ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ ಜಿಲ್ಲಾ ಘಟಕದ ಜಿಲ್ಲಾ ಚುನಾವಣಾ ಅಧಿಕಾರಿ ಕಚೇರಿಯನ್ನು ಬೀದರ ನಗರದ ವಾರ್ತಾ ಮತ್ತು ಸಾವರ್ಜನಿಕ ಸಂಪರ್ಕ ಇಲಾಖೆಯ ಕಚೇರಿಯ ಮೊದಲ ಮಹಡಿಯಲ್ಲಿ ಅಕ್ಟೋಬರ್ 13ರಂದು ಚಾಲನೆ ನೀಡಲಾಗಿದೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಧಿಸೂಚನೆ ಹಾಗೂ ಸದಸ್ಯರ ಪಟ್ಟಿಯನ್ನು ಪ್ರಕಟಿಸಿ ಚುನಾವಣಾ ಪ್ರಕ್ರಿಯೆಗೆ ಚಾಲನೆ ಕೊಡಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿ ಶಶಿಕಾಂತ ಎಸ್ ಶೆಂಬೆಳ್ಳಿ, ನೋಡಲ್ ಅಧಿಕಾರಿಗಳಾದ ಮಹೇಶ ಕುಲಳ್ಳಿ, ವಿಜಯಕೃಷ್ಣ, ಸಹಾಯಕ ಚುನಾವಣಾಧಿಕಾರಿಗಳಾದ ಮಹಾರುದ್ರ ಡಾಕುಳಗಿ, ಸತ್ಯಜೀತ ಇವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಅಧಿಸೂಚನೆ ಹೊರಡಿಸಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ ಶಶಿಕಾಂತ ಎಸ್. ಶೆಂಬೆಳ್ಳಿ ಮಾತನಾಡಿ, ʼ ಬರುವ ಅ.13 ರಂದು ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದೆ. ಅ.16 ರಂದು ಮತದಾರರ ಪಟ್ಟಿಯಲ್ಲಿನ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಅ.18ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆ, ಅ.19ರಂದು ನಾಮಪತ್ರ ಸಲ್ಲಿಕೆ ಆರಂಭ, ಅ. 27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಅ.28 ರಂದು ನಾಮಪತ್ರಗಳ ಪರಿಶೀಲನೆ, ಅ.30 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಅಂದೇ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದುʼ ಎಂದು ವಿವರಿಸಿದರು.

ನವೆಂಬರ್ 9ರಂದು ಭಾನುವಾರ ಬೆ. 9ರಿಂದ ಮಧ್ಯಾಹ್ನ 3ರ ವರೆಗೆ ಅಗತ್ಯ ಬಿದ್ದಲ್ಲಿ ಮತದಾನ, ಅಂದೇ ಮಧ್ಯಾಹ್ನ 3.30 ರ ನಂತರ ಮತಗಳ ಎಣಿಕೆ ಹಾಗೂ ಫಲಿತಾಂಶ ಪ್ರಕಟಣೆ ಮಾಡಲಾಗುವುದು ಎಂದು ಹೇಳಿದರು.
ಅ. 20 ರಿಂದ 22ರ ವರೆಗೆ ದೀಪಾವಳಿ ಹಬ್ಬದ ಪ್ರಯುಕ್ತ ರಜೆಯಿದ್ದು, ಪ್ರತಿದಿನ ಬೆ. 11 ರಿಂದ ಮ. 3ರವರೆಗೆ ಚುನಾವಣಾ ಕಚೇರಿ ತೆರೆದಿರುತ್ತದೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದಾದರೂ ಮಾಹಿತಿ ಬೇಕಿದ್ದಲ್ಲಿ ನೇರವಾಗಿ ಕಚೇರಿಗೆ ಬಂದು ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಕನ್ನಡ ಕಾವ್ಯ ಕ್ಷೇತ್ರಕ್ಕೆ ಹೊಸ ಹೊಳಪು ತಂದುಕೊಟ್ಟ ಬೇಂದ್ರೆ : ಅನಂತ ಕೃಷ್ಣ ದೇಶಪಾಂಡೆ
ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆ ಎಲ್ಲರೂ ಸಹಕಾರ ಕೊಡಬೇಕು. ಯಾರೂ ಕೂಡ ಅಶಿಸ್ತಿನಿಂದ ವರ್ತಿಸಬಾರದು. ಪಾರದರ್ಶಕ, ಕಾನೂನು ಬದ್ಧವಾಗಿ ಇಡೀ ಚುನಾವಣೆ ನಡೆಯಲಿದೆ. ಇಡೀ ಚುನಾವಣೆ ಪ್ರಕ್ರಿಯೆಯ ವಿಡಿಯೋ ಚಿತ್ರಿಕರಣ ನಡೆಯಲಿದೆ ಎಂದು ತಿಳಿಸಿದ್ದಾರೆ.





