ಔರಾದ್ ತಾಲೂಕಿನ ಬಲ್ಲೂರ(ಜೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆ ಸುಧಾರಣೆಗೆ ಸ್ಪಂದಿಸದ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಸೋಮವಾರ ಗ್ರಾಮದ ಮನೆ-ಮನೆಗೆ ಭಿಕ್ಷೆ ಬೇಡುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಬೆಳಿಗ್ಗೆ ಬಲ್ಲೂರ(ಜೆ) ಗ್ರಾಮದಲ್ಲಿ ಮನೆ-ಮನೆಗೆ ತೆರಳಿ ʼನಿಮ್ಮ ಗ್ರಾಮದ ಸರ್ಕಾರಿ ಶಾಲೆಗೆ ಮೂಲಸೌಕರ್ಯ ಕಲ್ಪಿಸಲು ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅದಕ್ಕೆ ನೀವು ದೇಣಿಗೆ ಕೊಡಿ, ಆ ಹಣದಿಂದ ನಾವಾದರೂ ನಿಮ್ಮೂರ ಶಾಲೆ ಸುಧಾರಣೆ ಮಾಡ್ತೇವೆʼ ಎಂದು ಹೇಳುತ್ತಾ ದೇಣಿಗೆ ಪಡೆದರು.
ಗ್ರಾಮದ ಒಂದು ಬಡಾವಣೆಗೆ ತೆರಳಿ ಭಿಕ್ಷೆ ಪಡೆದ ಕಾರ್ಯಕರ್ತರಿಗೆ ಕೆಲವರು ಸ್ಪಂದಿಸಿ ಹಣ ಹಾಕಿದ್ದಾರೆ. ಹೀಗಾಗಿ ಒಟ್ಟು ₹1,036 ಹಣ ಜಮೆಯಾಗಿದೆ ಎಂದು ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.
ʼಬಲ್ಲೂರ (ಜೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 1 ರಿಂದ 7ನೇ ತರಗತಿಯವರೆಗೆ ಇದೆ. ಈ ಶಾಲೆಯಲ್ಲಿ ಮೂರು ವರ್ಷಗಳ ಹಿಂದೆ 110 ಮಕ್ಕಳ ಸಂಖ್ಯೆ ಇತ್ತು. ಪ್ರಸಕ್ತ ವರ್ಷ ಆ ಸಂಖ್ಯೆ 19ಕ್ಕೆ ಕುಸಿದಿದೆ. ಶಾಲೆಯಲ್ಲಿ 4 ಕೊಠಡಿಗಳು ಶಿಥಿಲಗೊಂಡಿವೆ. ಇನ್ನು ಮೂಲಭೂತ ಸೌಕರ್ಯ ಕೊರತೆ ಕಾರಣಕ್ಕೆ ಪಾಲಕರು ಈ ಶಾಲೆಗೆ ಮಕ್ಕಳಿಗೆ ಸೇರಿಸಲು ಆಸಕ್ತಿ ತೋರುತ್ತಿಲ್ಲʼ ಎಂದು ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಹಣಮಂತ ಮಟ್ಟೆ ತಿಳಿಸಿದ್ದಾರೆ.
ʼಶಾಲಾ ಕೊಠಡಿ, ಮೂಲಸೌಕರ್ಯ ಸೇರಿದಂತೆ ಇತರೆ ಅವ್ಯವಸ್ಥೆ ಸರಿಪಡಿಸಬೇಕೆಂದು ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಕೌಠಾ(ಬಿ) ಗ್ರಾಮ ಪಂಚಾಯತಿ ಪಿಡಿಓ, ಜಿಲ್ಲಾ ಹಾಗೂ ತಾಲೂಕು ಪಂಚಾಯತಿಯ ಮುಖ್ಯ ಅಧಿಕಾರಿಗಳಿಗೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಮನವಿ ಪತ್ರ ಸಲ್ಲಿಸುತ್ತಿದ್ದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಸಣ್ಣ ಮಳೆಯಾದರೂ ಶಾಲಾ ಆವರಣದಲ್ಲಿ ನೀರು ಸಂಗ್ರಹಗೊಂಡು ಮಕ್ಕಳ ಓಡಾಟಕ್ಕೆ ತೊಂದರೆಯಾಗುತ್ತದೆʼ ಎಂದು ದೂರಿದ್ದಾರೆ.

ʼಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಇಂದು ಮೊದಲ ದಿನ ಒಂದು ಬಡಾವಣೆಯಲ್ಲಿ ಭಿಕ್ಷೆ ಬೇಡಿ ಹಣ ಸಂಗ್ರಹ ಮಾಡಲಾಗಿದೆ. ಇದೇ ರೀತಿ ಗ್ರಾಮದ ಎಲ್ಲಾ ಓಣಿಗಳಿಗೂ ತೆರಳಿ ಭಿಕ್ಷೆ ಬೇಡುವ ವಿನೂತನ ಅಭಿಯಾನ ಮುಂದುವರೆಯುತ್ತದೆ. ಆ ಹಣದಿಂದ ಶಾಲೆಯ ಶೌಚಾಲಯ, ಆಟದ ಮೈದಾನ, ಶುದ್ಧ ಕುಡಿಯುವ ನೀರು ಹಾಗೂ ತರಗತಿ ಕೊಠಡಿಗಳಂತಹ ಅಗತ್ಯ ಸೌಕರ್ಯಗಳ ಅಭಿವೃದ್ಧಿ ಮಾಡಿಸಲಾಗುವುದು. ದೇಣಿಗೆ ಹಣದ ಲೆಕ್ಕಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದುʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ದೆಹಲಿಯಲ್ಲಿ ಫೆ.12ರಂದು ಬುದ್ಧಗಯಾ ಮಹಾಬೋಧಿ ಮಹಾವಿಹಾರ ಮುಕ್ತಿಗಾಗಿ ಆಂದೋಲನ
ಈ ಅಭಿಯಾನದಲ್ಲಿ ಕೆಆರ್‌ಎಸ್ ಜಿಲ್ಲಾ ಉಪಾಧ್ಯಕ್ಷ ಶಿವರಾಜ ಶ್ರೀಮಂಗಲೇ, ಕಾರ್ಯದರ್ಶಿ ವಿಠ್ಠಲರಾವ ಚಟ್ನಳ್ಕರ್ ಹಾಗೂ ಸಂಜುಕುಮಾರ್ ತುಗಾಂವೆ ಭಾಗವಹಿಸಿದರು.





