ಜನಪದ ಸಂಸ್ಕೃತಿ ಪೋಷಿಸುವ ಹಾಗೂ ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ʼನನ್ನವ್ವನ ಜನಪದ ಸಿರಿʼ ಕೃತಿ ಮಹತ್ವದ ಪಾತ್ರ ವಹಿಸಲಿದೆ ಎಂದು ಕಲಬುರಗಿಯ ಸಾಹಿತಿ ಡಾ.ಕಾವ್ಯಶ್ರೀ ಮಹಾಗಾಂವಕರ್ ಅಭಿಪ್ರಾಯಪಟ್ಟರು.
ಔರಾದ್ ತಾಲೂಕಿನ ನಾಗೂರ್ (ಬಿ) ಗ್ರಾಮದಲ್ಲಿ ಈಚೆಗೆ ಬಿಡುಗಡೆಯಾದ ʼನನ್ನವ್ವನ ಜನಪದ ಸಿರಿʼ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ʼಆಧುನಿಕತೆ ತಂತ್ರಜ್ಞಾನದ ಪ್ರಸ್ತುತ ಕಾಲದಲ್ಲಿ ಜನಪದ ಸೊಗಡು ತುಂಬಿಕೊಂಡ ಈ ಕೃತಿ ತುಂಬ ವಿಶೇಷವಾಗಿದೆʼ ಎಂದರು.
ʼಈ ಕೃತಿಯಲ್ಲಿ ಬೀದರ್ ಭಾಷೆ ಹಾಗೂ ಹಾಡಿನ ಧಾಟಿಗೆ ಪೂರಕವಾದ ವ್ಯಾಕರಣಾಂಶ ಅನಾವರಣಗೊಳಿಸಿರುವ ಸಂಪಾದಕಿ ಶಾಂತಮ್ಮ ಬಲ್ಲೂರ್ ಅವರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ತನ್ನ ತಾಯಿ ತುಳಸಮ್ಮ ಸಂಗ್ರಾಮ ಸಿಂಧೆ ಅವರಲ್ಲಿನ ಹಾಡುಗಳಿಗೆ ಅಕ್ಷರ ರೂಪ ನೀಡಿರುವುದು ಒಂದು ಸಂಶೋಧನಾ ಕೃತಿಗಿಂತಲೂ ಮಿಗಿಲಾಗಿದೆʼ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ.ಅಮರವಾಡಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼನಶಿಸುತ್ತಿರುವ ಜನಪದ ಸಂಸ್ಕೃತಿಯನ್ನು ನಾವುಗಳು ಪೋಷಿಸುವ ಅಗತ್ಯವಿದೆ. ಜನಪದದಲ್ಲಿ ಜೀವನ ಮೌಲ್ಯಗಳು, ನೈತಿಕ ಪಾಠಗಳಿವೆ, ಅವು ಬದುಕಿಗೆ ದಾರಿದೀಪವಾಗುವ ಮಹತ್ವದ ಸಂದೇಶಗಳಿವೆʼ ಎಂದು ನುಡಿದರು.
ʼತುಳಸಮ್ಮ ಸಿಂಧೆ ಅವರಲ್ಲಿನ ನಮ್ಮ ನೆಲಮೂಲ ಸಂಸ್ಕೃತಿ ನಶಿಸದಂತೆ ತನ್ನ ಜನಪದ ತಾಯಿಯನ್ನು ಜೀವಂತವಾಗಿಡುವ ಸಂಪಾದಕಿ ಶಾಂತಮ್ಮ ಬಲ್ಲೂರ್ ಅವರ ಕಾರ್ಯ ಅನುಪಮವಾಗಿದೆ. ಯುವ ಸಮೂಹ ಮೊಬೈಲ್‌ಗೆ ಬಲಿಯಾಗದೇ ಇಂತಹ ಕೃತಿಗಳ ಅಧ್ಯಯನ ನಡೆಸಬೇಕು ಮತ್ತು ಗ್ರಾಮೀಣ ಪ್ರದೇಶದಲ್ಲಿನ ಅನೇಕ ತಾಯಿಯಂದಿರಲ್ಲಿನ ಜನಪದ ಹಾಡುಗಳ ಸಂಗ್ರಹಕ್ಕೆ ಮುಂದಾಗಬೇಕುʼ ಎಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ಹಂಸಕವಿ ಅವರು ನಾಗೂರ್ (ಬಿ) ಗ್ರಾಮದ ಹಿನ್ನೆಲೆ, ವಿಶೇಷತೆ ಮತ್ತು ಸಂಪಾದಕಿ ಶಾಂತಮ್ಮ ಬಲ್ಲೂರ್ ಅವರ ಕುರಿತು ಪರಿಚಯ ಮಾಡಿಕೊಟ್ಟರು.
ಇದೇ ಸಂದರ್ಭದಲ್ಲಿ ಜನಪದ ಹಾಡುಗಾರ್ತಿ ತುಳಸಮ್ಮ ಸಿಂಧೆ ಹಾಗೂ ಸಂಪಾದಕಿ ಶಾಂತಮ್ಮ ಬಲ್ಲೂರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಗ್ರಾಮಸ್ಥರು, ಸಾಹಿತ್ಯಾಸಕ್ತರಿಂದ ಸನ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ ಜಿಲ್ಲಾಡಳಿತ ಭವನ ನಿರ್ಮಾಣ : ಜಿಲ್ಲಾ ಕಚೇರಿಗಳ ಸ್ಥಳಾಂತರ : ಡಿಸಿ ಶಿಲ್ಪಾ ಶರ್ಮಾ
ಸಮಾರಂಭದಲ್ಲಿ ಶಿಕ್ಷಕರಾದ ಕಲ್ಲಪ್ಪ ಪಾಂಚಾಳ ಹಾಗೂ ಸವಿತಾ ಕರಸೋನೆ ಅವರ ಮಾರ್ಗದರ್ಶನದಲ್ಲಿ ಜ್ಞಾನಭಾರತಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಸಾಹಿತಿ ಚೆನ್ನಮ್ಮ ವಲ್ಲಾಪೂರೆ, ಸ್ಯಾಮಸನ್ ಬಲ್ಲೂರ, ಗುರುನಾಥ ದೇಶಮುಖ, ಪ್ರಕಾಶ ದೇಶಮುಖ, ಬಸವರಾಜ ಮಸ್ಕಲೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.





