ಕಬ್ಬಿಗೆ ನ್ಯಾಯಯುತ ಬೆಲೆ ಘೋಷಣೆ ಮಾಡುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಬೀದರ್ ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಸೋಮವಾರ ಸಂಜೆ ಉಸ್ತುವಾರಿ ಸಚಿವ ಈಶ್ವರ ಖಂಡ್ರ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.
ʼಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕಬ್ಬಿಗೆ ನ್ಯಾಯಯುತ ಬೆಲೆ ನೀಡಬೇಕೆಂಬ ರೈತರ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದನೆ ಸಿಗುತ್ತಿಲ್ಲ. ಬೇರೆ ಜಿಲ್ಲೆಗಳಲ್ಲಿ ಕೊಡುವ ದರದಂತೆ ನಮ್ಮ ಜಿಲ್ಲೆಯ ರೈತರಿಗೂ ಸಿಗಬೇಕು. ಟನ್ ಕಬ್ಬಿಗೆ ಕನಿಷ್ಠ ₹3,100 ಬೆಲೆ ನಿಗದಿಪಡಿಸಿ ರೈತರ ಹಿತ ಕಾಪಾಡಬೇಕೆಂದು ರೈತರು ಇಬ್ಬರು ಸಚಿವರ ಮುಂದೆ ಬೇಡಿಕೆಯಿಟ್ಟರು.
ಅದಕ್ಕೆ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡಿ, ʼಕಬ್ಬಿನ ಬೆಲೆ ನಿಗದಿ ಕುರಿತು ಜಿಲಾಧಿಕಾರಿಗಳು ಈಗಾಗಲೇ ಮೂರು ಸಭೆಗಳು ನಡೆಸಿ ಅಂತಿಮವಾಗಿ ₹2,900 ನೀಡುವುದಾಗಿ ತಿಳಿಸಿದ್ದಾರೆ. ನಿಮ್ಮ ಬೇಡಿಕೆ ಬಗ್ಗೆ ಇಂದು ನಾನು ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಮಾತನಾಡಿದ್ದೇನೆ. ಅವರು ನಿಮ್ಮ ಬೇಡಿಕೆಗೆ ಸಕರಾತ್ಮಕವಾಗಿ ಒಪ್ಪಲು ಸಿದ್ಧರಿಲ್ಲʼ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಟನ್ ಕಬ್ಬಿಗೆ ₹3,300 ನಿಗದಿ ಮಾಡಿದ್ದಾರೆ. ಅಲ್ಲಿನ ರಿಕವರಿ 11.5 ಹಾಗೂ 12 ರಷ್ಟು ಇದೆ. ಶೇ 1ರಷ್ಟು ರಿಕವರಿ ಹೆಚ್ಚಾದರೆ ₹350 ರಷ್ಟು ಹೆಚ್ಚಿನ ಹಣ ಬರುತ್ತದೆ, ರಿಕವರಿ ಕಡಿಮೆಯಾದರೆ ₹350 ರಷ್ಟು ದರ ಕಡಿಮೆಯಾಗುತ್ತದೆ. ನಮ್ಮಲ್ಲಿ 10 ರಷ್ಟು ರಿಕವರಿ ಬಂದರೆ, ಅವರಿಗೂ ನಮಗೂ ಸರಾಸರಿ ₹700 ರಷ್ಟು ಕಡಿಮೆಯಾಗುತ್ತದೆ. ಆದರೂ ನಿಮ್ಮ ಬೇಡಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆʼ ಎಂದು ಭರವಸೆ ನೀಡಿದರು.
ಈ ಬಗ್ಗೆ ನಾಳೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಾಳೆ ಬೆಳಿಗ್ಗೆ ಹೆಚ್ಚಿನ ಬೆಲೆ ಘೋಷಿಸಲು ಪ್ರಯತ್ನಿಸುವೆ. ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಇನ್ನೊಂದು ಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೂ ತಿಳಿಸಿದ್ದೇನೆ. ನನ್ನ ಮೇಲೆ ಭರವಸೆಯಿಟ್ಟು ಧರಣಿ ಕೈಬಿಡುವಂತೆ ಸಚಿವ ಈಶ್ವರ ಖಂಡ್ರೆ ಅವರು ರೈತರಿಗೆ ವಿನಂತಿಸಿದರು.
ಅದಕ್ಕೆ ರೈತ ಮುಖಂಡ ಮಲ್ಲಿಕಾರ್ಜುನ ಸ್ವಾಮಿ ಪ್ರತಿಕ್ರಿಯಿಸಿ, ʼಜಿಲ್ಲಾಧಿಕಾರಿಗಳು ನಿಗದಿಪಡಿಸಿದ ₹2,900 ಬೆಲೆಗೆ ಒಪ್ಪದೇ ಮೂರನೇ ಸಭೆಯಿಂದ ಹೊರಬಂದು ಧರಣಿ ಆರಂಭಿಸಿದ್ದೇವೆ. ನಿಗದಿಯಾದ ಬೆಲೆಗಿಂತ ಕೇವಲ ₹200 ಅಷ್ಟೇ ಹೆಚ್ಚು ಕೇಳುತ್ತಿದ್ದೇವೆ. ನೀವು ನಮ್ಮನ್ನು ಭೇಟಿ ಮಾಡಿ ಹೆಚ್ಚಿನ ದರ ಘೋಷಿಸಿ ಸಿಹಿ ಸುದ್ದಿ ಕೊಡುತ್ತೀರಿ ಎಂಬ ಭರವಸೆ ಇತ್ತು. ಆದರೆ ನೀವು ಘೋಷಿಸದೆ ತಮ್ಮ ಭರವಸೆಯಂತೆ ಧರಣಿ ಕೈಬಿಡುವಂತೆ ಹೇಳಿದರೆ ನಾವೆಲ್ಲಿ ಹೋಗಬೇಕುʼ ಎಂದು ಪ್ರಶ್ನಿಸಿದರು.
ಸಚಿವ ಈಶ್ವರ ಖಂಡ್ರೆ ಅವರ ಮನವೋಲಿಕೆಗೆ ಒಪ್ಪದ ರೈತ ಮುಖಂಡರು, ನೀವು ಪಕ್ಕಾ ಸಿಹಿ ಸುದ್ದಿ ಘೋಷಿಸುವರೆಗೂ ನಾವು ಹೋರಾಟ ಕೈಬಿಡುವುದಿಲ್ಲವೆಂದು, ಸಚಿವರು ಧರಣಿ ಸ್ಥಳದಿಂದ ವಾಪಸ್ ತೆರಳುವ ವೇಳೆ ʼಅಯ್ಯೋಯೋ ಅಯೋಯೋ ಅನ್ಯಾಯ ಅನ್ಯಾಯ…ʼ ʼಬೇಕೇ ಬೇಕು ನ್ಯಾಯ ಬೇಕು…ʼ, ʼನ್ಯಾಯ ಸಿಗುವರೆಗೂ ಹೋರಾಟʼ ಎಂಬ ಘೋಷಣೆಗಳು ಕೂಗಿ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ : ಬೀದರ್ | ಬೌದ್ಧ ಸಾಂಸ್ಕೃತಿಕ ಭವನಕ್ಕೆ ₹10 ಕೋಟಿ ಅನುದಾನ : ಸಚಿವ ಈಶ್ವರ ಖಂಡ್ರೆ ಭರವಸೆ
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹಾಗೂ ರೈತರ ಮುಖಂಡರಾದ ಸಿದ್ರಾಮಪ್ಪಾ ಆಣದೂರೆ, ಬಾಬುರಾವ್ ಹೊನ್ನಾ, ದಯಾನಂದ ಸ್ವಾಮಿ, ಬಸವರಾಜ ಅಷ್ಟೂರೆ, ಸೈಯದ್ ಖಾಸೀಂ, ಶಿವರಾಜ ಪಾಟೀಲ್ ಅತಿವಾಳ, ಶಿವಲೀಲಾ ಹೊಳಸಮುದ್ರ ಸೇರಿದಂತೆ ಕಬ್ಬು ಬೆಳೆಗಾರರು, ಮತ್ತಿತರರು ಇದ್ದರು.





