ಬೀದರ್ ನಗರದ ಗುರುನಾನಕ ಕಾಲೋನಿಯ ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು ₹26.80 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ನಡೆದಿದೆ.
ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಧೂಳಪ್ಪ ಹೊಸಳ್ಳಿ ಎಂಬುವರು ಕುಟುಂಬದವರೊಂದಿಗೆ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೋದಾಗ ಕಳ್ಳರು ಮನೆ ಹಿಂಬಾಗಿಲಿನ ಬೀಗ ಮುರಿದು ಈ ಕೃತ್ಯ ನಡೆಸಿದ್ದಾರೆ ಎಂದು ಧೂಳಪ್ಪ ಅವರ ಪತ್ನಿ ರೇಣುಕಾ ಅವರು ನೀಡಿದ ದೂರಿನ ಮೇರೆಗೆ ಜು. 26 ರಂದು ನೂತನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ʼಜುಲೈ 21 ರಂದು ಕುಟುಂಬ ಸಮೇತ ಶಿರಡಿಗೆ ತೆರಳುವ ಮುನ್ನ ಮನೆಯ ಕೋಣೆಗಳಿಗೆ ಬೀಗ ಹಾಕಿ ಮನೆ ನೋಡಿಕೊಳ್ಳುವಂತೆ ಮನೆ ಕೆಲಸದಾಕೆಗೆ ತಿಳಿಸಿ ಹೋಗಿದ್ದೇವೆ. ಜು.23ರಂದು ರಾತ್ರಿ 10.30ಕ್ಕೆ ಮನೆ ಕೆಲಸದಾಕೆ ಕರೆ ಮಾಡಿ ಕಳ್ಳತನ ನಡೆದಿರುವ ಬಗ್ಗೆ ತಿಳಿದರು. ಜು.24 ರಂದು ಬೆಳಿಗ್ಗೆ ಮನೆಗೆ ಬಂದಾಗ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆʼ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿರುವ 31 ತೊಲೆ ಬಂಗಾರದ ಆಭರಣಗಳು ಹಾಗೂ ₹2 ಲಕ್ಷ ನಗದು ಸೇರಿ ಒಟ್ಟು ₹26.80 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.





