ಔರಾದ್ (ಬಿ) ತಾಲೂಕಿನಲ್ಲಿ ಅ. 7 ಮತ್ತು ಅ.13 ರಂದು ನಡೆದ ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗವಹಿಸಿದ ನಾಲ್ವರು ಶಿಕ್ಷಕರಿಗೆ ಔರಾದ್ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಸರ್ಕಾರಿ ನೌಕರರಾಗಿರುವ ಶಿಕ್ಷಕರು ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದು, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಸೇನೆ ಔರಾದ್ ತಾಲೂಕು ಘಟಕ ಹಾಗೂ ಬಹುಜನ ಸೇವಾ ಸಮಿತಿ ಬೀದರ್ ವತಿಯಿಂದ ದೂರು ನೀಡಲಾಗಿತ್ತು.
ದೂರಿನ್ವಯ ಶಿಕ್ಷಕರಾದ ಮಹಾದೇವ್ ಚಿಟಗಿರೆ, ಶಾಲಿವಾನ್ ಉದಗಿರೆ, ಪ್ರಕಾಶ್ ಬರದಾಪೂರೆ ಹಾಗೂ ಸತೀಶ್ ಮಾನಕಾರಿ ಅವರಿಗೆ ಶಿಕ್ಷಣ ಇಲಾಖೆ ಮಂಗಳವಾರ ಕಾರಣ ಕೇಳುವ ನೋಟಿಸ್ ನೀಡಿದೆ.
ʼಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ತಾವು ಭಾಗಿಯಾಗಿರುವ ಕುರಿತು ವಿಡಿಯೋ ಮತ್ತು ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದಿವೆ. ತಾವು ಸರ್ಕಾರಿ ನೌಕರರು ಆಗಿರುವುದರಿಂದ ಯಾವುದೇ ಪ್ರಕಾರ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ತಾವು ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿ ಸರಕಾರದ ಸೇವಾ ನಿಬಂಧನೆಗೆ ವಿರುದ್ಧವಾಗಿ ಕರ್ತವ್ಯ ಮಾಡಿರುವಿರಿʼ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಬೀದರ್ | ಯಾವ ಹುದ್ದೆಗೂ ಸಲ್ಲಿಕೆಯಾಗದ ನಾಮಪತ್ರ : ಪತ್ರಕರ್ತರ ಸಂಘಕ್ಕೆ ಪುನಃ ಚುನಾವಣೆ
ಕಾರಣ ಕೇಳುವ ಈ ನೋಟಿಸ್‌ಗೆ ಲಿಖಿತ ಹೇಳಿಕೆಯನ್ನು ತಾವು ಖುದ್ದಾಗಿ ಬಂದು ಈ ಕಚೇರಿಗೆ ಬಂದು ಸಲ್ಲಿಸಬೇಕು. ಇಲ್ಲವಾದಲ್ಲಿ ಏಕಪಕ್ಷೀಯವಾಗಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು-1957ರ ಅನ್ವಯ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಹೇಳಲಾಗಿದೆ.





