ವಕೀಲರು ಕನ್ನಡದಲ್ಲಿ ವಾದ ಮಾಡಬೇಕು. ವಾದಪತ್ರ ಕನ್ನಡದಲ್ಲಿ ಮಂಡಿಸಬೇಕು. ತೀರ್ಪುಗಳು ಕೂಡ ಕನ್ನಡದಲ್ಲಿಯೇ ನೀಡುವುದರ ಮೂಲಕ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದು ತಾಲೂಕು ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ವಿನಾಯಕ ವಾನಖಂಡೇ ನುಡಿದರು.
ಔರಾದ್ ಪಟ್ಟಣದ ವಕೀಲರ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕಾನೂನು ಸೇವೆಗಳ ಸಮಿತಿ ಹಾಗೂ ತಾಲೂಕು ವಕೀಲರ ಸಂಘ ಸಹಯೋಗದೊಂದಿಗೆ ನಡೆದ ಕನ್ನಡದಲ್ಲಿ ನ್ಯಾಯದ ಬೆಳಕು ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ʼಕನ್ನಡಿಗರೆಲ್ಲರೂ ಕನ್ನಡ ಭಾಷೆಯಲ್ಲಿ ಮಾತನಾಡಿದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ. ಗಡಿಭಾಗದಲ್ಲಿ ನಾವೆಲ್ಲರೂ ನಾಡು-ನುಡಿ-ಸಂಸ್ಕೃತಿ ಉಳಿವಿಗಾಗಿ ಶ್ರಮಿಸಬೇಕು ಎಂದು ಅವರು, ಬಳಿಕ ಡಿ.13 ರಂದು ನಡೆಯುವ ಬೃಹತ್ ಲೋಕ ಅದಾಲತ್‌ನ ಸಂಬಂಧಿತ ವಿವರಗಳ ಮಾಹಿತಿ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಬಾಲಾಜಿ ಕಂಬಾರ ಮಾತನಾಡಿ, ʼಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ಭವ್ಯ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆ ಮತ್ತು ಸಂಸ್ಕೃತಿ ನಮ್ಮ ಉಸಿರಾಗಬೇಕು. ಕನ್ನಡದಲ್ಲಿಯೇ ವಾದ ಮಾಡುವ ತೀರ್ಪುಗಳ ನೀಡುವುದರಿಂದ ನಿತ್ಯ ನಿರಂತರ ಕನ್ನಡ ಬಳಕೆಯಾಗಲಿದೆʼ ಎಂದರು.
ಅಮರೇಶ್ವರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಆರ್.ಪಿ ಮಠ ಮಾತನಾಡಿ, ʼಕನ್ನಡ ನಾಡಿನ ಸಂಸ್ಕೃತಿ ಸಂಸ್ಕಾರದ ಪ್ರತಿಬಿಂಬದಂತಿದ್ದು, ಕರ್ನಾಟಕದಲ್ಲಿ ನ್ಯಾಯದ ಬೆಳಕು ಕನ್ನಡದಲ್ಲಿ ಮೂಡಿ ಬರಬೇಕುʼ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನಸಾಬ ಯಾದವಾಡ ಅವರು ಸಮಾರಂಭ ಉದ್ಘಾಟಿಸಿದರು. ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ ಪ್ರಾಸ್ತಾವಿಕ ಮಾತನಾಡಿದರು.

ಇದನ್ನೂ ಓದಿ : ಬೀದರ್ | ಆರ್‌ಎಸ್‌ಎಸ್ ಮನುವಾದ ಖಂಡಿಸಿ ದಸಂಸ ಪ್ರತಿಭಟನೆ
ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಅಧ್ಯಕ್ಷ ಸಂಜೀವ ಶಟಕಾರ, ಸಹಾಯಕ ಸರ್ಕಾರಿ ಅಭಿಯೋಜಕ ಶಿವರಾಜ ಶಟಕಾರ, ಅಮರಸ್ವಾಮಿ ಸ್ಥಾವರಮಠ, ಅಂಬಾದಾಸ ನಳಗೆ, ನರೇಶಕುಮಾರ್ ಸೇರಿದಂತೆ ಇನ್ನಿತರರಿದ್ದರು.





