ದೀಪಾವಳಿ ಹಬ್ಬಕ್ಕೆ ನಗರಗಳಿಂದ ತಮ್ಮ ಊರುಗಳಿಗೆ ಮರಳುವ ಪ್ರಯಾಣಿಕರಿಂದ ದುಬಾರಿ ಟಿಕೆಟ್ ದರ ವಸೂಲಿ ಮಾಡುತ್ತಿರುವ ಖಾಸಗಿ ಬಸ್‍ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕ ಆಗ್ರಹಿಸಿದೆ.
ಸೇನೆಯ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಅವರ ನೇತೃತ್ವದಲ್ಲಿ ಬೀದರ್ ನಗರದಲ್ಲಿ ಶನಿವಾರ ಸಾರಿಗೆ ಇಲಾಖೆಯ ಕಲಬುರಗಿ ಜಂಟಿ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಕೆ.ಬಿರಾದಾರ ಅವರಿಗೆ ಸಲ್ಲಿಸಿದರು
ʼಬಹಳಷ್ಟು ಜನ ಬದುಕಲು, ಶಿಕ್ಷಣ ಹಾಗೂ ಕಚೇರಿ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿರುತ್ತಾರೆ. ದೀಪಾವಳಿ ಆಚರಿಸಲು ಸ್ವಂತ ಊರಿಗೆ ವಾಪಸ್ಸಾಗುತ್ತಾರೆ. ಆದರೆ, ಖಾಸಗಿ ಬಸ್‍ನವರು ದೀಪಾವಳಿ ದೃಷ್ಟಿಕೋನದಲ್ಲಿ ಇಟ್ಟುಕೊಂಡು ಟಿಕೆಟ್ ದರದಲ್ಲಿ ಭಾರಿ ಹೆಚ್ಚಳ ಮಾಡಿದ್ದಾರೆʼ ಎಂದು ಗಣೇಶ ಪಾಟೀಲ ಗಮನ ಸೆಳೆದರು.
ʼಬೆಂಗಳೂರಿನಿಂದ ಬೀದರ್‍ಗೆ ಖಾಸಗಿ ಬಸ್‍ಗಳ ಟಿಕೆಟ್ ದರ ₹ 800 ರಿಂದ ₹1,200 ವರೆಗೆ ಇದೆ. ಆದರೆ, ಇದೀಗ ಖಾಸಗಿ ಬಸ್‍ನವರು ₹4,000 ರಿಂದ ₹5,000 ವರೆಗೆ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಬೀದರ್ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.
ʼದುಬಾರಿ ಟಿಕೆಟ್ ದರ ಪಡೆಯುತ್ತಿರುವ ಖಾಸಗಿ ಬಸ್‍ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ಸಾರಿಗೆ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದುʼ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಬೀದರ್ | ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ; ಉಸ್ತುವಾರಿ ಸಚಿವರ ಮನೆ ಎದುರು ಧರಣಿ ಎಚ್ಚರಿಕೆ
ನಮ್ಮ ಕರ್ನಾಟಕ ಸೇನೆಯ ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಅನಿಲ್ ರಾಜಗೀರಾ, ಉಪಾಧ್ಯಕ್ಷ ರವಿ ಪಾಟೀಲ, ಬೀದರ್ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಸಾಯಿಕಿರಣ್ ಇದ್ದರು.





