ಸರ್ಕಾರಿ ಶಾಲೆಗಳ ಜಾಗದಲ್ಲಿ ಆರ್‌ಎಸ್ಎಸ್ ಚಟುವಟಿಕೆ ನಿರ್ಬಂಧಿಸುವಂತೆ ಕೋರಿ ಪತ್ರ ಬರೆದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದುಷ್ಕರ್ಮಿಗಳು ಕರೆ ಮಾಡಿ ಬೆದರಿಸುತ್ತಿರುವುದನ್ನು ಖಂಡಿಸಿ ಶುಕ್ರವಾರ ನಗರದಲ್ಲಿ ಕಾಂಗ್ರೆಸ್ ಮುಖಂಡರು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು ಕೈಯಲ್ಲಿ ʼನಾವು ನಿಮ್ಮೊಂದಿಗೆ ಇದ್ದೇವೆ…ಪ್ರಿಯಾಂಕ್ ಖರ್ಗೆ’ ಎಂಬ ಭಿತ್ತಿಫಲಕಗಳನ್ನು ಪ್ರದರ್ಶಿಸಿದರು. ʼಆರ್‌ಎಸ್‌ಆರ್, ಬಿಜೆಪಿ ಮುರ್ದಾಬಾದ್ʼ, ʼಆರ್‌ಎಸ್‌ಎಸ್ ಬ್ಯಾನ್ʼ, ʼಪ್ರಿಯಾಂಕ್ ಖರ್ಗೆ ಹಮ್ ತುಮಾರೇ ಸಾಥ್ ಹೈʼ ಘೋಷಣೆ ಕೂಗಿದರು.
ʼಸಚಿವ ಪ್ರಿಯಾಂಕ್ ಖರ್ಗೆ ಡಾ.ಅಂಬೇಡ್ಕರ್ ತತ್ವ–ಸಿದ್ಧಾಂತಗಳಲ್ಲಿ ಅಚಲ ನಂಬಿಕೆ ಇಟ್ಟವರು. ಜಾತಿರಹಿತ, ವರ್ಗರಹಿತ, ಶೋಷಣೆ ಮುಕ್ತ ಸಮಾಜ ಸ್ಥಾಪನೆಗೆ ಶ್ರಮಿಸುತ್ತಿದ್ದಾರೆ. ಆದರೆ, ಅವರ ಏಳಿಗೆಯನ್ನು ಸಹಿಸದ ಜಾತಿವಾದಿಗಳು ಮಕ್ಕಳ ತಲೆಯಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇಂಥ ಸಂಘಟನೆಯ ಚಟುವಟಿಕೆಯನ್ನು ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ ನಿರ್ಬಂಧಿಸುವಂತೆ ಪತ್ರ ಬರೆದಿದ್ದನ್ನೆ ನೆಪವಾಗಿಟ್ಟುಕೊಂಡು ಸಚಿವ ಪ್ರಿಯಾಂಕ್ ತೇಜೋವಧೆ, ವೈಯಕ್ತಿಕ ನಿಂದನೆ ನಡೆಸಲಾಗುತ್ತಿದೆ. ಇದು ಖಂಡನೀಯʼ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ʼಸಂವಿಧಾನ ತೆಗೆದು ಮನುಸ್ಮೃತಿ ತರುವುದು ಆರ್‌ಎಸ್‌ಎಸ್ ಹುನ್ನಾರ. ಹೀಗಾಗಿ ಸಂವಿಧಾನವನ್ನು ಪ್ರತಿಪಾದಿಸುವ ಸಚಿವ ಪ್ರಿಯಾಂಕ್ ಬೆಳವಣಿಗೆ ಸಹಿಸದೇ ಅವರ ವಿರುದ್ಧ ಕೀಳುಮಟ್ಟದ ಭಾಷೆ ಬಳಸಿ ನಿಂದಿಸಲಾಗುತ್ತಿದೆ. ಸಮಾಜದಲ್ಲಿ ಕೆಟ್ಟ ಆಲೋಚನೆಗಳಿಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಪುಷ್ಟಿಕೊಡುತ್ತಿದೆ. ಪ್ರಿಯಾಂಕ್ ಖರ್ಗೆ ಅವರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಪ್ಪೇನಿಲ್ಲ. ಪ್ರಿಯಾಂಕ್ ಖರ್ಗೆ ಅವರೊಂದಿಗೆ ನಾವೆಲ್ಲರೂ ಇದ್ದೇವೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಆರ್‌ಎಸ್‌ಎಸ್ ಸಂಪೂರ್ಣವಾಗಿ ನಿಷೇಧಿಸಿ : ಅಂಕುಶ ಗೋಖಲೆ
ಪ್ರತಿಭಟನೆಯಲ್ಲಿ ಮಾಜಿ ಎಂಎಲ್ಸಿ ಅರವಿಂದಕುಮಾರ್ ಅರಳಿ, ಕೆ.ಪುಂಡಲಿಕರಾವ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ, ಮಹಾನಗರ ಪಾಲಿಕೆ ಅಧ್ಯಕ್ಷ ಮಹಮ್ಮದ್ ಗೌಸ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಪೂಜಾ ಜಾರ್ಜ್ ಸೇರಿದಂತೆ ಪ್ರಮುಖರಾದ ಪಂಡಿತ ಚಿದ್ರಿ, ಅಬ್ದುಲ್ ಮನ್ನಾನ್ ಸೇಠ್, ಚಂದ್ರಕಾಂತ ಹಿಪ್ಪಾಳಗಾಂವ್, ಶ್ರೀಕಾಂತ್ ಸ್ವಾಮಿ, ವಿಠಲದಾಸ್ ಪ್ಯಾಗೆ, ಓಂಪ್ರಕಾಶ ರೊಟ್ಟೆ, ಮಹೇಶ ಗೊರನಾಳಕರ್, ವಿನೋದ್ ಅಪ್ಪೆ, ಶಿವಮೂರ್ತಿ ಬಳತ್ ಸೇರಿದಂತೆ ಅನೇಕರಿದ್ದರು.





