ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಬೀದರ್ ಜಿಲ್ಲಾ ಘಟಕದ 2025-28ನೇ ಅವಧಿಯ ಕಾರ್ಯಕಾರಿ ಸಮಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕಡೆ ದಿನವಾದ ಅಕ್ಟೋಬರ್ 27ರಂದು ಯಾವುದೇ ಸ್ಥಾನಕ್ಕೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ನಿಯಮಾನುಸಾರ ಚುನಾವಣೆ ಅಧಿಸೂಚನೆ ಹೊರಡಿಸುವ ಮೂಲಕ ಚುನಾಯಿತ ಕಾರ್ಯಕಾರಿ ಸಮಿತಿಯನ್ನು ನೆಲೆಗೊಳಿಸುವ ಪ್ರಕ್ರಿಯೆ ನಡೆಯಲಿದೆ’ ಎಂದು ಸಂಘದ ಜಿಲ್ಲಾ ಚುನಾವಣಾಧಿಕಾರಿ ಶಶಿಕಾಂತ ಎಸ್. ಶೆಂಬೆಳ್ಳಿ ತಿಳಿಸಿದರು.
ಬೀದರ್ ನಗರದ ವಾರ್ತಾ ಇಲಾಖೆ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ʼಸಂಘದ ಅರ್ಹ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಇರುವುದರಿಂದ ಜಿಲ್ಲಾ ಘಟಕದ ಆಯ್ಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎನ್. ರವಿಕುಮಾರ ಅವರು ಆದೇಶ ಹೊರಡಿಸಿದ್ದಾರೆʼ ಎಂದು ಹೇಳಿದರು.
ʼಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೀದರ್ ಜಿಲ್ಲಾ ಘಟಕಕ್ಕೆ ಚುನಾವಣಾ ಪ್ರಕ್ರಿಯೆ ಹೊರತಾದ ಯಾವುದೇ ವ್ಯವಸ್ಥೆಯಡಿ ಅಧ್ಯಕ್ಷ ಸ್ಥಾನವನ್ನು ಒಳಗೊಂಡಂತೆ ಇತರೆ ಯಾವುದೇ ಪದಾಧಿಕಾರಿಗಳ ಸ್ಥಾನಕ್ಕೆ ಯಾರನ್ನೂ ನಾಮ ನಿರ್ದೇಶನ/ನೇರ ನೇಮಕಾತಿ ನಡೆದಿರುವುದಿಲ್ಲʼ ಎಂದು ತಿಳಿಸಿದರು.
ʼಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳು ಪ್ರಜಾಪ್ರಭುತ್ವದ ಜೀವಾಳ. ಚುನಾವಣೆಗಳನ್ನು ‘ಪ್ರಜಾಪ್ರಭುತ್ವದ ಹಬ್ಬ’ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಇಂತಹ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಗೊಳಿಸುವಲ್ಲಿ ಕಾರ್ಯನಿರತ ಪತ್ರಕರ್ತರ ಸಹಭಾಗಿತ್ವ ಮತ್ತು ಬೆಂಬಲ ಅಗತ್ಯ. ಚುನಾವಣಾ ನಿಯಮಗಳಿಗೆ ಅನುಗುಣವಾಗಿ ಚುನಾವಣೆ ನಡೆಸಲು ಚುನಾವಣಾ ಸಮಿತಿ ಬದ್ಧವಾಗಿದೆʼ ಎಂದು ವಿವರಿಸಿದರು.
ʼಸಂಘದ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ಸೇರಿದಂತೆ ಒಟ್ಟು 25 ಹುದ್ದೆಗಳ ಚುನಾವಣೆಗೆ ಅಕ್ಟೋಬರ್ 13ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅ. 19ರಿಂದ ಅ. 27ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆದರೆ, ಯಾವುದೇ ಹುದ್ದೆಗೂ ನಾಮಪತ್ರ ಸಲ್ಲಿಕೆಯಾಗಿಲ್ಲ. ಚುನಾವಣಾ ಕಣದಲ್ಲಿ ಯಾರೂ ಇಲ್ಲʼ ಎಂದರು.
ʼಇಡೀ ಚುನಾವಣಾ ಪ್ರಕ್ರಿಯೆ ಅತ್ಯಂತ ಪಾರದರ್ಶಕ, ನಿಷ್ಪಕ್ಷಪಾತ ಹಾಗೂ ಕಾನೂನುಬದ್ಧವಾಗಿ ನಡೆದಿದೆ. ಎಲ್ಲ ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದ್ದು, ಚುನಾವಣಾಧಿಕಾರಿ ಕಚೇರಿ ಎಲ್ಲರಿಗೂ ಕೃತಜ್ಞವಾಗಿದೆ. ಮುಖ್ಯ ಚುನಾವಣಾಧಿಕಾರಿ ಸೂಚನೆ, ನಿರ್ದೇಶನದ ಪ್ರಕಾರ, ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಕೆಲಸ ನಿರ್ವಹಿಸಲಿದೆʼ ಎಂದು ಹೇಳಿದರು.
ಗೌರವ ಧನ ಸ್ವೀಕರಿಸದಿರಲು ನಿರ್ಧಾರ :
‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡ ಜಿಲ್ಲಾ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಹಾಗೂ ಸಹಾಯಕ ಸಿಬ್ಬಂದಿಗೆ ನೀಡಲಾಗುವ ಗೌರವ ಧನ ಸ್ವೀಕರಿಸದಿರಲು ಸಂಘದ ಬೀದರ್ ಜಿಲ್ಲಾ ಘಟಕದ ಎಲ್ಲಾ ಚುನಾವಣಾಧಿಕಾರಿಗಳು, ಸಿಬ್ಬಂದಿ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಶಶಿಕಾಂತ ಎಸ್. ಶೆಂಬೆಳ್ಳಿ ತಿಳಿಸಿದರು.
ʼಚುನಾವಣಾ ಕೆಲಸಕ್ಕೆ ಕೊಡಲಾಗುವ ಗೌರವ ಧನದ ಹಣವನ್ನು ಕೆಯುಡಬ್ಲ್ಯೂ ಏಳಿಗೆ, ಬೆಳವಣಿಗೆಗೆ ಬಳಸಿಕೊಳ್ಳಬೇಕು. ಈ ಸಂಬಂಧ ಮುಖ್ಯ ಚುನಾವಣಾಧಿಕಾರಿ ಎನ್. ರವಿಕುಮಾರ್ ಅವರಿಗೆ ಕೋರಿಕೆಯ ಪತ್ರ ಸಲ್ಲಿಸಲಾಗುತ್ತದೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಶಾಲಾ ಅವ್ಯವಸ್ಥೆ ಸುಧಾರಣೆಗೆ ಮನೆ-ಮನೆಗೆ ಭಿಕ್ಷೆ ಬೇಡಿದ ಕೆಆರ್‌ಎಸ್ ಕಾರ್ಯಕರ್ತರು
ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರೂ ಆದ ನೋಡಲ್ ಅಧಿಕಾರಿ ಮಂಜುನಾಥ ಸುಳ್ಳೋಳಿ, ಕಾರ್ಮಿಕ ಇಲಾಖೆಯ ಅಧಿಕಾರಿ, ನೋಡಲ್ ಅಧಿಕಾರಿ ಮಹೇಶ ಕುಲ್ಲೋಳಿ, ಸಹಾಯಕ ಚುನಾವಣಾಧಿಕಾರಿ/ಸಿಬ್ಬಂದಿ ಸೋಮನಾಥ ಬಿರಾದಾರ, ಬಾಲಾಜಿ ಕುಂಬಾರ, ಚಿತ್ರಸೇನ್ ವ್ಹಿ. ಫುಲೆ, ಲೋಕೇಶ ವಿ. ಬಿರಾದಾರ ಹಾಜರಿದ್ದರು.





