ಕರ್ನಾಟಕದಲ್ಲಿ ಹಲವು ಕನ್ನಡಗಳಿವೆ. ಸ್ಥಳೀಯ ಭಾಷೆ ತನ್ನ ಸುತ್ತಲಿನ ಭಾಷೆಯ ಜೊತೆಗೆ ಬೆರೆತಿದೆ. ಬೀದರ ಕನ್ನಡವು ಮರಾಠಿ, ತೆಲುಗು, ಉರ್ದು, ಇಂಗ್ಲಿಷ್, ಲಂಬಾಣಿ ಸೇರಿ ಹಲವು ಭಾಷೆಗಳ ಜೊತೆಗೆ ಒಡನಾಡ ಸಾಧಿಸಿದ ಶ್ರೀಮಂತ ಭಾಷೆಯಾಗಿದೆ. ವಚನ ಸಾಹಿತ್ಯ ಈ ನೆಲದ ಸಾಂಸ್ಕೃತಿಕ ಶಕ್ತಿ ಹೆಚ್ಚಿಸಿದೆ ಎಂದು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ದೀಪಾ ಭಾಸ್ತಿ ಹೇಳಿದರು.
ಬಸವಕಲ್ಯಾಣದ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ 94ನೇ ಉಪನ್ಯಾಸ ಮತ್ತು ಸಂವಾದ ಸಮಾರಂಭವು ನಗರದ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಬಿಇಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಉಪನ್ಯಾಸ ನೀಡಿದ ಅವರು, ನಮ್ಮೊಳಗಿನ ಜಗತ್ತು ಶ್ರೀಮಂತಗೊಳಿಸಲು ಸಾಹಿತ್ಯದ ಓದು ಅಗತ್ಯ’ ಎಂದರು.
‘ಸಣ್ಣ-ಪುಟ್ಟ ಹಳ್ಳಿಗಳು ಸಾಂಸ್ಕೃತಿಕವಾಗಿ, ಭಾಷಿಕವಾಗಿ ಶ್ರೀಮಂತಿಕೆ ಪಡೆದಿವೆ. ಕನ್ನಡದ ಮೂಲಕ ಲೋಕ ಗ್ರಹಿಕೆ ಭಿನ್ನವಾಗಿದೆ. ಇಂಗ್ಲಿಷ್ ಮೂಲಕ ಲೋಕವನ್ನು ಭಿನ್ನವಾಗಿ ನೋಡುತ್ತೇವೆ. ಹಲವು ಭಾಷೆಗಳ ಮೂಲಕ ಹಲವು ಭಿನ್ನ ಲೋಕವನ್ನು ನೋಡುವ ಸಾಧ್ಯತೆಯಿದೆ’ ಎಂದರು.
ಈ ಕಾಲದಲ್ಲಿ ಕೆಲಸದ ನಿಮಿತ್ಯ ಇಂಗ್ಲಿಷ್ ಕಲಿಕೆ ಸಾಧ್ಯವಾಗಿರಬಹುದು. ಆದರೆ, ತಾಯಿ ನುಡಿ ಕನ್ನಡದ ಜೊತೆಗೆ ಹೆಚ್ಚಿನ ಸಂಬಂಧವನ್ನು ಹೊಂದಿರಬೇಕು. ಕನ್ನಡದ ಮೂಲಕ ಬದುಕನ್ನು ನೋಡುವ ಕ್ರಮ ಬೇರೆಯೇ ಆಗಿದೆ. ಹಲವು ಭಾಷೆಗಳ ಮೂಲಕ ಹಲವು ಜಗತ್ತುಗಳನ್ನು ಕಾಣಲು ಸಾಧ್ಯ. ಇಂದು ಬಹುತೇಕರು ಬಳಸುವ ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಗೊಳ್ಳುವ ಭಾಷೆಯ ಕುರಿತು ಹೆಚ್ಚು ತಿಳಿದುಕೊಳ್ಳುವ ಮುತುವರ್ಜಿ ಹೊಸ ಪೀಳಿಗೆಯಿಂದ ಆಗಲಿ’ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿದ ಸಿಯುಕೆ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ ಅವರು ಮಾತನಾಡಿ, ‘ಬಸವಣ್ಣನವರು ಕಲ್ಯಾಣ ಕಟ್ಟಿದ್ದು ಕಲ್ಯಾಣದಲ್ಲಿಯೇ ಹೊರತು ಬೆಂಗಳೂರಿನಲ್ಲಿ ಅಲ್ಲ. ಈ ನೆಲಕ್ಕೆ ಸಾಂಸ್ಕೃತಿಕ ಅಸ್ಮಿತೆಯನ್ನು ತಂದುಕೊಟ್ಟ ವಚನಗಳನ್ನು ಎ.ಕೆ.ರಾಮಾನುಜನ್, ಓ.ಎಲ್.ನಾಗಭೂಷಣ ಸ್ವಾಮಿ ಮೊದಲಾದವರು ಅನುವಾದದ ಮೂಲಕ ಹೊರ ಜಗತ್ತಿಗೆ ಪರಿಚಯಿಸಿದರು’ ಎಂದು ನುಡಿದರು.
‘ಮಾರ್ಕ್ವೆಜ್, ಶೆಲ್ಲಿ, ಕಬೀರ್, ಮೀರಾ ಮೊದಲಾದವರ ಅನುವಾದಗೊಂಡ ಬರೆಹ ನಾವು ಓದಿದಾಗ ಅವರೆಲ್ಲರೂ ಕನ್ನಡದವರೇ ಆಗಿದ್ದಾರೆ ಎಂದೆನಿಸುತ್ತದೆ. ಶ್ರೇಷ್ಠ ಅನುವಾದಕ್ಕೆ ಆಪ್ತತೆ ಒದಗುತ್ತದೆ. ಮೂಲ ಕೃತಿಯಷ್ಟೇ ಹತ್ತಿರವಾಗುತ್ತದೆ’ ಎಂದರು.’ದೀಪಾ ಭಾಸ್ತಿ ಅವರು ದಕ್ಷಿಣ ಏಷ್ಯಾದ ಮೊದಲ ಬೂಕರ್ ಪ್ರಶಸ್ತಿ ಪುರಸ್ಕೃತ ಅನುವಾದಕಿ. ಬಾನು ಮುಷ್ತಾಕ್ ಅವರ ಕೆಲವು ಕತೆಗಳು ಭಾಷಾಂತರ ಮಾಡಿ ಕನ್ನಡಕ್ಕೆ ಜಾಗತಿಕ ಮನ್ನಣೆ ತಂದು ಕೊಟ್ಟಿದ್ದಾರೆ. ಇಡೀ ಜಗತ್ತಿನ ಓದುಗ ವಲಯ ಕನ್ನಡದತ್ತ ನೋಡುವಂತಾಗಿದೆ’ ಎಂದು ತಿಳಿಸಿದರು.
‘ದೀಪಾ ಭಾಸ್ತಿ ಅವರು ಅನುವಾದ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ಹೊಸ ಕ್ರಮ ಸೇರಿಸಿ, ಭಾಷಿಕ ಮಡಿವಂತಿಕೆ ಮೀರಿ, ಅನುವಾದದ ಹಳೆಯ ದಾರಿಗಳನ್ನು ಬಿಟ್ಟು ಹೊಸ ದಾರಿ ಕಂಡುಕೊಂಡಿದ್ದಾರೆ. ಭಾಷೆಯ ಮಡಿವಂತಿಕೆ ಮೀರಿ ಬೆಳೆಯುವುದು ಸವಾಲಿನ ಸಂಗತಿ. ಅಂಥ ಸವಾಲು ದೀಪಾ ಅವರು ಸಾಧಿಸಿದ್ದಾರೆ’ ಎಂದರು.
‘ನಾವು ಇರುವ ಲೋಕದಲ್ಲಿ ಸುಖವಾಗಿ, ಸಂತೋಷವಾಗಿ ಇರದಿದ್ದರೆ ಎಲ್ಲಿಯೂ ಸಂತೋಷವಾಗಿರಲು ಸಾಧ್ಯವಿಲ್ಲ. ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪೂರ್ಣಚಂದ್ರ ತೇಜಸ್ವಿ, ಕೆ.ವಿ ಸುಬ್ಬಣ್ಣ, ಮಧುರಚೆನ್ನ ಮೊದಲಾದವರು ತಾವಿದ್ದ ಸಣ್ಣ-ಸಣ್ಣ ಹಳ್ಳಿಗಳನ್ನೇ ಸಾಂಸ್ಕೃತಿಕ ಲೋಕವಾಗಿಸಿದ್ದಾರೆ. ನಾವಿರುವ ಬಸವಕಲ್ಯಾಣದಂಥ ಊರುಗಳನ್ನೆ ಸಾಂಸ್ಕೃತಿಕ ಜಗತ್ತಾಗಿ ರೂಪಿಸಬೇಕು’ ಎಂದರು.
ಕಲಬುರಗಿಯ ಸಿಯುಕೆ ಸಹಾಯಕ ಪ್ರಾಧ್ಯಾಪಕ ಡಾ.ಪ್ರಕಾಶ ಬಾಳಿಕಾಯಿ ಅವರು ಮಾತನಾಡಿ, ಅನುವಾದಕ್ಕೆ ತನ್ನದೇ ಆದ ಸೌಂದರ್ಯ, ಮೀಮಾಂಸೆಯಿದೆ. ಕನ್ನಡದ ಅಸ್ಮಿತೆಯನ್ನು ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿ ನಿಲ್ಲಿಸಿದ ಶ್ರೇಯಸ್ಸು ದೀಪಾ ಭಾಸ್ತಿ ಅವರಿಗೆ ಸಲ್ಲುತ್ತದೆ. ಕನ್ನಡದ ಹಲವು ಪದಗಳು ಇಂಗ್ಲಿಷಿಗೆ ಒಯ್ದು ‘ಹಾರ್ಟ್ ಲ್ಯಾಂಪ್’ ಕೃತಿಯಲ್ಲಿ ದೀಪಾ ಅವರು ಹದವಾಗಿ ಬಳಸಿದ್ದಾರೆ’ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ದತ್ತಾತ್ರಿ ಮಡಿವಾಳಗೆ ಪಿಎಚ್.ಡಿ. ಪದವಿ
ಪ್ರತಿಷ್ಠಾನದ ನಿರ್ದೇಶಕ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ‘ಭಾರತೀಯ ಸಾಹಿತ್ಯ ಸಂದರ್ಭದಲ್ಲಿ ಭಾಷಾಂತರಕ್ಕೆ ಅದರದೇ ಆದ ಶಿಸ್ತು ಇದೆ. ಕನ್ನಡದಲ್ಲಿ ಅನುವಾದಕ್ಕೂ ಒಂದು ಪರಂಪರೆಯಿದೆ. ಈ ಪರಂಪರೆಯನ್ನು ಜಾಗತಿಕ ಸಾಹಿತ್ಯ ವಲಯಕ್ಕೆ ತಲುಪಿಸುವ ಮಹತ್ವದ ಕೆಲಸ ದೀಪಾ ಭಾಸ್ತಿ ಮಾಡಿದ್ದಾರೆ. ಇಡೀ ಜಗತ್ತು ಕನ್ನಡ ಸಾಹಿತ್ಯದ ಓದಿನತ್ತ ತಿರುವು ಪಡೆದಿರುವುದು ಸಂಭ್ರಮದ ಸಂಗತಿ. ಬಾನು ಮುಷ್ತಾಕ್ ಅವರ ಕತೆಗಳು ಇಂಗ್ಲಿಷ್ ಮೂಲಕ ಓದಿ ಕನ್ನಡದ ಸಾಹಿತ್ಯ ನಡೆಸುವ ಚಿಂತನೆ, ಚರ್ಚೆ, ಕನ್ನಡದ ತಾತ್ವಿಕ ಪ್ರಶ್ನೆಗಳು ಎಂತಹದು ಎಂಬುದನ್ನು ಕುರಿತು ಇಡೀ ಜಗತ್ತಿನ ಓದುಗರು ವಿವೇಚಿಸುವಂತೆ ಬೂಕರ್ ಪ್ರಶಸ್ತಿಯು ಮಾಡಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ಅಶೋಕ ಕುಮಾರ ವಣಗೀರೆ ಮಾತನಾಡಿದರು.
ಉಪ ಪ್ರಾಚಾರ್ಯ ಡಾ. ಅರುಣಕುಮಾರ ಯಲಾಲ್, ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ, ಸರ್ವಮಂಗಳಾ ವಿಸಾಜಿ, ಸ್ವರ್ಣಲತಾ ಹಿರೇಮಠ, ಒಡಿಸ್ಸಾದ ಶುಭಾಂಗಿ ಪಾತ್ರಾ ಮೊದಲಾದವರಿದ್ದರು. ಬಿಇಸಿ ರೆಜಿಸ್ಟ್ರಾರ್ ಪ್ರೇಮಸಾಗರ ಪಾಟೀಲ ಸ್ವಾಗತಿಸಿದರು. ವಿದ್ಯಾಸಾಗರ ಮೂಲಗೆ ನಿರೂಪಿಸಿದರು. ಡಾ.ಶಿವಾಜಿ ಮೇತ್ರೆ ವಂದಿಸಿದರು.





