ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವ ಘಟನೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೀದರ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರಮುಖ ಮಾರ್ಗಗಳಲ್ಲಿ ರ್‍ಯಾಲಿ ನಡೆಸಿ ಶೂ ಎಸೆದ ವಕೀಲ ಕಿಶೋರ್ ರಾಕೇಶ್ ವಿರುದ್ಧ ಘೋಷಣೆಗಳನ್ನು ಹಾಕಿದರು. ಬಳಿಕ ಅಂಬೇಡ್ಕರ್ ವೃತ್ತದಲ್ಲಿ ಕಿಶೋರ್ ರಾಕೇಶ್ ಭಾವಚಿತ್ರ ದಹಿಸಿ ಆಕ್ರೋಶ ಹೊರ ಹಾಕಿದರು.
ಕೇಂದ್ರ ಸರ್ಕಾರವು, ಆರೋಪಿ ಕಿಶೋರ್ ರಾಕೇಶ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಹಾಗೂ ಸಂವಿಧಾನ ವಿರೋಧಿ ಚಟುವಟಿಕೆ ಕೈಗೊಳ್ಳುವುದನ್ನು ತಡೆಯಲು ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ನ್ಯಾಯವಾದಿ ಬಾಬುರಾವ ಹೊನ್ನಾ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌಧ್ದೆ, ದಸಂಸ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ಆರ್.ಪಿ.ಐ (ಅಂಬೇಡ್ಕರ್) ಪಕ್ಷದ ರಾಜ್ಯಾಧ್ಯಕ್ಷ ಮಹೇಶ್ ಗೋರನಾಳಕರ್, ಪೀಪಲ್ಸ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಮುಬಾಶಿರ್ ಶಿಂಧೆ ಸೇರಿದಂತೆ ಪ್ರಮುಖರಾದ ಅರುಣ ಪಟೇಲ್, ವಹೀಲ್ ಲಖನ್, ಕಾಶಿನಾಥ ಚೆಲ್ವಾ, ಶಿವರಾಜ ತಡಪಳ್ಳಿ, ಪ್ರಕಾಶ ರಾವಣ, ರಾಜಪ್ಪಾ ಗೂನ್ನಳ್ಳಿಕರ್, ಮಾಣಿಕ ಖಾನಾಪೂರೆ, ವಿನೋದ ಬಂದಗೆ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.





