ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದು ಅವಮಾನ ಮಾಡಿರುವ ವಕೀಲ ರಾಕೇಶ್ ಕಿಶೋರ್ ವಿರುದ್ಧ ದೇಶದ್ರೋಹದಡಿ ಪ್ರಕರಣ ದಾಖಲಿಸಿ, ಜೀವಾವಧಿ ಶಿಕ್ಷೆ ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಮತ್ತು ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಾಮಾಜಿಕ ಪರಿವರ್ತನಾ ಸಂಘದ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಸಂಬಂಧ ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ರಾಷ್ಟ್ರಪತಿ ಹಾಗೂ ಪ್ರಧಾನಿ ಮಂತ್ರಿಗಳ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು.
ದೇಶದ ನ್ಯಾಯಾಂಗ ವ್ಯವಸ್ಥೆಯ ಉನ್ನತ ಹುದ್ದೆಯಲ್ಲಿರುವ ಸಿಜೆಐ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆತ ಘಟನೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಡೆದ ದಾಳಿಯಾಗಿದೆ. ಇದು ಭಾರತದ ಸಂವಿಧಾನಕ್ಕೆ ಮಾಡಿರುವ ಬಹುದೊಡ್ಡ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼಈ ಕೃತ್ಯ ಎಸಗಿದ ವಕೀಲ ರಾಕೇಶ್ ಕಿಶೋರ್‌ನಿಗೆ ಕಠಿಣ ಜೀವವಾದಿ ಶಿಕ್ಷೆ ವಿಧಿಸಬೇಕು. ವಕೀಲನ ಪರವಾನಿಗೆ ರದ್ದುಗೊಳಿಸಿ ದೇಶದ್ರೋಹಿ ಪ್ರಕರಣ ದಾಖಲಿಸಿ, ಗಡಿಪಾರು ಮಾಡಬೇಕು. ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಸಂಘದ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದುʼ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಡಾ.ಅಮೃತರಾವ್ ಮೋಳಕೆರೆ, ಜಿಲ್ಲಾಧ್ಯಕ್ಷ ಬಬ್ರುವಾನ ಬೆಳಮಗಿ, ರಾಜ್ಯ ಗೌರವಾಧ್ಯಕ್ಷ ಭೀಮರಾವ್ ಯಸ್ ಮೂಳಕೆರೆ ಪ್ರಮುಖರಾದ ಶಿವಕುಮಾರ್ ಬೌದ್ದೆ, ಸುಮನ್ ಸಿಂದೆ, ಪಂಚಶೀಲ ಹುಡುಗಿ, ರಮಾಬಾಯಿ, ಸುಶೀಲಮ್ಮ, ಸುಲೋಚನ, ವಿಜಯಲಕ್ಷ್ಮಿ, ರೇಣುಕಾ, ಬಬಿತಾ, ಪ್ರವೀಣ ಗುಪ್ತ, ಮಾಣಿಕರಾವ ಪವಾರ್, ಚಂದ್ರಕಾಂತ ಭಾವಿದೊಡ್ಡಿ , ಅಂತಪ್ಪ ಗುಬ್ಬೆ, ಸಂಜು ಕಾಂಬಳೆ, ಚಂದ್ರಕಾಂತ್ ಮಾಳಿಗೆ, ಮುಕೇಶ್ ಸೂರ್ಯವಂಶಿ, ಸಂತೋಷ್ ದೊಡ್ಡಕೆ, ರಾಮಣ್ಣ ಅರಸ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ : ಬೀದರ್ | ಸಿಜೆಐ ಗವಾಯಿ ಮೇಲೆ ಶೂ ಎಸೆದ ಪ್ರಕರಣ : ಎಸ್ಸಿ, ಎಸ್ಟಿ ನೌಕರರ ಸಮಿತಿ ಖಂಡನೆ





