ʼಮತಗಳ್ಳತನ ವಿರೋಧಿ ಅಭಿಯಾನ ಒಂದು ಪಕ್ಷದ ಹೋರಾಟವಲ್ಲ, ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟವಾಗಿದೆʼ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್ ಹೇಳಿದರು.
ಬಸವಕಲ್ಯಾಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಡಾ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ ಮತಗಳವು ವಿರೋಧಿ ಸಹಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ, ʼದೇಶದ ಸಂವಿಧಾನ ದೇಶದ ಎಲ್ಲಾ ನಾಗರಿಕರಿಗೆ ಎಲ್ಲಾ ಹಕ್ಕುಗಳನ್ನು ನೀಡಿದೆ. ಅದರಲ್ಲೂ ಮತದಾನ ಹಕ್ಕು ಅತ್ಯಂತ ಪವಿತ್ರವಾಗಿದೆ. ಆದರೆ, ಅದನ್ನು ಕದಿಯುವ ಅಥವಾ ಮರೆಮಾಚುವ ಯಾವುದೇ ಪ್ರಯತ್ನ ಜನರ ಹಕ್ಕಿಗೆ ವಿರುದ್ಧವಾಗಿದ್ದು, ಇದು ಖಂಡನೀಯʼ ಎಂದರು.
ನಮ್ಮ ಕಾಂಗ್ರೆಸ್ ಪಕ್ಷದಿಂದ ಇಡೀ ದೇಶದಲ್ಲಿ 5 ಕೋಟಿ ಸಹಿ ಸಂಗ್ರಹ ಮಾಡುವ ಉದ್ದೇಶವಿದ್ದು, ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತರು ಬಿಜೆಪಿ ಮಾಡಿರುವ ಈ ‘ವೋಟ್ ಚೋರಿ’ ಬಗ್ಗೆ ತಮ್ಮ ಬೂತ್ ಮಟ್ಟದಲ್ಲಿ ಮತದಾರರಿಗೆ ಮನವರಿಕೆ ಮಾಡಿ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

‘ಚುನಾವಣೆ ಆಯೋಗ ಮತದಾರರ ಪಟ್ಟಿಯಲ್ಲಿನ ಹೆಸರು ಸೇರ್ಪಡೆ, ಡಿಲೀಟ್ ಮಾಡಲು ಸಮಯಾವಕಾಶ ಕೊಟ್ಟು ಸಾರ್ವಜನಿಕಗೊಳಿಸಬೇಕು. ಎಲ್ಲ ಮತದಾರರ ಭಾವಚಿತ್ರ ಇರುವಂತೆ ಮತದಾರರ ಪಟ್ಟಿ ಸಿದ್ದಪಡಿಸಬೇಕು. ಬಸವಕಲ್ಯಾಣ ಕ್ಷೇತ್ರದಲ್ಲಿ ಕಡಿಮೆ ವಯಸ್ಸಿನವರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದ್ದು, ತಪ್ಪಿಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು.
ʼನಾವು ಅಧಿಕಾರಕ್ಕಾಗಿ ಕೆಲಸ ಮಾಡದೇ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದ್ದೇವೆ. ಕ್ಷೇತ್ರದ ಪ್ರತಿ ಬೂತ್‌ನಲ್ಲಿ ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಅಂಕಿ-ಅಂಶಗಳೊಂದಿಗೆ ಪರಿಶೀಲಿಸಿ, ಮತಗಳವು ನಡೆದರೆ ಅದರ ವಿರುದ್ಧ ಎಲ್ಲರೂ ಪ್ರಜಾಪ್ರಭುತ್ವ ಉಳಿವಿಗಾಗಿ ಧ್ವನಿಯೆತ್ತಬೇಕುʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ʼಶಾಹೀನ್ʼ ಸಂಸ್ಥೆಯಿಂದ ಮಹಮೂದ್ ಗಾವಾನ್ ಮದರಸಾ ನವೀಕರಣ ಆರಂಭ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್ ಸೇರಿದಂತೆ ಪ್ರಮುಖರಾದ ಅಜರಲಿ ನವರಂಗ, ಬಾಬು ಹೊನ್ನಾ ನಾಯಕ, ಡಿ.ಕೆ.ದಾವೂದ್, ರವಿ ಗಾಯಕವಾಡ, ರವಿ ಬುರಾಳೆ, ಶಿವು ಶೆಟಗರ, ದತ್ತು ಪದ್ಮ, ಆನಂದ್ ಪಾಟೀಲ್, ಲತಾ ಹಾರಕುಡೆ, ಸಗಿರೋದ್ದಿನ್, ಮನೋಹರ್ ಮೈಸೇ, ಯುವರಾಜ್ ಭೆಂಡೆ, ಮಲ್ಲು ಬೊಕ್ಕೆ, ನಾಗನಾಥ ಮೇತ್ರೆ, ಗಫಾರ್ ಪೇಶ ಇಮಾಮ್, ದಿಲೀಪ್ ಶಿಂಧೆ, ಶಶಿಕಾಂತ್ ದುರ್ಗೆ, ಭೀಮಶಾ ಫುಲೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.





