ನಾನು ಆವಾಗ ಎಂಟು ತಿಂಗಳ ತುಂಬು ಗರ್ಭಿಣಿ, ಹೊಲದಲ್ಲಿ ಕೂಲಿಗೆ ಹೋಗಿದ್ದೆ, ಉದ್ದು ರಾಶಿಯ ಬಣವಿ ಮೇಲಿಂದ ಜಿಗಿದರೆ ಬಹುಮಾನ (ಒಂದು ರೊಟ್ಟಿ ಅಥವಾ ಒಂದು ಪಾವ್ ಜೋಳ) ಅಂತ (ಶೆರ್ತಿ) ಮಾತಾಗಿತ್ತು. ಅಷ್ಠೇ ಮಾತಿಗೆ ಬಣವಿ ಮೇಲಿಂದ ಜಿಗಿದೆ
ಜನಪದ ಹಾಡುಗಾರ್ತಿ ತುಳಸಮ್ಮನವರಿಗೆ ಗೊತ್ತಿರುವ ಜನಪದ ಹಾಡು, ಕತೆಗಳಿಗೆ ಲೆಕ್ಕವಿಲ್ಲ. ಬಹುತೇಕ ಹಾಡುಗಳು ಅವರದ್ದೇ ರಚನೆ. ಬುಲಾಯಿ ಪದ, ಜೋಗುಳ ಪದ, ಕುಟ್ಟುವುದು, ಬೀಸುವುದು, ಸೋಬಾನೆ ಪದ, ಮೊಹರಂ ಪದ, ತತ್ವಪದ ಸೇರಿದಂತೆ ಬಹುತೇಕ ಪ್ರಕಾರದ ಹಾಡುಗಳು ಅವರಿಗೆ ಕರತಲಾಮಲಕ. ಕತೆ, ಹಾಡು, ಮಾತನ್ನು ಅವರು ಸಹಜವಾಗಿ ಬೆರೆಸುವ ಪರಿ ಸೋಜಿಗ. ಅವರು ʼಈದಿನʼದೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.
ʼನಮ್ಮ ಕಾಲ ಬಹಳ ಕೆಟ್ಟದಾಗಿತ್ತು, ಅಂಥ ಖರಾಬ್ ಕಾಲ ಯಾ ದುಷ್ಮನಿಗೂ ಬರಬಾರದು, ಅನ್ನ-ನೀರು ಸಿಗದೆ ಅಂಬಲಿ ಗಂಜಿ ಕೊಂಡಿ ಜಿಂದಗಿ ಮಾಡಿದ್ದೇವೆ’ ಎಂದು ಹೇಳುತ್ತಾರೆ 92 ವರ್ಷದ ಜಾನಪದ ಹಾಡುಗಾರ್ತಿ ತುಳಸಮ್ಮ ಶಿಂಧೆ.
ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ನಾಗೂರ (ಬಿ) ಗ್ರಾಮದ 92 ವರ್ಷ ಆಸುಪಾಸಿನ ಅಜ್ಜಿ ಕಟ್ಟಿದ ಹಾಡು, ಹೇಳುವ ಕಥೆಗಳು, ಹಾಸ್ಯಮಯ ಚಟಾಕಿ ಕೇಳುವುದೇ ಒಂದು ಸೊಗಸು, ಸಂತಸ…ಮನಸ್ಸಿಗೆ ಮುದ ನೀಡುತ್ತದೆ.
ʼ1960ರ ಕಾಲಘಟ್ಟದ ಭಿನ್ನ-ವಿಭಿನ್ನ, ರೋಮಾಂಚಕಾರಿ ಸನ್ನಿವೇಶ, ಘಟನೆಗಳನ್ನು ಅಜ್ಜಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ಹೀಗೆ; ʼಆ ಕಾಲದಲ್ಲಿಯೂ ಜಾತಿ ಧರ್ಮ ಎಲ್ಲಾ ಇದ್ದವು, ಆದರೆ ಎಲ್ಲರೂ ಸಹೋದರತೆ ಭಾವದಿಂದ ದಯಾ, ಮಾಯಾ ಮಮಕಾರದಿಂದ ಬದುಕುತ್ತಿದ್ದರು. ಹಿಂದೂ-ಮುಸ್ಲಿಂ ಎನ್ನುವ ಭೇದ ಇರಲೇ ಇಲ್ಲ. ಈಗಿನ ಕಾಲವೇ ಭಾಳ್ ಖರಾಬ್ ಆಗ್ಯಾದ್ ಎಲ್ಲರೂ ಅನ್ಯವಶ್ಯಕ ವಿಷಯಗಳಿಗೆ ಸುಖಾಸುಮ್ಮನೆ ದ್ವೇಷ, ಮತ್ಸರ ಬೆಳೆಸಿಕೊಂಡು ಬದುಕು ಮಾರಿ ಖರುಗ್ ಮಾಡ್ಕೊಂಡು ಜಿಂದಗಿ ಮಾಡ್ಲಾತರ್ʼ ಅಂತ ಭಾಳ್ ಖಾರವಾಗಿ ಹೇಳಿದ್ರು.
ಅಂದ್ರೆ ಆಗೇನು ಕೊಲೆ, ಸುಲಿಗೆ ಇರಲಿಲ್ಲ ಅಂತೇನಿಲ್ಲ. ‘ಒಬ್ಬ ಅಸ್ಪ್ರಶ್ಯ ಜಾತಿಯ ಪ್ರತಿಭಾವಂತ ಶಿಕ್ಷಕ ಸುಂದರ ಕಂಠದಿಂದ ಹಾಡುತ್ತಿದ್ದ, ಅದನ್ನು ಸಹಿಸಿಕೊಳ್ಳದ ಊರಿನ ಮೇಲ್ಜಾತಿ ಜನ ದ್ವೇಷದಿಂದ ಆತನನ್ನು ಬಂದೂಕಿನಿಂದ ಗುಂಡು ಹಾಕಿ ಕೊಲೆ ಮಾಡಿದ ಘಟನೆ ನಮ್ಮ ಕಣ್ಮುಂದೆ ನಡೆದಿತ್ತುʼ ಎಂಬುದನ್ನು ಅಜ್ಜಿ ಹೇಳುವಾಗ ಈ ಕ್ರೌರ್ಯ..ಮತ್ಸರ ತಲೆತಲಾಂತರದಿಂದ ಬಂದಿದ್ದು ಎನ್ನುವಂತಿತ್ತು.
ಈ ಅಜ್ಜಿಗೆ ನೂರಾರು ಜಾನಪದ ಹಾಡು, ಕಥೆ ಹೇಳ್ತಾರೆ, ಬಹುತೇಕವು ಸ್ವತಃ ಕಟ್ಟಿ ಹೇಳ್ತಾರೆ. ಅದರಲ್ಲೂ ಬುಲಾಯಿ, ಜೋಗುಳ, ಕುಟ್ಟುವ, ಬೀಸುವ, ಸೋಬಾನೆ ಪದ, ಮೊಹರಂ, ತತ್ವಪದ ಸೇರಿದಂತೆ ಜನಪದ ಸಾಹಿತ್ಯದ ಎಲ್ಲಾ ಪ್ರಕಾರದಲ್ಲಿ ಅಜ್ಜಿ ನಿರ್ಗಳವಾಗಿ ಹೇಳ್ತಾರೆ, ಅಷ್ಟೇ ಲಯಬದ್ಧವಾಗಿ ಹಾಡುತ್ತಾರೆ.
ಹೈದರಾಬಾದ್ ನಿಜಾಮ ಆಳ್ವಿಕೆಯ ಕಾಲದಲ್ಲಿ ನಡೆದ ಹಿಂದೂ-ಮುಸ್ಲಿಂ ಕದನ ಕುರಿತು ಸವಿಸ್ತಾರವಾದ ಕಟ್ಟಿದ ಪದವೊಂದು ಅಜ್ಜಿ ಹೇಳ್ತಾರೆ…..
ಹಿಂದೂ- ಮುಸ್ಲಿಂ ಅಣ್ಣಾ ತಮ್ಮಾರ ಸಮಾನ
ತಮ್ಮೊಳಗೆ ಮಾಡ್ಯಾರ್ ಕದನ ಕೋಲೆಣಾ ಕೋಲೆ ||
ಹಿಂದೂ ಮುಸ್ಲಿಂರು ಭಾವೈಕ್ಯತೆದಿಂದ ಬದುಕುವ ಅಂದಿನ ಸಂದರ್ಭದಲ್ಲಿ ಕೋಮು ಭಾವನೆಗಳು ಸೃಷ್ಟಿಯಾದವು, ನಂತರ ನಿಜಾಂ ರಾಜಾ ಶರಣಾಗಿ ಧ್ವಜಕ್ಕೆ ಪೂಜಾ ಮಾಡಿದನು ಎಂಬುದು ಹೇಳುತ್ತಾರೆ.
ಹೀಗೆ ಮುಂದುವರೆಸುತ್ತಾ ಒಂದು ನೀತಿ ಕಥೆ ಹೇಳ್ತಾರೆ;
ಧನಪಳರಾಜ ಎಂಬ ರಾಜನ ಹತ್ತಿರ ಕುವಾಜಿ ಎಂಬ ಪ್ರಧಾನಿ ಇದ್ದ, ಆತ ರಾಜನಿಗೆ ಸಿಂಹಾಸನದಿಂದ ಕೆಳಗಿಳಿಸಿ ತಾನೇ ರಾಜನಾಗಬೇಕು ಎಂದು ಒಳಗೊಳಗೆ ಸಂಚು ರೂಪಿಸಿ ಕೊನೆಗೆ ರಾಜನಿಗೆ ಕೆಳಗಿಳಿಸಿದನು.
ಪಾಂಡವರ ವನವಾಸ ಹನ್ನೆರಡು ವರ್ಷಾಂತ ಹರಿಬ್ರಹ್ಮ ಬರಿದಾರೆ, ಮಂದಿರ ಬಿಟ್ಟು ಆರಣ ಸೇರಿದರೆ ||
ಬಗಳೊಳಗ ಬಾಲಕ
ಪ್ರಧಾನಿ ವಂಶಕ್ಕ
ಯಾರಿರಬಾರದು ದೀಪಕ್ಕ ||
ಅಂತ ರಾಜ ತನ್ನ ಹೆಂಡತಿ ಗಂಗಾಸಾಗರ ಹಾಗೂ ಇಬ್ಬರು ಮಕ್ಕಳೊಂದಿಗೆ ರಾಜದರ್ಬಾರ್ ಬಿಟ್ಟು ಹೊರಡುತ್ತಾ ಸಂಕಟದ ನುಡಿ ಹೇಳುತ್ತಾ ಹೊರಡುತ್ತಾನೆ. ದಾರಿ ಮಧ್ಯೆ ಲ್ಯಾಕೆರಾಜ ಎಂಬ ಒಬ್ಬ ಬಂದು, ನಮ್ಮ ಮನೆಯಲ್ಲಿ ವಾಸವಾಗುವಂತೆ ಕರೆದುಕೊಂಡು ಹೋಗಿ ರಾಜನ ಹೆಂಡತಿಯ ಮೋಹಕ್ಕೆ ಮರುಳಾಗುತ್ತಾನೆ. ಅರಮನೆಯಲ್ಲಿ ಹೆಂಡತಿಗೆ ಬಚ್ಚಿಟ್ಟು ರಾಜ ಹಾಗೂ ಮಕ್ಕಳಿಗೆ ಓಡಿಸುತ್ತಾನೆ.
‘ಸತ್ಯ ಸತ್ಯ ನುಡಿಬೇಕಲ್ಲ, ಈ ಜನುಮ ಸುಡಬೇಕಲ್ಲ’ ಎಂದು ಧೈರ್ಯದಿಂದ ಇಬ್ಬರು ಮಕ್ಕಳೊಂದಿಗೆ ನದಿಯೊಂದು ದಾಟುವಾಗ ಒಬ್ಬನಿಗೆ ದಡ ಸೇರಿಸಿ ಬರುವಾಗ ತಾನೇ ನದಿಯಲ್ಲಿ ಮುಳುಗಿ ಮೃತಪಡುತ್ತಾನೆ. ಇಬ್ಬರು ಮಕ್ಕಳು ಆಚೆ ಈಚೆ ದಡಕ್ಕೆ ಒಬ್ಬೊಬ್ಬರಾಗಿ ಇರುತ್ತಾರೆ. ಆವಾಗ ಗಂಗಾಗಿರಿಬಾವ್ ಎಂಬ ಜೋಳಿಗೆ ಸ್ವಾಮಿ ಇಬ್ಬರು ಮಕ್ಕಳಿಗೆ ತನ್ನ ಮಠದಲ್ಲಿ ಇಟ್ಟುಕೊಂಡು ಪಾಲನೆ ಪೋಷಣೆ ಮಾಡಿ ವಿದ್ಯಾ ಕಲಿಸುತ್ತಾನೆ. ಮುಂದೆ ತಂದೆಗೆ ರಾಜಪದವಿಯಿಂದ ಕೆಳಗಿಳಿಸಿ ತೊಂದರೆ ನೀಡಿದವರೊಂದಿಗೆ ಎಲ್ಲರೂ ಒಂದಾಗುತ್ತಾರೆ ಎಂಬುದು ಕಥೆಯ ಸಾರಾಂಶ.

ಜಾನಪದ ಹಾಡುಗಳಲ್ಲಿ ಕುಟ್ಟುವುದು, ಬೀಸುವುದು, ಸೋಬಾನೆ ಹಾಡು ಹೀಗೆ ನಾನಾ ಪ್ರಕಾರದ ನೂರಾರು ಹಾಡು ಅಜ್ಜಿಯ ನಾಲಿಗೆ ಮೇಲಿವೆ.
ಬಂಗಾರ ಬಳೆನಿಟ್ಟು ಹೊಳೆ ನೀರಿಗೆ ಹೋದೆ, ಬಳಿನಲ್ಲಾ ಅಣ್ಣಾ ಬಳಿನಲ್ಲಾ ಈ ರಾಜರ ಬಳೆನಲ್ಲೋ|
ನನ್ನ ತವರು ಮನಿ ಎಲ್ಲಕ್ಕಿ ಪಡಸಾಲೆ
ಪಡಸಾಲೆ ಯವ್ವಾ ಪಡಸಾಲೆ ಗಾಜಿನ ಕಂಬ ಪಡಸಾಲೆ
ಗಾಜಿನ ಎಲಿಕಂಬ ಪಡಸಾಲೆಯಲ್ಲಿ ಸಳಮಂಚಣ್ಣ ಹಡೆದವನ ಬಲ್ಲೆ||
ಎಂದು ಬೆಳೆಗಾರನಿಗೆ ಹೇಳುವ ಕುಟ್ಟುವ ಹಾಡು ತವರೂರಿನ ಹಿರಿತನ ಸಾರುತ್ತದೆ.
‘ಮೂರು ಲೋಕಕ್ಕೆ ಕೀರ್ತಿ ಗಳಿಸಿದ ಪತಿವರ್ತೆಯರ ಮಾತ
ಸರಸ್ವತಿ ಲಕ್ಷ್ಮೀ ಪಾರ್ವತಿ ಕುಂತ ಶೋಧ ಮಾಡಬೇಕಂತ
ನಾರದನ ಧ್ಯಾನ ಮಾಡ್ತಾರ ಹಾಜರ ಆಗಬೇಕಂತ’
ಎಂಬ ಅನುಲಾಯಿ ಹಾಡು ಮೊಹರಂ ಪದ ಹಾಡುವ ಅಜ್ಜಿಯ ಧಾಟಿ, ಕಂಠ ಮಧುರವಾಗಿದೆ.
ʼಅಳ್ಯಾ ಬಂದಾ ಮನಿಗ ಖಳಿ ಬಂದಾಗ ಆಯ್ತಾವ್ವ
ಹದಿನಾರ ದಿನಸಿನ ಹಪ್ಪಳ ಕರೆದೆ ತುಪ್ಪವ ಕಾಸಿದೆ ಸೋ…ಅನ್ನಿರೆ ನಾರೆರೆಲ್ಲಾ||
ತುಪ್ಪ ಕಾಸಿದ ಅಚ್ಚಕರಿ ಆಕಳ ತುಪ್ಪ
ಹೆಪ್ಪಾ ಮುರುದೇನವ್ವ ಆಕಳ ಮೊಸರ ಸೋ…ಅನ್ನಿರೆ ನಾರೆರಲ್ಲಾ||
ಎಂಬ ಸೋಬಾನೆ ಹಾಡು ಮದುವೆ ಸಂದರ್ಭದಲ್ಲಿ ಹಾಡುವುದು, ಹೊಸ ಅಳಿಯನಿಗೆ ತರ-ತರದ ಅಡುಗೆ ಮಾಡಿ ನೀಡುವ ಬಗ್ಗೆ ಕಟ್ಟಿದ ಪದ.
ಈ ಸತ್ತ ಹೆಣಕ ಲಗ್ಗುನ್ ಮಾಡರಿ
ರಾಜ್ಯ ಹಿಂಗೇ ಕೇಳರಿ ||
ಎಂದು ಹಾಡುವ ಪದದಲ್ಲಿ ಒಂದು ಸ್ವಾರಸ್ಯಕರ ಘಟನೆ ಇದೆ. ಒಬ್ಬ ರಾಜನ ಮಗಳಿಗೆ ‘ಸತ್ತ ಹೆಣದೊಂದಿಗೆ ಮದುವೆ ಆಗಬೇಕೆಂದು’ ಹಣೆಬರಹದಲ್ಲಿ ಬರೆದಿರುತ್ತದೆ. ಕೊನೆಗೆ ರಾಜ ದೇಶದ ಜನರಿಗೆ ಪತ್ರ ಬರೆದು ಆದೇಶ ಹೊರಡಿಸುತ್ತಾನೆ. ಅಂದು ನದಿಯಲ್ಲಿ ಮುಳುಗಿ ಮೃತಪಟ್ಟ ರಾಜನ ಹೆಣದೊಂದಿಗೆ ಈ ಮತ್ತೊಬ್ಬ ರಾಜನ ಮಗಳ ಮದುವೆ ನಡೆಯುತ್ತದೆ. ನಂತರ ಮರುಜೀವ ಬರುತ್ತದೆ ಎಂಬ ಸಾರಾಂಶ ಈ ಕಥೆ ಹೇಳುತ್ತದೆ.

ಇಷ್ಟೊಂದು ಗಟ್ಟಿಯಾಗಿ, ಅಷ್ಟೇ ಸಂತೋಷ ಇರಲು ಏನು ಕಾರಣ ಎಂದು ಮಾತಿಗೆಳಿದಾಗ, ʼನಮ್ಮ ಕಾಲದ ಜನರು ಇಷ್ಟೊಂದು ಗಟ್ಟಿಯಾಗಿ ಯಾಕೆ ಇರ್ತಿವಿ ಎಂದರೆ ನಾವು ಯಾವುದೇ ಅನ್ನವನ್ನು ದ್ವೇಷ ಮಾಡಲ್ಲ. ಇದೇ ಬೇಕು ಇದು ಬೇಡ ಎಂದು ಹೇಳುವುದಿಲ್ಲ. ಈಗಿನ ಗರ್ಭಿಣಿಯರು ಭಾಳ್ ನಾಜೂಕದಿಂದ ಇರ್ತಾರೆ. ಆದರೆ ನಾನು ಒಂಬತ್ತು ಮಕ್ಕಳ ತಾಯಿ, ಆದರೂ ನನಗೆ ಆಸ್ಪತ್ರೆ ಅಂತೇ ಗೊತ್ತಿಲ್ಲʼ ಎಂದು ನಗ್ತಾ ಹೇಳ್ತಾರೆ.
ಇದನ್ನೂ ಓದಿ : ಬೀದರ್ | ಪಿಡಿಒ ಹುದ್ದೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ನಿಯೋಜನೆ
ʼನಾನು ಗರ್ಭಿಣಿ ಇದ್ದಾಗ ಹೊಲದಲ್ಲಿ ಕೂಲಿ ಮಾಡಿದ್ದೇನೆ ಎಂದು ಹೇಳುವ ಅಜ್ಜಿ ಒಂದು ಸ್ವಾರಸ್ಯಕರ ಘಟನೆ ನೆನಪಿಸುತ್ತಾರೆʼ
ʼಆವಾಗ ಎಂಟು ತಿಂಗಳ ತುಂಬು ಗರ್ಭಿಣಿ, ಹೊಲದಲ್ಲಿ ಕೂಲಿಗೆ ಹೋಗಿದ್ದೆ, ಉದ್ದು ರಾಶಿಯ ಬಣವಿ ಮೇಲಿಂದ ಜಿಗಿದರೆ ಬಹುಮಾನ (ಒಂದು ರೊಟ್ಟಿ ಅಥವಾ ಒಂದು ಪಾವ್ ಜೋಳ) ಅಂತ (ಶೆರ್ತಿ) ಮಾತಾಗಿತ್ತು. ಅಷ್ಠೇ ಮಾತಿಗೆ ಬಣವಿ ಮೇಲಿಂದ ಜಿಗಿದೆ. ನನಗೆ ಏನು ಆಗಲಿಲ್ಲ. ಬಾಣತನ ಛಂದೇ ಆಯ್ತು, ಚೊಚ್ಚಿಲ ಮಗ ಹುಟ್ಟಿದ ಆರೋಗ್ಯವಾಗಿದ್ದ. ಇದು ಹಳ್ಳಿ ಜನರ ಗಟ್ಟಿತನ, ಆಹಾರ ಪದ್ಧತಿ, ಬೆವರು ಸುರಿಸಿ ದುಡಿಮೆಯ ಫಲವೇ ಎಂದು ಈ ಕೆಳಗಿನ ಒಗ್ಗಟ್ಟು ಹೇಳ್ತಾರೆ.
ಅವ್ವ ಲಾಲ್ ತರಲು ಹೋಗಿದ್ದಾಳೆ
ನಾನು ತಲಿ ಒಡೆದು ಒಲಿಮ್ಯಾಲ್ ಹಾಕಿದ
ಧಂಡ ಮುರ್ದಿ ಒಲೆ ಒಳಗೆ ಹಾಕಿದ ||
ಜಾನಪದ ಅಕಾಡೆಮಿ ಪ್ರಶಸ್ತಿ :
ಹಾಡುಗಾರ್ತಿ ತುಳಸಮ್ಮ ಅವರ ಎಲ್ಲ ಹಾಡು, ಸಾಹಿತ್ಯವನ್ನು ಸಂಗ್ರಹಿಸಿ ಅವರ ಪುತ್ರಿ ಶಿಕ್ಷಕಿಯಾದ ಶಾಂತಮ್ಮ ಬಲ್ಲೂರ ಅವರು ಇತ್ತೀಚೆಗೆ ʼನನ್ನವ್ವನ ಜನಪದ ಸಿರಿʼ ಎಂಬ ಸಂಪಾದಿತ ಕೃತಿ ಹೊರತಂದಿದ್ದಾರೆ. ತುಳಸಮ್ಮ ಸಿಂಧೆ ಅವರು 2018ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ನೀಡುವ ವಾರ್ಷಿಕ ಗೌರವ ಪ್ರಶಸ್ತಿಗೆ ಭಾಜರಾಗಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




