ಪೌರಾಡಳಿತ ಮತ್ತು ಹಜ್ ಖಾತೆ ಸಚಿವರೂ ಆದ ಬೀದರ್ ಶಾಸಕ ರಹೀಂ ಖಾನ್ ಅವರು ಶನಿವಾರ ಬೀದರ ತಾಲ್ಲೂಕಿನ ವಿವಿಧ ಗ್ರಾಮಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಬೀದರ್ ತಾಲೂಕಿನ ಜನವಾಡ, ಹಿಪ್ಪಳಗಾಂವ, ಚಾಂಬೋಳ ಗ್ರಾಮ ಮತ್ತು ಸೇತುವೆ, ಕನಳ್ಳಿ, ಶ್ರೀಮಂಡಲ, ಕಂಗಟಿ, ಬಸಂತಪುರ , ಚಿಮಕೋಡ, ಪತೇಪೂರ, ಖಾಜಾಪೂರ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿ, ಸ್ಥಳೀಯ ರೈತರಿಂದ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಸಚಿವರು, ʼಭಾರಿ ಮಳೆಯಿಂದಾಗಿ ರೈತರು ಬೆಳೆದ ಹೆಸರು, ಉದ್ದು ಸೋಯಾಬೀನ್, ತೊಗರಿ ಸೇರಿದಂತೆ ನಾನಾ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಮಳೆಯಿಂದ ಸೇತುವೆ, ಮನೆ, ರಸ್ತೆಗಳಿಗೆ ಹಾನಿಯಾಗಿದೆ. ಹಾನಿಯ ಬಗ್ಗೆ ವರದಿ ಸಲ್ಲಿಸಿ ಶೀಘ್ರದಲ್ಲಿ ರೈತರಿಗೆ ಪರಿಹಾರ ನೀಡಲು ಅಂತರ ಇಲಾಖಾ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಬೆಳೆ ಹಾನಿ ಮತ್ತು ಮನೆ ಹಾನಿಗೆ ಎಸ್‍ಡಿಆರ್‌ಎಫ್ ಮತ್ತು ಎನ್‍ಡಿಆರ್‌ಎಫ್ ಅಡಿಯಲ್ಲಿ ತಕ್ಷಣ ಪರಿಹಾರ ನೀಡಲಾಗುವುದು. ಮುಖ್ಯಮಂತ್ರಿಗಳಿಗೆ ಕ್ಷೇತ್ರದ ಪರಿಸ್ಥಿತಿ ಬಗ್ಗೆ ತಿಳಿಸಲಾಗಿದ್ದು, ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗಿದೆʼ ಎಂದು ಭರವಸೆ ನೀಡಿದ ಸಚಿವರು, ʼಸಾರ್ವಜನಿಕರು ನದಿ, ಕೆರೆಗಳಿಂದ ದೂರ ಇರಬೇಕು, ಯಾವುದೇ ಅಪಾಯವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ : ಕಲಬುರಗಿಯಲ್ಲಿ ಮರ್ಯಾದೆಗೇಡು ಹತ್ಯೆ | ಅನ್ಯಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದ ತಂದೆ
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಬೀದರ ಸಹಾಯಕ ಆಯುಕ್ತ ಮೊಹಮದ್ ಶಕೀಲ್, ಬೀದರ ತಹಸಿಲ್ದಾರ್ ರವೀಂದ್ರ ಧಾಮಾ, ಕೃಷಿ ಇಲಾಖೆ ಉಪ ನಿರ್ದೇಶಕ ಇಕ್ಬಾಲ್ ಅನ್ಸಾರಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.





