ಅಪ್ರಾಪ್ತ ಮಕ್ಕಳು ಡ್ರಗ್ಸ್‌ಗೆ ಬಲಿಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಾರುಕಟ್ಟೆ, ಸಮಾಜ, ಕ್ಯಾಂಪಸ್ ಹಾಳಾಗಿದೆ. ನಮ್ಮ ಮಕ್ಕಳ ಚಾರಿತ್ರ್ಯ, ಸಂಸ್ಕಾರ ಅವರ ವ್ಯಕ್ತಿತ್ವ ಉಳಿಯಬೇಕಾದರೆ ನಮ್ಮ ಮನೆಗಳು ತರಬೇತಿ ಕೇಂದ್ರಗಳಾಗಿ ಮಾಡುವುದೇ ಏಕೈಕ ಮಾರ್ಗವಾಗಿದೆʼ ಎಂದು ಮಂಗಳೂರಿನ ಪ್ರವಚನಕಾರ ಮುಹಮ್ಮದ್ ಕುಂಞ ಹೇಳಿದರು.
ಬಸವಕಲ್ಯಾಣ ನಗರದ ತೇರು ಮೈದಾನದ ಸಭಾ ಭವನದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಕುರ್‌ಆನ್ ಕನ್ನಡ ಪ್ರವಚನದ ಸಮಾರೋಪದಲ್ಲಿ ಅವರು ಮಾತನಾಡಿ, ʼಮೊಬೈಲ್ ವಿಪರೀತ ಬಳಕೆಯಿಂದ ಸಂಬಂಧಗಳು ದುರ್ಬಲಗೊಳಿಸುತ್ತದೆʼ ಎಂದರು.
ʼಮನೆ ಎಂದರೆ ಅದು ಬರೀ ಊಟ-ವಸತಿ ಸ್ಥಳವಲ್ಲ, ಮನೆ ಶಾಂತಿಯ ಕೇಂದ್ರವಾಗಿದೆ. ಕೌಟುಂಬಿಕ ಸಂಬಂಧ ಹದಗೆಡುತ್ತಿದೆ. ದಾಂಪತ್ಯ ಸರಿ ಇದ್ದರೆ ಮಕ್ಕಳೂ ಉತ್ತಮ ನಡತೆಯವರು ಆಗುತ್ತಾರೆ. ತಂದೆ–ತಾಯಿ ಕಣ್ಣೀರು ಹಾಕುವುದು ಮಕ್ಕಳಿಗೆ ತಟ್ಟುವ ದೊಡ್ಡ ಶಾಪ. ಪಾಲಕರನ್ನು ದೂಷಿಸುವುದಕ್ಕಿಂತ ದೊಡ್ಡ ಪಾಪ ಮತ್ತೊಂದಿಲ್ಲ. ಆಧುನಿಕ ತಂತ್ರಜ್ಞಾನ ಸಂಬಂಧಗಳನ್ನು ಹಾಳು ಮಾಡುತ್ತಿದೆ. ವೈಫ್ ಇಲ್ಲದೆ ಬದುಕಬಹುದು ಆದರೆ, ವೈಫೈ ಇಲ್ಲದೆ ಜೀವಿಸಲಾಗದಂಥ ಪರಿಸ್ಥಿತಿ ನಮ್ಮದಾಗಿದೆʼ ಎಂದು ಹೇಳಿದರು.
ʼಅಪ್ರಾಪ್ತ ಮಕ್ಕಳು ಡ್ರಗ್ಸ್‌ಗೆ ಬಲಿಯಾಗುತ್ತಿರುವ ಕಾಲಘಟ್ಟವಾಗಿದೆ. ಮಾರುಕಟ್ಟೆ, ಸಮಾಜ, ಕ್ಯಾಂಪಸ್ ಹಾಳಾಗಿದೆ. ನಮ್ಮ ಮಕ್ಕಳ ಸಂಸ್ಕಾರ, ಚಾರಿತ್ರ್ಯ ಅವರ ವ್ಯಕ್ತಿತ್ವ ಉಳಿಯಬೇಕಾದರೆ ನಮ್ಮ ಮನೆಗಳು ತರಬೇತಿ ಕೇಂದ್ರಗಳಾಗಿ ಮಾಡುವುದೇ ಏಕೈಕ ಮಾರ್ಗವಾಗಿದೆ. ವೃದ್ಧ ತಂದೆ-ತಾಯಿಯನ್ನು ಆರೈಕೆ ಮಾಡುವುದೇ ನಮ್ಮ ಬದುಕಿನಲ್ಲಿ ಸಿಗುವ ಅತ್ಯಂತ ಸೌಭಾಗ್ಯ ಎಂದು ತಿಳಿದುಕೊಳ್ಳಬೇಕು. ಕುಟುಂಬದ ಸಂಬಂಧಗಳು ಹಾಳಾಗಲು ಕೈಯಲ್ಲಿರುವ ಮೊಬೈಲ್ ಅತ್ಯಂತ ದೊಡ್ಡ ವಿಲನ್ʼ ಎಂದು ಹೇಳಿದರು.
ನೆರೆಮನೆಯವರೊಂದಿಗೆ ಪ್ರೀತಿ, ವಿಶ್ವಾಸದಿಂದ ವರ್ತಿಸಿ ಗೌರವಿಸಿ ನಮ್ಮ ಬಗ್ಗೆ ನಿರ್ಭಯವಾಗಿದ್ದರೆ ಮಾತ್ರ ಅವರು ದೇವ ವಿಶ್ವಾಸಿ ಆಗುತ್ತಾರೆ. ಇಲ್ಲವೆ ನರಕಕ್ಕೆ ಹೋಗುತ್ತಾರೆ ಎಂದು ಕುರ್‌ಆನ್ ಹೇಳುತ್ತದೆ. ಸಂಬಂಧಗಳನ್ನು ಬಲಪಡಿಸುವುದು ಕುರ್‌ಆನ್ ನ ಸಂದೇಶವಾಗಿದೆ. ಬದುಕಿಗೆ ಬೆಳಕು, ಆತ್ಮವಿಶ್ವಾಸ, ನೇರ ದಾರಿ ತೋರುವ ಕುರ್‌ಆನ್ ಎಲ್ಲರೂ ಅಧ್ಯಯನ ನಡೆಸಬೇಕು. ಸಮಾಜದಲ್ಲಿ ಪ್ರೀತಿ, ಸಾಮರಸ್ಯ, ಸೌಹಾರ್ದತೆ ಬೆಳೆಸಲು ಇಂತಹ ಕಾರ್ಯಕ್ರಮಗಳ ಇನ್ನಷ್ಟು ನಡೆಸಬೇಕಿದೆ. ಸಮಾಜದಲ್ಲಿ ಹಗೆತನ, ದ್ವೇಷ, ಕೋಮುಗಲಬೆ, ಭಯದ ವಾತಾವರಣ ಇರದಂತೆ ರಚನಾತ್ಮಕ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣʼ ಎಂದರು.
ಬಸವಕಲ್ಯಾಣ ತಹಸೀಲ್ದಾರ್ ದತ್ತಾತ್ರೇಯ ಗಾದಾ ಮಾತನಾಡಿ, ʼಭಾರತದಲ್ಲಿ ಅನೇಕ ಧರ್ಮಗಳಿದ್ದರೂ ನಾವೆಲ್ಲರೂ ಸಹೋದತರೆ ಭಾವದಿಂದ ಜೀವನ ನಡೆಸುತ್ತಿದ್ದೇವೆ. ಮಾನವ ಸಂಬಂಧ ಹಾಗೂ ಧರ್ಮಕ್ಕೂ ಅವಿನಾಭಾವ ಸಂಬಂಧವಿದೆ. ನಾವೆಲ್ಲರೂ ಬಹುತ್ವ ಭಾರತದಲ್ಲಿ ಸೌಹಾರ್ದತೆಯಿಂದ ಬದುಕೋಣʼ ಎಂದರು.
ನೀರಾವರಿ ಇಲಾಖೆ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಮಾತನಾಡಿ, ʼಮಾನವ ಸಂಬಂಧಗಳು ಗಟ್ಟಿಯಾಗಿರಲು ಧರ್ಮಗಳೇ ಕಾರಣ. ಮನುಷ್ಯನಲ್ಲಿ ದಯೆ, ಕರುಣೆ, ಸಹನೆ, ಶಾಂತಿ ನೆಲೆಸಲು ಧರ್ಮಗಳ ಅಗತ್ಯವಿದೆʼ ಎಂದು ಹೇಳಿದರು.
ಅಣದೂರ ಭಂತೆ ವರಜ್ಯೋತಿ ಮಾತನಾಡಿ,ʼಎಲ್ಲ ಧರ್ಮ ಗ್ರಂಥಗಳು ಮತ್ತು ವಚನಗಳು ಮಾನವೀಯ ಮೌಲ್ಯಗಳನ್ನೇ ಸಾರುತ್ತವೆ. ಎಲ್ಲಿ ಧರ್ಮಗಳಿಲ್ಲವೊ ಅಲ್ಲಿ ಮಾನವ ಸಂಬಂಧಗಳು ದುರ್ಬಲಗೊಳ್ಳುತ್ತವೆ. ಭಾರತೀಯ ಮುಸ್ಲಿಂಮರು ಶಾಂತಿಪ್ರಿಯರಾಗಿದ್ದಾರೆ. ದೇಶದಲ್ಲಿ ಶಾಂತಿ ನೆಲೆಸಲು ಇಸ್ಮಾಂ ಶ್ರಮಿಸುತ್ತಿದೆʼ ಎಂದು ನುಡಿದರು.
ಇದನ್ನೂ ಓದಿ : ಬೀದರ್ | ಶರಣರ ವಚನಗಳು ನಮ್ಮ ಬದುಕಿಗೆ ದಾರಿದೀಪ : ಗುರುಬಸವ ಪಟ್ಟದ್ದೇವರು
ಪ್ರಮುಖರಾದ ಮಾಜಿ ಸಚಿವ ರಾಜಶೇಖರ್ ಪಾಟೀಲ್, ಉಪನ್ಯಾಸಕ ನರಸಿಂಗರೆಡ್ಡಿ ಗದ್ಲೇಗಾಂವ, ಯುಸೂಫೊದ್ದೀನ್ ನಿಲಂಗೇಕರ್, ಹಾಪೀಜ್ ಇಫ್ತೇಕಾರ್, ಅಹ್ಮದಸಾಬ್ ಕಾಜ್ಮಿ, ಹುಲಸೂರ ತಹಸೀಲ್ದಾರ್ ಶಿವಾನಂದ ಮೇತ್ರೆ, ನಿರ್ಗುಡಿ ಮಲ್ಲಿನಾಥ ಮಹಾರಾಜ, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಸ್ಲಂ ಜನಾಬ್ ಪಾಲ್ಗೊಂಡಿದ್ದರು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.





