2025ರ ಡಿಸೆಂಬರ್ 7ರಂದು ಮಹಾರಾಷ್ಟ್ರದ ಉಸ್ಮಾನಾಬಾದನಲ್ಲಿ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ವತಿಯಿಂದ ಲಿಂಗಾಯತ ಮಹಾರ‍್ಯಾಲಿ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ನುಡಿದರು.
ಬಸವಕಲ್ಯಾಣ ನಗರದ ಸಸ್ತಾಪುರ ಬಂಗ್ಲಾ ಸಮೀಪದ ಎಂ.ಎಂ. ಬೇಗ್ ಸಭಾಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ಸಹಯೋಗದಲ್ಲಿ ನಡೆd 4ನೇ ಸ್ವಾಭಿಮಾನಿ ಕಲ್ಯಾಣ ಪರ್ವದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಬೀದರ್ ಬಸವ ಮಂಟಪದ ಮಾತೆ ಸತ್ಯಾದೇವಿ ಅವರು ಮಾತನಾಡಿ, ʼಗುರು ಭಕ್ತಿಯನ್ನು ಮೈಗೂಡಿಸಿಕೊಂಡು ಶರಣರಿಗೆ ಶರಣಾರ್ಥಿ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂಘಟನೆ ಒಡೆಯದಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು. ರಾಷ್ಟ್ರೀಯ ಬಸವ ದಳ ಇಂದಿಗೂ ಗಟ್ಟಿಯಾಗಿರಲು ಧರ್ಮಶೃದ್ಧೆ, ತತ್ವನಿಷ್ಠೆ ಹಾಗೂ ಲಿಂಗಾನಂದ ಸ್ವಾಮೀಜಿ ಮತ್ತು ಮಾತೆ ಮಹಾದೇವಿ ಅವರ ಕಠಿಣ ಪರಿಶ್ರಮ ಕಾರಣವಾಗಿದೆ. ಸಂಘಟನೆಗೆ ಇನ್ನೂ ಹೆಚ್ಚಿನ ಒತ್ತುಕೊಡಿʼ ಎಂದು ತಿಳಿಸಿದರು.
ಚಿಕ್ಕಮುನವಳ್ಳಿಯ ಶಿವಪುತ್ರ ಸ್ವಾಮೀಜಿ ಮಾತನಾಡಿ, ʼದೇವನೊಬ್ಬನೇ ತಂದೆ, ಮನುಷ್ಯರೆಲ್ಲರೂ ಒಂದೇ ಎನ್ನುವ ಶರಣರ ಸಂದೇಶ ಎಲ್ಲಾ ಧರ್ಮಿಯರಿಗೂ ಅನ್ವಯಿಸುತ್ತದೆ. ಏಕದೇವೋಪಾಸಕರಾಗಿ ಬದುಕಬೇಕು. ಬಸವಕಲ್ಯಾಣದ ಮಣ್ಣು ಹಣೆಗೆ ಹಚ್ಚಿಕೊಂಡರೆ ಬದುಕು ಸಾರ್ಥಕವಾಗುತ್ತದೆ. ಅವಿಮುಕ್ತ ಕ್ಷೇತ್ರ ಬಸವಕಲ್ಯಾಣವನ್ನು ಅಂತರಾಷ್ಟ್ರೀಯ ತಾಣವಾಗಿ ಮಾಡಲು ಎಲ್ಲರೂ ಪ್ರಯತ್ನಿಸಬೇಕುʼ ಎಂದರು.
ಖಾದ್ರಿ ವೆಲ್ಫೇರ್ ಸೊಸೈಟಿ ಧಾರವಾಡದ ಉಪಾಧ್ಯಕ್ಷ ಸೂಫಿ ಸಂತ ಪಿರೆ ತರಿಕತ್ ಅಬ್ದುಲ್ ರಜಾಕ್ ಮಾತನಾಡಿ, ʼಚನ್ನಬಸವಾನಂದ ಸ್ವಾಮೀಜಿ ಕಾರ್ಯ ಶ್ಲಾಘನೀಯ. ಅವರ ಹೋರಾಟಕ್ಕೆ ಎಲ್ಲರೂ ಸಹಕರಿಸಬೇಕೆಂದು ತಿಳಿಸಿದರು.
ಆರು ನಿರ್ಣಯ ಮಂಡನೆ :
ಡಿ. 7ರಂದು ಮಹಾರಾಷ್ಟ್ರದ ಉಸ್ಮಾನಾಬಾದನಲ್ಲಿ ಲಿಂಗಾಯತ ಮಹಾರ‍್ಯಾಲಿ ಆಯೋಜನೆ. 2026ರ ಜನವರಿ ತಿಂಗಳಲ್ಲಿ ಲಿಂಗಾಯತ ಧರ್ಮಕ್ಕೆ ಮಾನ್ಯತೆಗಾಗಿ ʼದಿಲ್ಲಿ ಚಲೋʼ ಆಯೋಜನೆ. ನ್ಯಾ. ಗವಾಯಿ ಮೇಲೆ ಶೂ ಎಸೆದ ವಕೀಲ ಕಿಶೋರ ಮೇಲೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಹೋರಾಟ. ಕನ್ಹೇರಿ ಮಠದ ಸ್ವಾಮಿಗಳು ಬಸವತತ್ವದ ಸ್ವಾಮಿಗಳಿಗೆ ಅವಹೇಳನ ಮಾಡಿದ್ದು ಖಂಡಿಸುತ್ತೇವೆ. ನವೆಂಬರ್ ನಿಂದ ಕರ್ನಾಟಕ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಆರು ರಾಜ್ಯಗಳಲ್ಲಿ ಲಿಂಗಾಯತ ಧರ್ಮ ಜಾಗೃತಿ ಅಭಿಯಾನ ಆರಂಭಿಸುವುದು ಮತ್ತು ನವೆಂಬರ್ 14ಕ್ಕೆ ದುಬೈನಲ್ಲಿ ಚನ್ನಬಸವೇಶ್ವರ ಜಯಂತಿ ಆಚರಣೆ ಮಾಡುವ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕಲ್ಯಾಣಮಹಾಮನೆ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಮಾತೆ ಶಾಂತಾದೇವಿ, ಭಾಗ್ಯವಂತಿ ಮಾತಾಜಿ ಬೀದರ, ಪ್ರಮುಖರಾದ ಎಸ್.ದಿವಾಕರ್, ಬಸವರಾಜ ಪಾಟೀಲ ಶಿವಪುರ, ಶಶಿಕುಮಾರ ಪಾಟೀಲ, ಬಸವರಾಜ ಪಾಟೀಲ ಚಿಕ್ಕಪೇಟ, ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಕೆ.ಶರಣಪ್ರಸಾದ ಬೆಳಗಾವಿ, ಜೈರಾಜಹತ್ತಿ, ಸೇರಿದಂತೆ ಹಲವರಿದ್ದರು. ನಿವೃತ್ತ ಕೃಷಿ ವಿವಿ ಡೀನ್ ಡಾ.ಸುರೇಶ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಅಕ್ಕನಾಗಲಾಂಬಿಕಾ ಮಹಿಳಾ ಗಣದ ಶರಣೆಯರಿಂದ ಬಸವ ಪೂಜೆ ನೆರವೇರಿತು. ಶಿವಕುಮಾರ ಪಾರಾ ನಿರೂಪಿಸಿದರು. ಜ್ಯೊತಿ ಕಟಾಳೆ ಸ್ವಾಗತಿಸಿದರು. ದಿಪಾಲಿ ಬಿರಾದಾರ ವಂದಿಸಿದರು.
ಇದನ್ನೂ ಓದಿ : ಬೀದರ್ | ಮತಗಳ್ಳತನ ವಿರುದ್ಧ ಬಸವಕಲ್ಯಾಣದಲ್ಲಿ ಸಹಿ ಸಂಗ್ರಹ ಅಭಿಯಾನ





