ಬಾರ್ ನಲ್ಲಿ ಎಲ್ಲ ಮಹತ್ವದ ಹುದ್ದೆಗಳಲ್ಲಿ ಮುಸ್ಲಿಮರು ಇದ್ದರು. ಅವರ ಪಟ್ಟಾಭಿಷೇಕದ ಸಮಯದಲ್ಲಿಯೂ ಕೂಡ 700 ಪಠಾಣರು ಅವರ ಜೊತೆಗಿದ್ದರು. ಹಾಗೆಯೇ ಅವರ ಅಂಗರಕ್ಷಕರು ಕೂಡ ಮುಸ್ಲಿಮರಾಗಿದ್ದರು’ ಎಂದರು.

‘ಶಿವಾಜಿ ಮೇಲೆ ಒಂದೇ ಒಂದು ಸಲ ಸವಾರಿ ಮಾಡಿದ ಅಫ್ಜಲ್ ಖಾನ್ ಅವನ ಅಂಗರಕ್ಷಕನಾಗಿದ್ದ ಕೃಷ್ಣೋಜಿ ಭಾಸ್ಕರ್ ಕುಲಕರ್ಣಿ ಬ್ರಾಹ್ಮಣನಾಗಿದ್ದನು. ಔರಂಗಜೇಬ್ ಹಾಗೂ ಶಿವಾಜಿ ಯಾವತ್ತು ಕೂಡ ಮುಖಾಮುಖಿ ಯುದ್ದ ಮಾಡಲಿಲ್ಲ. ಔರಂಗಜೇಬ್ ಅವರ ಪರವಾಗಿ ಯುದ್ಧ ಮಾಡುವವರೆಲ್ಲ ರಜಪೂತರಾಗಿದ್ದರು. ರಜಪೂತರು ಶಿವಾಜಿ ಮೇಲೆ ದಾಳಿ ಮಾಡಿದಾಗ ಬ್ರಾಹ್ಮಣರು ಶಿವಾಜಿ ಸೋಲಬೇಕೆಂದು ಯಜ್ಞ ಮಾಡಿದ್ದರು’ ಎಂದು ಇತಿಹಾಸ ತಿಳಿಸಿದರು.
‘ಹಿಂದೂ ಎನ್ನುವುದು ಧರ್ಮವಲ್ಲ, ಅದೊಂದು ಬ್ರಾಹ್ಮಣರ ಧರ್ಮ. ಬ್ರಾಹ್ಮಣರು ತಮ್ಮದು ಬೇರೆ ಧರ್ಮ ಎಂದು ಹೇಳುತ್ತಿದ್ದರು. ಹಿಂದೂ ಎನ್ನುವುದು ಬೇರೆ ದೇಶದವರು ನೀಡಿದ ಬೈಗಳ ಶಬ್ದ. ಆ ಬೈಯ್ಯುವ ಶಬ್ದಗಳು ನಮಗೆ ತಿಳಿಯುತ್ತಿರಲಿಲ್ಲ. ಆದರೆ ಬ್ರಾಹ್ಮಣರು ತಮ್ಮ ಬುದ್ಧಿವಂತಿಕೆಯಿಂದ ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡರು’ ಎಂದು ಹೇಳಿದರು.
‘ಈಗಲೂ ಕಾಲ ಮಿಂಚಿಲ್ಲ. ವಿಷಕಾರಿ ಜನರು ಒಂದು ಪ್ರತಿಶತ ಮಾತ್ರ ಇದ್ದಾರೆ. ಉಳಿದವರೆಲ್ಲ ಒಗ್ಗಟ್ಟಾಗಿ ಇವರ ವಿರುದ್ಧ ನಿಂತರೆ ಅವರು ಓಡಿ ಹೋಗುತ್ತಾರೆ. ಹಾಗಾಗಿ ಹಿಂದೂ, ಮುಸ್ಲಿಂ, ಸಂತ, ದಲಿತ, ಆದಿವಾಸಿ, ಇಸಾಯಿ, ಸಿಖ್ ಪ್ರತಿಯೊಬ್ಬರು ಹೆದರದೆ ಇವರ ವಿರುದ್ಧ ಮಾತನಾಡಬೇಕಿದೆ. ಎಲ್ಲ ಹಿಂದೂಗಳು ನಮ್ಮ ವಿರೋಧಿಗಳಲ್ಲ. ನಮ್ಮ ವಿರೋಧಿಗಳು ಆರ್‌ಎಸ್‌ಎಸ್, ಬ್ರಾಹ್ಮಣವಾದಿಗಳು ಮಾತ್ರ. ಅವರು ವಿಷ ಬಿತ್ತುವ ಜನರಾಗಿದ್ದಾರೆ’ ಎಂದು ಗುಡುಗಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿ, ‘ನಾವೆಲ್ಲರೂ ಜಗತ್ತಿನಲ್ಲಿ ಶಾಂತಿ ಬಯಸುತ್ತೇವೆ. ಇವತ್ತು ಹಜರತ್ ಮಹಮ್ಮದ್ ಪೈಗಂಬರ್ ಅವರ 1,500ನೇ ಜಯಂತ್ಯುತ್ಸವದ ನಿಮಿತ್ತ ಎಲ್ಲ ಸಮುದಾಯದ ಸ್ವಾಮಿ, ಸಂತರನ್ನು ಈ ವೇದಿಕೆ ಮೇಲೆ ಕರೆದು ಶಾಂತಿ, ಸಹೋದರತೆಯ ಸಂದೇಶ ಸಾರಲಾಗುತ್ತಿದೆ. ಇದು ಬಸವಕಲ್ಯಾಣದಲ್ಲಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ಈ ಕೆಲಸ ಆಗಬೇಕಿದೆ’ ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಅವರು ಮಾತನಾಡಿ, ‘ಸ್ವತಂತ್ರ ಭಾರತದ 75 ವರ್ಷದ ನಂತರವೂ ಕೂಡ ಮುಸಲ್ಮಾನರನ್ನು ಈ ದೇಶದಲ್ಲಿ ಶಂಕಿಸಿ ನೋಡಲಾಗುತ್ತದೆ. ಸ್ವತಂತ್ರ ಚಳವಳಿಯಲ್ಲಿ ಮಹಾತ್ಮಾ ಗಾಂಧಿ, ಮೌಲಾನಾ ಅಬುಲ್ ಕಲಾಂ ಆಜಾದ್ ಭುಜಕ್ಕೆ ಭುಜ ಕೊಟ್ಟು ಈ ದೇಶದ ಸ್ವತಂತ್ರಕ್ಕಾಗಿ ಹೋರಾಡಿದರು. ಮುಸಲ್ಮಾನರು ಈ ದೇಶಕ್ಕಾಗಿ ತ್ಯಾಗ ಮಾಡಿದರು. ಆದರೆ ಇಂದು ಕೂಡ ಮುಸಲ್ಮಾನರನ್ನು ಅನುಮಾನದ ದೃಷ್ಟಿಯಿಂದ ನೋಡಲಾಗುತ್ತದೆ. ಈ ದೇಶಕ್ಕೆ ಮುಸಲ್ಮಾನರ ಅವಶ್ಯಕತೆ ಇದೆ, ಅವರು ತಮ್ಮ ಪ್ರಾಣ ಒತ್ತೆಯಿಟ್ಟು ಈ ದೇಶದ ರಕ್ಷಣೆ ಮಾಡುತ್ತಾರೆ. ನಾವೆಲ್ಲರೂ ಸಹೋದರತೆ, ಶಾಂತಿಯಿಂದ ಬದುಕಬೇಕು’ ಎಂದು ಕರೆ ನೀಡಿದರು.
ಇದನ್ನೂ ಓದಿ : ಬೀದರ್ | ಡಿ.18ರೊಳಗೆ ಕ್ರಿಯಾ ಯೋಜನೆ ಸಲ್ಲಿಸಲು ಸಚಿವ ಈಶ್ವರ ಖಂಡ್ರೆ ಸೂಚನೆ
ಅಂತಾರಾಷ್ಟ್ರೀಯ ಖ್ಯಾತಿಯ ಮೌಲಾನಾ ಮುಹಮ್ಮದ್ ಒಬೈದುಲ್ಲಾ ಖಾನ್ ಆಝ್ಮಿ, ಡಾ.ಹಫೀಜ್ ಹಜ್ರತ್ ಸಯ್ಯದ್ ಹುಸೇನಿ, ಭಾಲ್ಕಿ ಹಿರೇಮಠ್ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಹವಾ ಮಲ್ಲಿನಾಥ್, ಪೌರಾಡಳಿತ ಸಚಿವ ರಹೀಮ್ ಖಾನ್, ತೆಲಂಗಾಣ ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ಅಜರುದ್ದಿನ್, ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್, ನಾಸಿರ್ ಹುಸೈನ್, ಇಮ್ರಾನ್ ಮಸೂದ್, ಹೈದರ್ ಪಾಷಾ ಖಾದ್ರಿ, ಗೋಪಿನಾಥ್, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ, ನಿಗಮ ಮಂಡಳಿ ಅಧ್ಯಕ್ಷೆ ಮಾಲಾ ನಾರಾಯಣರಾವ್ ಸೇರಿದಂತೆ ವಿವಿಧ ಧರ್ಮದ ಸಂತರು, ಮೌಲ್ವಿ, ಧರ್ಮ ಗುರುಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





