ಭಾಲ್ಕಿ ತಾಲೂಕಿನ ನಿಟ್ಟೂರ(ಬಿ)- ಕೊಟಗ್ಯಾಳ ಮಾರ್ಗವಾಗಿ ಭಾಲ್ಕಿ, ಹಲಬರ್ಗಾ ಇತರೆ ಗ್ರಾಮಗಳಿಗೆ ತಲುಪುವ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿ ಬಿದ್ದು ತೀರ ಹಾಳಾಗಿದ್ದು ವಾಹನ ಸವಾರರು ಪ್ರಯಾಣಿಸಲು ಹರಸಾಹಸ ಪಡುವಂತಾಗಿದೆ.
ನಿಟ್ಟೂರ(ಬಿ) ಗ್ರಾಮದಿಂದ ಕೊಟಗ್ಯಾಳ, ಕೇರೂರ, ಅಮದಾಬಾದ್ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಡಾಂಬರ್ ಕಿತ್ತು ಹೋಗಿದ್ದು, ಸಂಪೂರ್ಣ ಹಾಳಾಗಿದೆ. ಮಳೆ ಬಂದರೆ ರಸ್ತೆಯ ಗುಂಡಿಗಳು ಸಣ್ಣ ಕೆರೆಗಳನ್ನು ಮೀರಿಸುವಂತಿವೆ.

ಬೈಕ್ ಸವಾರರು ಗುಂಡಿಗಳಲ್ಲಿ ಬಿದ್ದು ಗಾಯಗೊಂಡಿರುವ ಘಟನೆಗಳು ಜರುಗಿವೆ, ಅಷ್ಟರ ಮಟ್ಟಿಗೆ ಈ ರಸ್ತೆ ಅದ್ವಾನಗೊಂಡಿದೆ. ಈ ರಸ್ತೆಯಲ್ಲಿ ಶಾಲಾ ಮಕ್ಕಳ ವಾಹನ, ಸಾರಿಗೆ ಬಸ್ ಸೇರಿದಂತೆ ನಿತ್ಯ ನೂರಾರು ಜನರು ಓಡಾಡುವ ಮುಖ್ಯರಸ್ತೆಯಾಗಿದೆ. ಕೂಡಲೇ ರಸ್ತೆ ಗುಂಡಿ ಮುಚ್ಚುವಂತೆ ವಿದ್ಯಾರ್ಥಿ ಮುಖಂಡ ಜಾವೀದ್ ನಿಟ್ಟೂರ್ ಆಗ್ರಹಿಸಿದ್ದಾರೆ.
ಹದಗೆಟ್ಟ ಹೆಡಗಾಪುರ-ನಿಟ್ಟೂರ(ಬಿ) ರಸ್ತೆ :
ಔರಾದ್ ತಾಲೂಕಿನ ಹೆಡಗಾಪುರ ಗ್ರಾಮದಿಂದ ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯುದ್ದಕ್ಕೂ ಡಾಂಬಾರು ಕಿತ್ತು ಬಂದಿದೆ. ಅಲ್ಲಲ್ಲಿ ಮೊಳಕಾಲುದ್ದ ಗುಂಡಿ ಬಿದ್ದಿದ್ದು, ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ರಸ್ತೆ ಸುಧಾರಣೆಗೆ ಮುಂದಾಗಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಕಸದ ರಾಶಿ :
ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿನ ಜನವಾಡ ಗ್ರಾಮದ ಸರ್ವಿಸ್ ರಸ್ತೆಯಲ್ಲಿ ಕಸದ ರಾಶಿ ಸಂಗ್ರಹವಾಗಿದ್ದು, ಈ ರಸ್ತೆ ಸಂಚರಿಸುವವರಿಗೆ ತುಂಬಾ ಕಿರಿಕಿರಿಯಾಗುತ್ತಿದೆ.

ಮುಖ್ಯರಸ್ತೆ ರಸ್ತೆಯ ಒಂದು ಭಾಗದಲ್ಲಿ ಬಡಾವಣೆಯ ನಿವಾಸಿಗಳು ತ್ಯಾಜ್ಯ ತಂದು ಸರ್ವಿಸ್ ರಸ್ತೆಯಲ್ಲಿ ಎಸೆಯುತ್ತಿದ್ದಾರೆ. ಇದರಿಂದ ಹಂದಿ, ನಾಯಿಗಳ ಹೆಚ್ಚು ಓಡಾಡುತ್ತಿದ್ದು, ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ.ಜೊತೆಗೆ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ.
ಈ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಇನ್ನು ಹೆದ್ದಾರಿ ಪ್ರಾಧಿಕಾರವೂ ಮೌನವಹಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಹಣಮಂತ ಮಟ್ಟೆ ಒತ್ತಾಯಿಸಿದ್ದಾರೆ.
ಸರಾಯಿ ಅಂಗಡಿ ಸ್ಥಳಾಂತರಕ್ಕೆ ಆಗ್ರಹ :
ಬೀದರ್ – ಔರಾದ್ ರಾಷ್ಟೀಯ ಹೆದ್ದಾರಿಯಲ್ಲಿ ಬರುವ ಜನವಾಡ ಗ್ರಾಮದಲ್ಲಿ ಮುಖ್ಯರಸ್ತೆಯ ಪಕ್ಕದಲ್ಲಿ ʼದುರ್ಗಾ ವೈನ್ಸ್ʼ ಇದ್ದು, ಇದರಿಂದ ಈ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಸಂಬಂಧ ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರ, ಸರ್ಕಾರಿ ಆದರ್ಶ ವಿದ್ಯಾಲಯ, ಪಶು ಆಸ್ಪತ್ರೆ ಅಧಿಕಾರಿಗಳು ಹಾಗೂ ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಿಲ್ಲಾ ಘಟಕದಿಂದ ಸರಾಯಿ ಅಂಗಡಿ ಸ್ಥಳಾಂತರಕ್ಕೆ ಒತ್ತಾಯಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಬೀದರ್ ಸೇರಿದಂತೆ ನಾನಾ ಕಡೆಯಿಂದ ಜನವಾಡ ಗ್ರಾಮದ ಸರ್ಕಾರಿ ಆದರ್ಶ ಶಾಲೆಗೆ ಮಕ್ಕಳು, ಶಿಕ್ಷಕರು ಆಗಮಿಸುತ್ತಾರೆ. ಅದೇ ರಸ್ತೆಯಲ್ಲಿ ಸರಾಯಿ ಅಂಗಡಿ ಇರುವ ಕಾರಣ ಸರಾಯಿ ಖರೀದಿಸಿ ದಾರಿಯಲ್ಲಿ ಕುಳಿತು ಮದ್ಯ ಸೇವಿಸುವ ಜನರಿಂದ ವಿದ್ಯಾರ್ಥಿ, ಶಿಕ್ಷಕರಿಗೆ ಅಡ್ಡಿಯಾಗುತ್ತಿದೆ. ಇನ್ನು ಸರಾಯಿ ಖರೀದಿಸಿ ರಾತ್ರಿ ವೇಳೆ ಸಮೀಪದಲ್ಲಿರುವ ರೈತ ಸಂಪರ್ಕ ಕೇಂದ್ರ, ಪಶು ಆಸ್ಪತ್ರೆ ಕಚೇರಿಗೆ ತೆರಳಿ ಸೇವಿಸಿ ಮದ್ಯದ ಬಾಟಲಿಗಳನ್ನು ಒಡೆಯುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ, ಕಚೇರಿ ಸಿಬ್ಬಂದಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.

ಸರಾಯಿ ಅಂಗಡಿ ಹೆದ್ದಾರಿ ಪಕ್ಕದಲ್ಲೇ ಇರುವ ಕಾರಣ ಜನದಟ್ಟಣೆ ಆಗುತ್ತಿದ್ದು, ವಾಹನ ಸವಾರರಿಗೂ ಅಡಚಣೆಯಾಗುತ್ತಿದೆ. ಇದರಿಂದ ಈ ಹಿಂದೆ ಅಪಘಾತಗಳು ಸಂಭವಿಸಿದ ಉದಾಹರಣೆಗಳು ಇವೆ. ಶಾಲಾ ವಿದ್ಯಾರ್ಥಿಗಳ, ಸಾರ್ವಜನಿಕರ ಹಿತದೃಷ್ಟಿಯಿಂದ ಸರಾಯಿ ಅಂಗಡಿಯನ್ನು ಕೂಡಲೇ ಬೇರೆಡೆ ಸ್ಥಳಾಂತರಿಸಬೇಕೆಂದು ಗ್ರಾಮದ ಮುಖಂಡ ರವೀಂದ್ರ ಬಂಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೀದರ್ | ತಬಲಾ ವಾದಕ ಮಡಿವಾಳಯ್ಯ ಸಾಲಿಗೆ ಒಲಿದ ರಾಜೋತ್ಸವ ಪ್ರಶಸ್ತಿ
– ನಿಮ್ಮ ಊರು, ನಗರ, ಪಟ್ಟಣದ ಕುಂದು ಕೊರತೆಗಳ ಪೋಟೋ, ವಿಡಿಯೋ ಮಾಹಿತಿಯನ್ನು
ಈದಿನ.ಕಾಮ್ ನ್ಯೂಸ್ ಬೀದರ್ ಸಹಾಯವಾಣಿ 9035053805 ವಾಟ್ಸಪ್ ನಂಬರ್‌ಗೆ ಕಳುಹಿಸಿ.





