ಅಂಗವಿಕಲರಲ್ಲಿ ಅಗಾಧ ಪ್ರತಿಭೆ ಇದೆ. ಅವರು ತಮ್ಮ ಅಂಗವಿಕಲತೆಯನ್ನು ಮೆಟ್ಟಿ ನಿಂತು ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಬೀದರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿ ಇತರೆ ಇಲಾಖೆ, ಸ್ವಯಂ ಸೇವಾ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ವೀಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಅಂಗವೈಕಲ್ಯವನ್ನು ನೂನ್ಯತೆ ಎಂದು ಭಾವಿಸದೆ ಅದನ್ನು ಸಾಧನೆಗೆ ಪ್ರತ್ಯೇಕ ಮಾರ್ಗ ಎಂದು ಭಾವಿಸಿ ಎಲ್ಲರೂ ಸಾಧನೆ ಮಾರ್ಗದತ್ತ ಸಾಗಬೇಕು. ಬ್ರೈಲ್ ಲಿಪಿ ಕಂಡು ಹಿಡಿದ ಲೂಯಿಸ್ ಬ್ರೈಲ್ ಬಾಲ್ಯದಲ್ಲಿ ಸಂಭವಿಸಿದ ಅಪಘಾತದಿಂದ ಸಂಪೂರ್ಣವಾಗಿ ದೃಷ್ಟಿಹೀನರಾದರೂ, ಅಸಾಮಾನ್ಯ ಬುದ್ಧಿ ಮತ್ತು ಸಾಧನೆಯ ಮೂಲಕ ಅಂಧರಿಗೆ ಓದು-ಬರಹ ಹೊಸ ಲೋಕವನ್ನು ತೆರೆಯುವಲ್ಲಿ ಮಹತ್ವದ ಪಾತ್ರ ವಹಿಸಿದರುʼ ಎಂದು ಹೇಳಿದರು.

ʼಇರಾ ಸಿಂಗಲ್ ಅವರು ದೈಹಿಕ ವಿಕಲತೆಯಿದ್ದರೂ ಅದನ್ನು ಅಡ್ಡಿಯಾಗಲು ಬಿಡದೆ ದೇಶದ ಕಠಿಣ ಪರೀಕ್ಷೆಯಾದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದು ಐಎಎಸ್ ಆದ ಧೈರ್ಯಶಾಲಿ ಹಾಗೂ ಮಾದರಿ ಮಹಿಳೆಯಾಗಿದ್ದಾರೆ ಎಂದ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಶೇ.5ರಷ್ಟು ಅನುದಾನವನ್ನು ವಿಕಲಚೇತನರ ಶ್ರೇಯೋಭಿವೃದ್ಧಿಗೆ ಬಳಸುವಂತೆ ನಿರ್ದೇಶನ ನೀಡಲಾಗುವುದು ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವಿಕಲಚೇತರಿಗಾಗಿ ಸುರಕ್ಷಿತ ರಾಂಪ್ ವಾಕ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದುʼ ಎಂದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ವರ್ತಮಾನದ ತಲ್ಲಣಗಳಿಗೆ ನಾರಾಯಣ ಗುರು – ಗಾಂಧಿಯೇ ಉತ್ತರ
ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಅಧಿಕಾರಿ ರತ್ನ ಸುಭಾಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ.ಎಂ, ಮುಖಂಡರಾದ ಅನಿಲಕುಮಾರ್ ಬೆಲ್ದಾರ ಸೇರಿದಂತೆ ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳ ಮುಖ್ಯಸ್ಥರು, ವಿಕಲಚೇತನ ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಸೌಧ ನಿರ್ಮಾಣ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರಿಂದು ಹೊಸದಾಗಿ ನಿರ್ಮಾಣವಾಗುತ್ತಿರುವ ʼಪ್ರಜಾಸೌಧʼ ಜಿಲ್ಲಾ ಆಡಳಿತ ಕೇಂದ್ರ ಬೀದರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಮಗಾರಿ ಗುಣಮಟ್ಟದಲ್ಲಿ ಮುಂದುವರಿಸುವಂತೆ ಕಾರ್ಯನಿರ್ವಾಹಕ ಇಂಜಿನೀಯರ ಶಿವಶಂಕರ ಕಾಮಶೆಟ್ಟಿ ಹಾಗೂ ಗುತ್ತಿಗೆದಾರರಾದ ಜೆ.ಎಮ್. ಕನ್ಸಟ್ರಕ್ಷನ್ ಅವರಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಬೀದರ ಮಹಾನಗರ ಪಾಲಿಕೆಯ ಆಯುಕ್ತರಾದ ಮುಕುಲ ಜೈನ್, ಸಹಾಯಕ ಆಯುಕ್ತ ಮೊಹಮ್ಮದ್ ಶಕೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.





