ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕವು ಇಲ್ಲಿಯ ಐ.ಎಂ.ಎ. ಹಾಲ್‍ನಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಶಿವಶರಣ ಹರಳಯ್ಯ ನಾಟಕ ಪ್ರದರ್ಶನ ‘ಕಲ್ಯಾಣ ಕ್ರಾಂತಿ’ಯನ್ನು ನೆನಪಿಸಿತು.
12ನೇ ಶತಮಾನದಲ್ಲಿ ನಡೆದಿದ್ದ ಕಲ್ಯಾಣ ಕ್ರಾಂತಿಯಲ್ಲಿ ಶಿವಶರಣ ಹರಳಯ್ಯನವರು ವಹಿಸಿದ ಪಾತ್ರ, ಬಸವಣ್ಣನವರು ಮಾನವ ಘನತೆ ಎತ್ತಿ ಹಿಡಿದ ಪ್ರಸಂಗ ಇತ್ಯಾದಿಗಳನ್ನು ಕಲಾವಿದರು ಕಣ್ಣಿಗೆ ಕಟ್ಟುವ ಹಾಗೆ ಪ್ರಸ್ತುತಪಡಿಸಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.
90 ನಿಮಿಷಗಳ ನಾಟಕ ಬಸವಾದಿ ಶರಣರ ಕಾಲಕ್ಕೆ ಕರೆದೊಯ್ದಿತು. ನಾಟಕದ ಪ್ರಸಂಗಗಳು ನೆರೆದವರ ಕಣ್ಣಾಲಿಗಳನ್ನು ತೇವಗೊಳಿಸಿದವು. ಮನೋಜ್ಞವಾಗಿ ನಾಟಕ ಪ್ರದರ್ಶಿಸಿದ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆಯ ಕಲಾವಿದರಿಗೆ ಪ್ರೇಕ್ಷಕರು ಕಾಣಿಕೆ ಕೊಟ್ಟು, ಚಪ್ಪಾಳೆ ತಟ್ಟಿ, ಪ್ರೋತ್ಸಾಹಿಸಿದರು.
ಸಮಾನತೆಗಾಗಿ ಕಲ್ಯಾಣ ಕ್ರಾಂತಿ:
‘ಜಗತ್ತಿನಲ್ಲಿ ಆಸ್ತಿ, ಅಧಿಕಾರಕ್ಕಾಗಿ ಬಹಳಷ್ಟು ಕ್ರಾಂತಿಗಳು ನಡೆದಿವೆ. ಆದರೆ, ಸಮಾನತೆಗಾಗಿ ನಡೆದದ್ದು ಕಲ್ಯಾಣ ಕ್ರಾಂತಿ ಮಾತ್ರ’ ಎಂದು ನಾಟಕ ಪ್ರದರ್ಶನವನ್ನು ಉದ್ಘಾಟಿಸಿದ ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬುವಾಲಿ ನುಡಿದರು.
‘ಕಲ್ಯಾಣ ಕ್ರಾಂತಿ ಸಮಾನತೆಯನ್ನು ಸಾರಿತು. ಆ ಕ್ರಾಂತಿಯಲ್ಲಿ ಹರಳಯ್ಯನವರು ಮಹತ್ವದ ಪಾತ್ರ ವಹಿಸಿದ್ದರು ಎಂದು ತಿಳಿಸಿದರು. ಆಧುನಿಕ ಯುಗದಲ್ಲಿ ಎಲ್ಲ ಸೌಕರ್ಯಗಳಿವೆ. ಆದರೂ, ನೆಮ್ಮದಿಯನ್ನು ಹುಡುಕಬೇಕಾಗಿದೆ. ನಾಟಕಗಳ ವೀಕ್ಷಣೆಯಿಂದ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯವಿದೆ’ ಎಂದು ಹೇಳಿದರು.

‘ಇಂದಿನ ಆರ್ಟಿಫಿಷಲ್ ಇಂಟೆಲಿಜೆನ್ಸ್ ಯುಗದಲ್ಲಿ ನಾಟಕಗಳನ್ನು ಉಳಿಸಿಕೊಂಡು ಹೋಗುವುದು ದೊಡ್ಡ ಸವಾಲಾಗಿದೆ’ ಎಂದು ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಅಭಿಪ್ರಾಯಪಟ್ಟರು.
‘ಯಾವುದೇ ಘಟನೆ, ಪ್ರಸಂಗಗಳನ್ನು ಮನವರಿಕೆ ಮಾಡುವಲ್ಲಿ ನಾಟಕ ಪರಿಣಾಮಕಾರಿ ಮಾಧ್ಯಮವಾಗಿದೆ. ಹೀಗಾಗಿ ಮಹಾಸಭಾ ನಾಟಕ ಪ್ರದರ್ಶನ ಏರ್ಪಡಿಸಿದೆ. ಮುಂದೆಯೂ ನಾಟಕ ಸೇರಿದಂತೆ ದೇಸಿ ಕಲೆಗಳಿಗೆ ಉತ್ತೇಜನ ನೀಡಲಿದೆ’ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, ‘ಈಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತಿದೆ. ಅದರ ಪರಿಣಾಮವಾಗಿ, ವಿವಿಧ ಪ್ರಶಸ್ತಿಗಳು ಜಿಲ್ಲೆಗೆ ಒಲಿದು ಬರುತ್ತಿವೆ. ಮುಂದಿನ ದಿನಗಳಲ್ಲಿ ಕಲಾವಿದರಿಗೆ ವಿವಿಧ ಸೌಕರ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು’ ಎಂದು ಹೇಳಿದರು.
‘ಮಹಾಸಭಾದಿಂದ ಹರಳಯ್ಯನವರ ನಾಟಕ ಏರ್ಪಡಿಸಿರುವುದು ಸಂತಸ ಉಂಟು ಮಾಡಿದೆ. ಸಮಾಜವು ಶರಣರ ತತ್ವ ಪ್ರಸಾರಕ್ಕೆ ಕೊಡುಗೆ ನೀಡಲಿದೆ’ ಎಂದು ಜಿಲ್ಲಾ ಹರಳಯ್ಯ ಸಮಾಜದ ಅಧ್ಯಕ್ಷ ಸುಭಾಷ್ ಹಮಿಲಾಪುರ ತಿಳಿಸಿದರು.
ಇದನ್ನೂ ಓದಿ : ಬೀದರ್ | ಶಿಕ್ಷಕಿ ಭಾರತಿ ಲೋನಿಕರ್‌ಗೆ ಗ್ರಾಮಸ್ಥರಿಂದ ಅದ್ಧೂರಿ ಬೀಳ್ಕೊಡುಗೆ
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ಡಾ. ನಾಗೇಶ ಪಾಟೀಲ ಮಾತನಾಡಿದರು. ಗಾನಯೋಗಿ ಪಂಚಾಕ್ಷರಿ ಗವಾಯಿ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾಳೆ, ಉದ್ಯಮಿ ಜೈರಾಜ ಖಂಡ್ರೆ, ಡಾ. ವಿಜಯಶ್ರೀ ಬಶೆಟ್ಟಿ, ಜಿಲ್ಲಾ ಹರಳಯ್ಯ ಸಮಾಜದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟಿಳ್ಳೆಕರ್ ಮತ್ತಿತರರು ಇದ್ದರು. ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಹೊನ್ನಿಕೇರಿ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು.





