ಗೋದಾವರಿ ಜಲಾನಯನ ಪ್ರದೇಶದ ಕಾರಂಜಾ ನೀರಾವರಿ ಯೋಜನೆಗೆ ಜಮೀನು ನೀಡಿದ ಸಂತ್ರಸ್ತ ರೈತರಿಗೆ 2026ರ ಜನವರಿ ಒಳಗೆ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿ ಆಗ್ರಹಿಸಿದ್ದಾರೆ.
ಬೀದರ್ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼಕಾರಂಜಾ ಸಂತ್ರಸ್ತರಿಗೆ ಮಾನವೀಯತೆಯ ಮಾನದಂಡದಂತೆ ಪರಿಹಾರ ನೀಡಲು ರಚಿಸಿರುವ ಸಮಿತಿಯ ವರದಿಯನ್ನು ಡಿಸೆಂಬರ್ ಅಂತ್ಯದೊಳಗೆ ಪಡೆದು 2026ರ ನೂತನ ವರ್ಷದ ಆರಂಭದಲ್ಲಿ ಕಾರಂಜಾ ರೈತ ಸಂತ್ರಸ್ತರಿಗೆ ಪರಿಹಾರ ಮೊತ್ತ ನೀಡಲು ಸರ್ಕಾರ ಸಮಾರೋಪಾದಿಯ ಕ್ರಮ ಕೈಗೊಳ್ಳಬೇಕುʼ ಎಂದು ಒತ್ತಾಯಿಸಿದರು.
ʼಕಾರಂಜಾ ನೀರಾವರಿ ಯೋಜನೆಗೆ ಭೂಮಿ ನೀಡಿದ ರೈತರಿಗೆ ವೈಜ್ಜಾನಿಕ ಮಾನದಂಡದಂತೆ ಮಾನವಿಯತೆ ಆಧಾರದ ಮೇಲೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬೀದರ್ ನಗರದಲ್ಲಿ 920 ದಿನಗಳ ಅಹೋರಾತ್ರಿ ಧರಣಿ ನಡೆಸಿದ್ದರು. ಈ ದೀರ್ಘಕಾಲದ ಹೋರಾಟ ಪರಿಗಣಿಸಿದ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿ 2025ರ ಎಪ್ರಿಲ್ 4ರಂದು ತಾಂತ್ರಿಕ ಸಮಿತಿ ರಚಿಸಿತು. ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯ ಆರು ಜನರ ತಾಂತ್ರಿಕ ಸಮಿತಿ ಮೂರು ತಿಂಗಳೊಳಗೆ ವರದಿ ನೀಡಲು ಸರಕಾರ ಸೂಚಿಸಿತ್ತು. ಆದರೆ, ಪ್ರಾದೇಶಿಕ ಆಯುಕ್ತರ ವರ್ಗಾವಣೆ ಹಿನ್ನೆಲೆ ಎಂಟು ತಿಂಗಳಾದರೂ ವರದಿ ಸಲ್ಲಿಕೆ ಆಗಲಿಲ್ಲ. ನೂತನವಾಗಿ ಬಂದ ಪ್ರಾದೇಶಿಕ ಆಯುಕ್ತರು, ಡಿಸೆಂಬರ್ ಅಂತ್ಯದವರೆಗೆ ವರದಿ ನೀಡುವ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡುತ್ತಾರೆʼ ಎಂದು ವಿವರಿಸಿದರು.
ʼಈಗಾಗಲೇ ನ್ಯಾಯಾಲಯಗಳು ನೀಡಿರುವ ತೀರ್ಪಿನಂತೆ ಪರಿಹಾರ ಹಣದ ಮೊತ್ತವನ್ನು ಪರಿಗಣಿಸಿ ಮಾನವೀಯತೆಯ ಮಾನದಂಡದಂತೆ, ಪ್ರತಿ ಎಕರೆಗೆ ನ್ಯಾಯಯುತವಾದ ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಚಿವ ರಹೀಂ ಖಾನ್, ಹಾಗೂ ಬೀದರ ಜಿಲ್ಲೆಯ ಎಲ್ಲ ಶಾಸಕರು, ಸಂಸದ ಹಾಗೂ ಸಂಘಟಿತ ರಾಜಕೀಯ ಇಚ್ಛಾಶಕ್ತಿ ತೋರಿ ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ಪರಿಹಾರ ಹಣ ದೊರಕಿಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕುʼ ಎಂದು ಮನವಿ ಮಾಡಿದರು.
ʼಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಿದರೆ, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ ಪುನಃ ಹೋರಾಟದ ಹೆಜ್ಜೆ ಇಡುವುದು ಅನಿವಾರ್ಯ. ಪ್ರಯುಕ್ತ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಸಕರಾತ್ಮಕವಾಗಿ ಸ್ಪಂದಿಸಬೇಕುʼ ಎಂದು ಎಚ್ಚರಿಸಿದರು.
ʼಕಾರಂಜಾ ನೀರಾವರಿ ಯೋಜನೆಗಾಗಿ ಹೆಚ್ಚುವರಿಯಾಗಿ ಅಧಿಕೃತವಾಗಿ ಸ್ವಾಧೀನ ಮಾಡಿಕೊಂಡಿರುವ ಜಮೀನಿಗೆ ಏಕರೂಪ ದರ ನಿಗದಿ ಮಾಡಬೇಕು. ಅದರಂತೆ, ಈಗಾಗಲೇ ಸರ್ಕಾರ ಹೆಚ್ಚುವರಿ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಹಣ ಮಂಜೂರು ಮಾಡಿದರೂ ಸಹ ಇಲಾಖೆಯ ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ರೈತ ಸಂತ್ರಸ್ತರಿಗೆ ಹಣ ಪಾವತಿಸದೆ ತೊಂದರೆ ನೀಡುತ್ತಿದ್ದಾರೆ. ಇದರ ಹಿಂದಿನ ಉದ್ದೇಶ ಭ್ರಷ್ಟಾಚಾರವೆಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ತಕ್ಷಣ ಸ್ಪಂದಿಸಿ ಕ್ರಮ ಕೈಗೊಂಡು ರೈತ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕುʼ ಎಂದು ಆಗ್ರಹಿಸಿದರು.
ಪ್ರತ್ಯೇಕ ರಾಜ್ಯ ಬೇಡಿಕೆಗೆ ಖಂಡನೆ :
ʼಇತ್ತೀಚಿಗೆ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಉತ್ತರ ಕರ್ನಾಟಕದ 15 ಜಿಲ್ಲೆಗಳನ್ನು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರ ಬರೆದಿರುವುದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಬಲವಾಡಿ ಖಂಡಿಸುತ್ತದೆʼ ಎಂದು ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದರು.
ʼಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳ ವಿಶಾಲ ಕರ್ನಾಟಕದ ಭಾಗವಾಗಿದ್ದು, ಏಕೀಕರಣದ ನಂತರ 30 ವರ್ಷಗಳ ನಿರಂತರ ನಿರ್ಲಕ್ಷ್ಯದ ವಿರುದ್ಧ ಸತತ ಹೋರಾಟದ ಫಲವಾಗಿ ಕೆಕೆಆರ್‌ಡಿಬಿ, 371(ಜೆ) ಅನುಷ್ಠಾನಗೊಂಡಿವೆ. ಇದರಿಂದ ನಮ್ಮ ಭಾಗದ ಜನರಿಗೆ ನೌಕರಿಗಳಲ್ಲಿ, ವೈದ್ಯಕೀಯ, ತಾಂತ್ರಿಕ, ವೃತ್ತಿಪರ ಕೋರ್ಸ್ ಗಳಲ್ಲಿ ಮೀಸಲಾತಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ 5,000 ಕೋಟಿ ವಿಶೇಷ ಅನುದಾನ ಬರುತ್ತಿದೆ. ಈ ಭಾಗ ನಿಧಾನವಾಗಿ ಅಭಿವೃದ್ಧಿಪಥದತ್ತ ಸಾಗಿದೆ. ಇದನ್ನು ಮುಂಬೈಕರ್ನಾಟಕ ಭಾಗದ ಕೆಲ ಶಾಸಕರು ಹೊಟ್ಟೆಕಿಚ್ಚುಪಟ್ಟು 371(ಜೆ) ಹಾಗೂ ವಿಶೇಷ ಅನುದಾನದ ರೆಡಿಮೇಡ್ ಪ್ರಯೋಜನ ಪಡೆದುಕೊಳ್ಳಲು ಕುತಂತ್ರ ನಡೆಸುತ್ತಿದ್ದಾರೆʼ ಎಂದು ತಿಳಿಸಿದರು.
ʼಅಖಂಡ ಕರ್ನಾಟಕ ರಾಜ್ಯವನ್ನು ಒಡೆಯುವ ಬಗ್ಗೆ ಮಾತನಾಡಿರುವ ಶಾಸಕ ರಾಜು ಕಾಗೆ ಅವರನ್ನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಅವರ ಮೇಲೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ತ್ವರಿತವಾಗಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಪಕ್ಷದಿಂದ ಉಚ್ಚಾಟಿಸಬೇಕುʼ ಎಂದು ಆಗ್ರಹಿಸಿದ್ದಾರೆ.
ʼಇದೇ ರೀತಿ ಕೆಲ ಸಂಘಟನೆಗಳು ಮೈಸೂರು ಕರ್ನಾಟಕ ಭಾಗವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಬೇಡಿಕೆಯಿಟ್ಟಿದ್ದಾರೆ. ಇದನ್ನೂ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಎಲ್ಲ ಜಿಲ್ಲೆಯ ಪದಾಧಿಕಾರಿಗಳು ಮತ್ತು ಜನರಪರವಾಗಿ ಒಂದೇ ಧ್ವನಿಯಲ್ಲಿ ಖಂಡಿಸುತ್ತೇವೆʼ ಎಂದು ದಸ್ತಿ ಹೇಳಿದರು.
ಇದನ್ನೂ ಓದಿ : ಬೀದರ್ | ಜಿಲ್ಲೆಯ 37 ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆಗೆ ಸಿದ್ಧತೆ
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಚಿಂತಕ ಆರ್.ಕೆ.ಹುಡಗಿ, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಚಿಂತಕರಾದ ವಿನಯಕುಮಾರ ಮಾಳಗೆ, ರೋಹನಕುಮಾರ, ಡಾ.ಮಾಜಿದ್ ದಾಗಿ,ಡಾ. ಅಸ್ಲಂ ಚೌಂಗೆ, ಡಾ.ರಾಜಶೇಖರ ರಂಜೋಳ ಖೇಣಿ ಹಾಗೂ ಸಮಿತಿಯ ಪ್ರಮುಖರಾದ ರಾಜಪ್ಪ ಕಮಲಪುರೆ, ಭೀಮರೆಡ್ಡಿ ಔರಾದ್, ಯೂಸೂಫ್ ರೇಕುಳಗಿ, ಮೊಹಮ್ಮದ ಐಮದ್ ಬಗದಲ್, ಮಾದಪ್ಪ ಸಂಗೊಳಗಿ, ಲಕ್ಷ್ಮೀ ಸಂಗೊಳಗಿ. ತೇಜಮ್ಮ ಹಿಲಾಲಪುರ, ವಿದ್ಯಾವತಿ ಔರಾದ್ ಮತ್ತಿತರರು ಉಪಸ್ಥಿತರಿದ್ದರು.





