ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಔರಾದ್ ತಾಲೂಕಿನ ಬಲ್ಲೂರ(ಜೆ) ಗ್ರಾಮದ ಬಸವರಾಜ ಕಂಟೆಪ್ಪಾ(34) ಮೃತರು. ಮೃತರಿಗೆ ತಂದೆ-ತಾಯಿ, ಪತ್ನಿ ಹಾಗೂ ಪುತ್ರ, ಪುತ್ರಿ ಇದ್ದಾರೆ ಎಂದು ತಿಳಿದು ಬಂದಿದೆ.
ಮೃತ ಬಸವರಾಜ ಅವರು ಸ್ವಗ್ರಾಮದಿಂದ ಕೌಠಾ(ಬಿ) ಗ್ರಾಮದ ಕಡೆ ತೆರಳುತ್ತಿದ್ದ ವೇಳೆ ಔರಾದ್‌ದಿಂದ ಬೀದರ್ ಕಡೆ ಹೋಗುತ್ತಿದ್ದ ಸಾರಿಗೆ ಬಸ್ ಹಿಂಬದಿಯಿಂದ ಬೈಕ್‌ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಬಸ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಕೊನೆಯುರೆಳೆದಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬೀದರ್ | VB-GRAM G ಮಸೂದೆ : ಡಿ.22ರಂದು ಸಂಸದರ ಕಚೇರಿ ಎದುರು ಪ್ರತಿಭಟನೆ
ವಿಷಯ ತಿಳಿದು ಘಟನಾ ಸ್ಥಳಕ್ಕೆ ಸಂತಪೂರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಸಂತಪೂರ ಸಮುದಾಯ ಆರೋಗ್ಯ ಕೇಂದ್ರದ ಶವಗಾರಕ್ಕೆ ರವಾನೆ ಮಾಡಿದ್ದರು. ಸಂತಪೂರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.





