ಔರಾದ ತಾಲೂಕಿನ ಹೆಡಗಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ರಕ್ಷಾಳ(ಕೆ) ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರೊಜೆಕ್ಟರ್ ಅಳವಡಿಸದೆ ಗ್ರಾಮ ಪಂಚಾಯತ್ ಸದಸ್ಯರು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
2024ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯತ್ ಸದಸ್ಯರು ರಕ್ಷಾಳ(ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹79,062 ಹಣದಲ್ಲಿ ಪ್ರೊಜೆಕ್ಟರ್ ಖರೀದಿಸಬೇಕೆಂದು ಕ್ರಿಯಾ ಯೋಜನೆ ಸಿದ್ಧಪಡಿಸಿದರು. ಆದರೆ ಶಾಲೆಯಲ್ಲಿ ಮೈಕ್ ಮಾತ್ರ ಅಳವಡಿಸಿದ್ದಾರೆ. ಆದರೆ ಪ್ರೊಜೆಕ್ಟರ್ ಖರೀದಿಸಿಲ್ಲ ಎಂದು ರಕ್ಷಾಳ(ಕೆ) ಗ್ರಾಮದ ಮುಖಂಡ ಬೀರಪ್ಪ ಮೇತ್ರೆ ಆರೋಪಿಸಿದ್ದಾರೆ.
‘ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರೊಜೆಕ್ಟರ್ ಮುಖಾಂತರ ಪರಿಣಾಮಕಾರಿ ಬೋಧನೆಗೆ ಉಪಯುಕ್ತ ಆಗಲೆಂದು ಅನುದಾನ ಮೀಸಲಿಡಲಾಗಿತ್ತು. ಆದರೆ ಸದಸ್ಯರು ಪ್ರೊಜೆಕ್ಟರ್ ಖರೀದಿಸದೆ ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಬಿಲ್ ಎತ್ತಿದ್ದಾರೆ’ ಎಂದು ಅವರು ದಾಖಲೆ ಸಮೇತ ದೂರಿದ್ದಾರೆ.

ಈ ಬಗ್ಗೆ ಗ್ರಾಮ ಪಂಚಾಯತ್ ಪಿಡಿಒ ಅವರಿಗೆ ಕೇಳಿದರೆ, ‘ಗ್ರಾಮ ಪಂಚಾಯತ್ ಇಬ್ಬರು ಸದಸ್ಯರು ತಲಾ ₹40 ಸಾವಿರದಂತೆ ಒಟ್ಟು ₹80 ಸಾವಿರದಲ್ಲಿ ರಕ್ಷಾಳ(ಕೆ) ಶಾಲೆಗೆ ಮೈಕ್ ಹಾಗೂ ಪ್ರೊಜೆಕ್ಟರ್ ನೀಡುವುದಾಗಿ ಅನುದಾನ ಪಡೆದರು. ಶಾಲೆಗೆ ಮೈಕ್ ಖರೀದಿಸಿ ಕೊಟ್ಟಿದ್ದಾರೆ. ಆದರೆ ಪ್ರೊಜೆಕ್ಟರ್ ಖರೀದಿಸಿದ ಪೋಟೋ ಕಳಿಸಿ, ಬಿಲ್ ಪಡೆದಿದ್ದಾರೆ. ಅವರ ನಂಬಿಕೆ ಮೇಲೆ ಬಿಲ್ ನೀಡಿದ್ದೇನೆ. ಈ ಬಗ್ಗೆ ಶಾಲಾ ಶಿಕ್ಷಕರಿಗೆ ಕೇಳಿದರೆ, ಮೈಕ್ ಕೊಟ್ಟಿದ್ದಾರೆ, ಪ್ರೊಜೆಕ್ಟರ್ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು’ ಎಂದು ಬೀರಪ್ಪ ಮೇತ್ರೆ ‘ಈದಿನ’ಕ್ಕೆ ತಿಳಿಸಿದ್ದಾರೆ.
’15ನೇ ಹಣಕಾಸು ಯೋಜನೆಯಡಿ ನಡೆಸಬೇಕಾದ ಕಾಮಗಾರಿ ಹೆಸರಲ್ಲಿ ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಗ್ರಾ.ಪಂ. ಪಿಡಿಒ, ಅಧ್ಯಕ್ಷ ಹಾಗೂ ಸದಸ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.





