ಪತ್ನಿ ಹಾಗೂ ಆಕೆಯ ಪೋಷಕರು ಮಾನಸಿಕ ಹಿಂಸೆಯಿಂದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರಿತು ಔರಾದ್ ತಾಲೂಕಿನ ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಔರಾದ್ ತಾಲೂಕಿನ ಬರದಾಪುರ ಗ್ರಾಮದ ಮಾರುತಿಗೊಂಡ ತಿಪಗೊಂಡ ಏಸ್ಕೆ (45) ಮೃತ ವ್ಯಕ್ತಿ. ದೂರು ದಾಖಲಿಸಿಕೊಂಡ ಚಿಂತಾಕಿ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಕುರಿತು ಮೃತ ವ್ಯಕ್ತಿಯ ಪುತ್ರ ಅರ್ಜುನಗೊಂಡ ನೀಡಿದ ದೂರಿನ ಮೇರೆಗೆ ಮೃತನ ಪತ್ನಿ ಮಲ್ಲಮ್ಮ ಹಾಗೂ ಆಕೆಯ ತಾಯಿ ಲಕ್ಷ್ಮೀಬಾಯಿ, ತಂದೆ ವಿಠಲಗೊಂಡ ಸೇರಿ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ʼನಮ್ಮ ತಂದೆಗೆ ಈ ಹಿಂದೆ ಎರಡು ಮದುವೆ ಆಗಿದೆ. ಇಬ್ಬರು ಪತ್ನಿಯರು ಬಿಟ್ಟು ಹೋಗಿದ್ದಾರೆ. ಬಳಿಕ ನಮ್ಮ ತಂದೆ ಮಲ್ಲಮ್ಮ ಎಂಬುವವರ ಜೊತೆ ಮೂರನೇ ಮದುವೆಯಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಲ್ಲಮ್ಮ ಹಾಗೂ ಅವರ ಪೋಷಕರು ನಮ್ಮ ತಂದೆಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದರುʼ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ʼಕಳೆದ ಒಂದು ವರ್ಷದಿಂದ ತಂದೆಯ ಆರೋಗ್ಯ ಸರಿ ಇರಲಿಲ್ಲ. ಮಲತಾಯಿ ಮಲ್ಲಮ್ಮ ಆಗಾಗ ಆಸ್ಪತ್ರೆಗೆ ತೋರಿಸಿದರು. ತಂದೆಯ ಹಾಳುವ ಮಾಡುವ ಉದ್ದೇಶದಿಂದ ಎಲ್ಲರೂ ಸೇರಿ ವಿಷ ಉಣಿಸಿದ್ದರು. ಅವರ ಮಾನಸಿಕ ಹಿಂಸೆ ತಾಳಲಾರದೆ ಜಮೀನಿನಲ್ಲಿ ಬೇವಿನ ಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆʼ ಎಂದು ಮೃತನ ಪುತ್ರ ಅರ್ಜುನಗೊಂಡ ಅವರ ಮಲತಾಯಿ ಮಲ್ಲಮ್ಮ ಹಾಗೂ ಆಕೆಯ ಪೋಷಕರ ಮೇಲೆ ಆರೋಪಿಸಿ ದೂರು ನೀಡಿದ್ದಾರೆ.
ಇದನ್ನೂ ಓದಿ : ಬೀದರ್ | ಪಿಡಿಒ ಹುದ್ದೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ನಿಯೋಜನೆ





