ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಆಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಬೀದರ ಹಾಗೂ ತಾಲೂಕ ಪಂಚಾಯತ್ ಬೀದರ ಸಹಯೋಗದಲ್ಲಿ ತಾಲೂಕಿನ ಶ್ರೀಮಂಡಲದಲ್ಲಿ ಆಯೋಜಿಸಿದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼಮಕ್ಕಳ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಒದಗಿಸುವ ಕೆಲಸವನ್ನು ಅಧಿಕಾರಿಗಳು ಸರಿಯಾಗಿ ನಿರ್ವಹಿಸಬೇಕು. ಮನರೇಗಾ ಅಡಿಯಲ್ಲಿ ಶಾಲೆಗೆ ಕಾಂಪೌಂಡ್, ಶೌಚಾಲಯ, ಆಟದ ಮೈದಾನ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಪಡೆಯಬಹುದುʼ ಎಂದರು.

ಬೀದರ ತಾಲೂಕ ಪಂಚಾಯತ್ ಇಒ ಮಾಣಿಕರಾವ್ ಪಾಟೀಲ್ ಮಾತನಾಡಿ, ʼಮಕ್ಕಳ ಸುರಕ್ಷತೆ, ಹಕ್ಕುಗಳಿಗಾಗಿ ಗ್ರಾಮ ಮಟ್ಟದಲ್ಲಿ ಜಾಗೃತಿ ಅನಿವಾರ್ಯ. ಮಕ್ಕಳ ಸಮಸ್ಯೆ ಆಲಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಕ್ಕಳ ಗ್ರಾಮ ಸಭೆ ಆಯೋಜಿಸಲಾಗಿದೆʼ ಎಂದರು.
ಅರಿವು ಗ್ರಂಥಾಲಯ ಕೇಂದ್ರ ಉದ್ಘಾಟನೆ :
ಗ್ರಂಥಾಲಯ ಎನ್ನುವುದು ಕೇವಲ ಪುಸ್ತಕಗಳ ಕಟ್ಟಡವಲ್ಲ. ಅದು ಜ್ಞಾನದ ಕೇಂದ್ರ. ಯುವಕರ ಓದು ಮತ್ತು ಅಧ್ಯಯನ ಚಟುವಟಿಕೆಗೆ ಹೊಸ ದಿಕ್ಕು ನೀಡುವ ಸಾಮರ್ಥ್ಯ ಇದಕ್ಕಿದೆ. ಪ್ರತಿಯೊಬ್ಬರು ಗ್ರಂಥಾಲಯವನ್ನು ತಮ್ಮ ಬೆಳವಣಿಗೆಯ ಕೇಂದ್ರವನ್ನಾಗಿ ಮಾಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ ಡಾ. ಗಿರೀಶ್ ಬದೋಲೆ ಹೇಳಿದರು.
ಶ್ರೀಮಂಡಲದಲ್ಲಿ ಅರಿವು ಗ್ರಂಥಾಲಯ ಕೇಂದ್ರ ಹಾಗೂ ಪುಸ್ತಕ ಗೂಡಿಗೆ ಚಾಲನೆ ನೀಡಿ ಮಾತನಾಡಿದ ಅವರು, ʼಈ ಗ್ರಂಥಾಲಯದಲ್ಲಿ ಬಗೆ ಬಗೆಯ ಪುಸ್ತಕ ಇಡಲಾಗಿದ್ದು, ಗ್ರಾಮಸ್ಥರು ಇದರ ಲಾಭ ಪಡೆಯಬೇಕು. ಜೊತೆಗೆ ಪುಸ್ತಕ ಗೂಡು ಸಹ ಸ್ಥಾಪಿಸಲಾಗಿದ್ದು, ಅದನ್ನು ಸಹ ಸದುಪಯೋಗ ಪಡೆದುಕೊಳ್ಳಬೇಕುʼ ಎಂದರು.
ಇದನ್ನೂ ಓದಿ : ಬೀದರ್ | ಕಲ್ಯಾಣ ಕರ್ನಾಟಕದಲ್ಲಿ 20,462 ಶಿಕ್ಷಕರ ಹುದ್ದೆ ಖಾಲಿ
ಮನರೇಗಾ ಸಹಾಯಕ ನಿರ್ದೇಶಕ ಸುದೇಶ್ ಕೊಡ್ದೆ, ಶ್ರೀಮಂಡಲ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಮಂಜುನಾಥ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶರತಕುಮಾರ ಅಭಿಮಾನ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.





