ಬಸವಕಲ್ಯಾಣದಲ್ಲಿನಡೆಯಲಿರುವ 46ನೇ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ-2025ರ ನಿಮಿತ್ಯ ಹಮ್ಮಿಕೊಂಡಿರುವ ಸೈಕಲ್ ಜಾಥಾ ಕಾರ್ಯಕ್ರಮವನ್ನು ಬೀದರ ಲೋಕಸಭಾ ಸದಸ್ಯ ಸಾಗರ ಖಂಡ್ರೆ ಅವರು ಉದ್ಘಾಟಿಸಿದರು.
ಬಸವೇಶ್ವರ ವೃತ್ತದಿಂದ ಅನುಭವ ಮಂಟಪದವರೆಗೆ ನಡೆದ ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿ, ʼಇಂದಿನ ಯುವಪೀಳಿಗೆ ಸಾಧ್ಯವಾದಷ್ಟು ಸೈಕಲ್ ಬಳಕೆ ಮಾಡಬೇಕು. ಸ್ಥಳೀಯ ಓಡಾಟಕ್ಕೆ ಸೈಕಲ್ ಬಳಸುವುದು ಉತ್ತಮ. ಸೈಕಲ್ ಬಳಸಿದರೆ ಪರಿಸರ ಹಾಗೂ ದೇಹದ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆʼ ಎಂದು ನುಡಿದರು.
ಪರಿಸರ ಸಂರಕ್ಷಣೆ, ಮಾಲಿನ್ಯ ತಡೆ ಮತ್ತು ಆರೋಗ್ಯಕರ ಜೀವನಶೈಲಿಗೆ ಇಂತಹ ಜಾಗೃತಿ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದ ಅವರು ಸೈಕಲ್ ಜಾಥಾದಲ್ಲಿ ಸ್ವತಃ ಭಾಗವಹಿಸಿ, ಪರಿಸರ ಸ್ನೇಹಿ ಸಂಚಾರದ ಅಗತ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಿದರು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼಸೈಕಲ್ ಬಳಕೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದು, ಪರಿಸರವನ್ನು ಸಂರಕ್ಷಿಸುವುದು ಮತ್ತು ಸಾರಿಗೆಗೆ ಒಂದು ಸುಲಭ, ಕೈಗೆಟುಕುವ ವಿಧಾನವನ್ನು ಒದಗಿಸುವುದಾಗಿದೆ. ಇದು ಸ್ನಾಯುಗಳನ್ನು ಬಳಪಡಿಸಲು ತೂಕವನ್ನು ನಿಯಂತ್ರಿಸಲು, ಹೃದ್ರೋಗದ ಅಪಾಯ ಕಡಿಮೆ ಸೇರಿದಂತೆ ಜೀವನಶೈಲಿಯನ್ನು ಸುಧಾರಿಸಲು ಸಹಕಾರಿಯಾಗಿದೆ. ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಎಲ್ಲರೂ ʼಸೈಕಲ್ ಬಳಸೋಣ ಪರಿಸರ ಉಳಿಸೋಣʼ ಎಂದು ತಿಳಿಸಿದರು.
ಹುಲಸೂರಿನ ಶಿವಾನಂದ ಮಹಾಸ್ವಾಮೀಜಿ, ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು. ಶಾಸಕ ಶರಣು ಸಲಗರ ಅವರು ಅಧ್ಯಕ್ಷತೆ ವಹಿಸಿದರು. ತಹಸೀಲ್ದಾರ್ ದತ್ತಾತ್ರೇಯ ಗಾಧಾ ಅವರು ಬಸವಗುರುಪೂಜೆ ನೆರವೇರಿಸಿದರು. ಸೈಕಲ್ ಜಾಥಾದಲ್ಲಿ ಪಾಲ್ಗೊಂಡ ಎಲ್ಲರಿಗೂ ಅನುಭವ ಮಂಟಪದಲ್ಲಿ ಪ್ರಮಾಣ ಪತ್ರ ನೀಡಲಾಯಿತು.
ಇದನ್ನೂ ಓದಿ : ಬೀದರ್ | ಡಿ.6ರಂದು ಡಾ.ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನ : ಪದಾಧಿಕಾರಿಗಳ ಆಯ್ಕೆ
ಸೈಕಲ್ ಜಾಥಾದಲ್ಲಿ ಪೂಜ್ಯರು, ಗಣ್ಯರು ಹಾಗೂ ಶಾಲಾ-ಕಾಲೇಜು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾಥಾ ಯಶಸ್ವಿಗೊಳಿಸಿದರು. ಸೈಕಲ್ ಜಾಥಾ ಅಧ್ಯಕ್ಷ ಲಕ್ಷ್ಮಿಕಾಂತ ಜ್ಯಾಂತೆ ಸ್ವಾಗತಿಸಿದರು. ನವಲಿಂಗ ಪಾಟೀಲ ವಚನ ಗಾಯನ ನಡೆಸಿಕೊಟ್ಟರು. ದೀಪಕ ಠಮಕೆ ನಿರೂಪಿಸಿದರು.





