3,900 ಕ್ಕೂ ಹೆಚ್ಚು ಗಣಿತ ಸೂತ್ರಗಳು ರಚಿಸುವ ಮೂಲಕ ಶ್ರೀನಿವಾಸ್ ರಾಮಾನುಜನ್ ಅವರು ಜಾಗತಿಕ ಗಣಿತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸರಳ ಪದ್ಧತಿಯ ಮೂಲಕ ಲೆಕ್ಕ ಮಾಡುವುದನ್ನು ಕಲಿಸಿದ ರಾಮಾನುಜನ್ ಗಣಿತವನ್ನು ಸರಳೀಕರಿಸದರು. ಅವರ ಹೆಸರಿನ ಮೇಲೆ ನಿರ್ಮಿಸಲಾದ ʼಗಣಿತ ಉದ್ಯಾನʼ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾಗಲಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ನುಡಿದರು.
ಬುಧವಾರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಗದಲ್‌ನಲ್ಲಿ ಶ್ರೀನಿವಾಸ ರಾಮಾನುಜನ್ ಗಣಿತ ಉದ್ಯಾನ ಉದ್ಘಾಟಿಸಿ ಅವರು ಮಾತನಾಡಿದ ಅವರು, ʼಗಣಿತ ಕ್ಲೀಷ್ಟಕರವಲ್ಲ, ಬದಲಾಗಿ ಅತಿ ಸರಳ ಎನ್ನುವುದನ್ನು ವಿನ್ಯಾಸಗಳ ಮೂಲಕ ಈ ಗಣಿತ ಉದ್ಯಾನ ಕಲಿಸಿಕೊಡುತ್ತದೆ. ಇದನ್ನು ಅರ್ಥೈಸಿಕೊಂಡು ಮಕ್ಕಳು ಗಣಿತ ಮತ್ತು ಇತರೆ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ಕೀರ್ತಿ ತರಬೇಕು. ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರಂತರ ಶತ ಪ್ರತಿಶತ ಫಲಿತಾಂಶ ನೀಡುತ್ತಿರುವುದು ಶ್ಲಾಘನೀಯ. ಈ ವರ್ಷ 10 ರಲ್ಲಿ 3 ರ‍್ಯಾಂಕ್ ನೀಡಲು ಪ್ರಯತ್ನಿಸಬೇಕುʼ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನೀತಾ ಪಟವಾಡಿ ಮಾತನಾಡಿ, ʼಗಣಿತ ಅತ್ಯಂತ ಕಠಿಣ ಅನ್ನುವ ತಪ್ಪು ಕಲ್ಪನೆ ಜನಜನಿತವಾಗಿದೆ. ಗಣಿತವನ್ನು ಪ್ರೀತಿಸಿದರೆ ಅದರಷ್ಟು ಸರಳ ವಿಷಯ ಮತ್ತೊಂದಿಲ್ಲ. ಜೀವನದ ಸಂಕೀರ್ಣ ಸಮಸ್ಯೆ ಬಿಡಿಸುವ ಮನೋಬಲ ತುಂಬುವ ಗಣಿತವನ್ನು ಆಸಕ್ತಿಯಿಂದ ಕಲಿಯಬೇಕುʼ ಎಂದು ಕಿವಿಮಾತು ಹೇಳಿದರು.

ಪ್ರಾಚಾರ್ಯ ಚೆನ್ನಬಸವ ಹೇಡೆ ಪ್ರಾಸ್ತಾವಿಕವಾಗಿ ಮಾತನಾಡಿ, ʼಗಣಿತ ಉದ್ಯಾನದ ಮೂಲಕ ಕಠಿಣ ಪರಿಕಲ್ಪನೆ ಸರಳೀಕರಣಗೊಳಿಸುವ ಕಾರ್ಯ ಮಾಡಲಾಗಿದೆ. ಅಧ್ಯಯನದಲ್ಲಿ ಆಸಕ್ತಿ ಹೆಚ್ಚಿಸಲು ಇದು ಪೂರಕವಾಗಿದೆ. ಈ ಉದ್ಯಾನದ ಸದುಪಯೋಗ ಮಕ್ಕಳು ಪಡೆದುಕೊಂಡರೆ ಉದ್ಯಾನ ನಿರ್ಮಿಸಿದಕ್ಕೂ ಸಾರ್ಥಕವಾಗುತ್ತದೆʼ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಸತಿ ಶಾಲೆಯಿಂದ ವರ್ಗಾವಣೆ ಹೊಂದಿದ ಗಣಿತ ಶಿಕ್ಷಕಿ ನಜಿಮಾ ಪರವಿನ್ ಹಾಗೂ ಉಪ ಪ್ರಾಂಶುಪಾಲರಾಗಿ ನಿಯುಕ್ತರಾದ ಗೌತಮ ಕುದರೆ ಅವರನ್ನು ಸನ್ಮಾನಿಸಲಾಯಿತು. ಉದ್ಯಾನ ಲೋಕಾರ್ಪಣೆ ಪ್ರಯುಕ್ತ ವಿದ್ಯಾರ್ಥಿಗಳು ತಯ್ಯಾರಿಸಿದ 25 ಗಣಿತ ಮಾದರಿಗಳ ಪ್ರದರ್ಶನ ಮತ್ತು ವಿವರಣೆ ನಡೆಸಿಕೊಡಲಾಯಿತು.
ಇದನ್ನೂ ಓದಿ : ಬಾಲಗಂಗಾಧರ ತಿಲಕರ ‘ಭಗವದ್ಗೀತಾವಾದ’ ಬಗ್ಗುಬಡಿದ ಬಾಬಾಸಾಹೇಬರು
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸಂಗೀತಾ ಬಿರಾದಾರ, ಕ್ರೈಸ್ ಜಿಲ್ಲಾ ಸಮನ್ವಯ ಅಧಿಕಾರಿ ಶರಣಪ್ಪ ಬಿರಾದಾರ, ಪ್ರಾಂಶುಪಾಲ ಗೋವಿಂದ ತಾಮಗೋಳೆ, ವೀರಭದ್ರಪ್ಪ ಮಾಶೆಟ್ಟಿ, ವಿಜಯಕುಮಾರ ಅಕ್ಕಣ್ಣ, ಹಾವಪ್ಪ ಅಬ್ಬೆಂದೆ, ಪ್ರದೀಪ ನಿಡೋದೆ, ಸಿದ್ಧಲಿಂಗಯ್ಯ ಮಠಪತಿ, ಅಶೋಕ ರಾಠೋಡ, ಮಾಣಿಕ ಸಾಗರ, ಮುದಾಸ್ಸಿರ್ ಅಲಿ, ಶ್ರೀದೇವಿ ಸಾಲಿಮಠ, ಸವಿತಾ ಮಾಶೆಟ್ಟಿ, ವೈಭವಿ ಮಾಣಿಕ, ಶ್ರಾವಂತಿ ಅಂಬೆಸಿಂಗೆ, ಶಿವರಾಜ ನಳಗೀರೆ, ವಸಂತ ರಾಠೋಡ ಸೇರಿದಂತೆ ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.





