ಪ್ರಸ್ತುತ ಮಾನಸಿಕ ಆರೋಗ್ಯದ ಕುರಿತು ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಮನೋರೋಗ ತಜ್ಞ ಡಾ.ರಾಘವೇಂದ್ರ ವಾಗೋಲೆ ಹೇಳಿದರು.
ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಕಾಲೇಜಿನ ವಿದ್ಯಾರ್ಥಿ ಆಪ್ತ ಸಮಾಲೋಚನಾ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕದಿಂದ ಆಯೋಜಿಸಿದ್ದ ವಿದ್ಯಾರ್ಥಿ ಜೀವನದಲ್ಲಿ ಮಾನಸಿಕ ಆರೋಗ್ಯದ ಮಹತ್ವ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʼಜೀವನದಲ್ಲಿ ಸಮಸ್ಯೆ-ಸವಾಲುಗಳನ್ನು ಸಮಚಿತ್ತದಿಂದ ಎದುರಿಸುವಲ್ಲಿ ಮಾನಸಿಕ ಆರೋಗ್ಯದ ಪಾತ್ರ ಬಹಳ ಮಹತ್ವದ್ದಾಗಿದೆ. ಈಚಿನ ದಿನಗಳಲ್ಲಿ ಅನೇಕ ವಿದ್ಯಾರ್ಥಿಗಳು ಮಾನಸಿಕ ಒತ್ತಡ, ಖಿನ್ನತೆ ಹಾಗೂ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ವಿಪರೀತ ಸಂದರ್ಭಗಳಲ್ಲಿ ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ. ಆನಂದದ ಬದುಕು ಸಾಗಿಸಲು ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವುದು ಬಹಳ ಜರೂರಿಯಾಗಿದೆʼ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶಂಕರ ಜಿ. ಮಾತನಾಡಿ, ʼವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯವು ನ್ಯಾಷನಲ್ ಟಾಸ್ಕ್ ಫೋರ್ಸ್ ಅಡಿಯಲ್ಲಿ ವಿದ್ಯಾರ್ಥಿಗಳು, ಬೋಧಕರು, ಶಿಕ್ಷಣ ಸಂಸ್ಥೆಗಳಿಂದ ಅಭಿಪ್ರಾಯ ಹಾಗೂ ಸಲಹೆ ಸಂಗ್ರಹಿಸುತ್ತಿದೆʼ ಎಂದು ತಿಳಿಸಿದರು.
ಬಳಿಕ ಮನೋರೋಗ ತಜ್ಞ ಡಾ. ರಾಘವೇಂದ್ರ ವಾಗೋಲೆ ಅವರು ವಿದ್ಯಾರ್ಥಿಗಳೊಂದಿಗೆ ಮಾನಸಿಕ ಆರೋಗ್ಯ ಕುರಿತು ಸಂವಾದ ನಡೆಸಿ ವಿದ್ಯಾರ್ಥಿಗಳ ಅನೇಕ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.
ಇದನ್ನೂ ಓದಿ : ಬೀದರ್ | ಡಿ.7ರಂದು ಉಸ್ಮಾನಾಬಾದ್‌ನಲ್ಲಿ ಲಿಂಗಾಯತ ಮಹಾರ‍್ಯಾಲಿ: ಚನ್ನಬಸವಾನಂದ ಶ್ರೀ
ಡಾ.ರಾಜಾ ಸಮರ ಸೇನ್ ಮೋದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪ್ರಾಧ್ಯಾಪಕರಾದ ಡಾ.ರಾಜಕುಮಾರ ಅಲ್ಲೂರೆ, ಪ್ರೇಮಲತಾ ಮುನ್ನೋಳಿ, ಡಾ.ಶೀಲಾ ಸರವಸೆ, ಡಾ.ಎಲಿಶಾ, ಡಾ.ಚನ್ನಕೇಶವ ಮೂರ್ತಿ ಉಪಸ್ಥಿತರಿದ್ದರು. ಡಾ.ನಗ್ಮಾ ಸೋಣಾ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಮೇತ್ರೆ ಸ್ವಾಗತಿಸಿದರು. ಡಾ.ಸುಮನ್‍ಬಾಯಿ ಶಿಂದೆ ವಂದಿಸಿದರು.





