ಕನಕದಾಸರು ತಮ್ಮ ಕೀರ್ತನೆಗಳ ಮುಖಾಂತರ ಸಮಾಜದಲ್ಲಿ ಸುಧಾರಣೆ ತಂದಿದ್ದಾರೆ ಎಂದು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದರು.
ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಭಕ್ತ ಶ್ರೇಷ್ಠ ಕನಕದಾಸರ 538ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ಸಮಾಜದ ಅಂಕುಡೊಂಕು, ಅಸಮಾನತೆ ಜಾತಿ ವ್ಯವಸ್ಥೆಯನ್ನು ತಮ್ಮ ಕೀರ್ತನೆಗಳ ಮುಖಾಂತರ ಹೋಗಲಾಡಿಸಿದರು. ʼಕುಲ-ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆನೇನಾದರು ಬಲ್ಲಿರಾʼ ಎಂದು ಹೇಳುತ್ತಾ ಜಾತಿ ವ್ಯವಸ್ಥೆಯನ್ನು ಕಟುವಾಗಿ ಖಂಡಿಸಿದ್ದಾರೆ. ಹಳ್ಳಿ ಹಳ್ಳಿಗೆ ಸಂಚಾರ ಮಾಡುವುದರ ಮೂಲಕ ಜನರಿಗೆ ಸತ್ಯ ಅಸತ್ಯತೆ ಬಗ್ಗೆ ಅರಿವು ಮೂಡಿಸಿದ್ದಾರೆ. ಮಹಾತ್ಮರು ಯಾವುದೇ ಒಂದು ಜಾತಿಗೆ ಸಂಬಂಧಸಿದವರಲ್ಲ, ಅವರು ಇಡೀ ಸಮಾಜದ ಏಳಿಗೆಗೆ ದುಡಿವುದರ ಮೂಲಕ ಸಮಾಜದಲ್ಲಿ ಸುಧಾರಣೆ ತಂದು ಶಾಂತಿ ಸಮಾನತೆ, ಭಾತೃತ್ವ ಸಾರಿದ್ದಾರೆʼ ಎಂದರು.

ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಮಾತನಾಡಿ, ʼಕನಕದಾಸರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಒಗ್ಗೂಡಿ ಜಾತಿ, ಕುಲ, ಮತ ಎನ್ನದೆ ಬಾಳಬೇಕುʼ ಎಂದರು.
ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ʼಜಾತಿ, ಕುಲಕ್ಕಿಂತ ಮಾನವ ಧರ್ಮ ದೊಡ್ಡದು ಎಂದು ವಿಶ್ವಕ್ಕೆ ಸಂದೇಶ ಸಾರಿದ ಕನಕದಾಸರು ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆʼ ಎಂದರು.
ಮಾಜಿ ಸಚಿವ ಬಂಡೇಪ್ಪ ಖಾಶಂಪೂರ ಅವರು ಮಾತನಾಡಿ, ʼಕನಕದಾಸರು ಶ್ರೀಕೃಷ್ಣರ ಭಕ್ತರಾಗಿದ್ದರಿಂದ ಉಡುಪಿಗೆ ಹೋಗಿ ಕೃಷ್ಣನ ದರ್ಶನ ಪಡೆಯಲು ಹೋದಾಗ ಅವರಿಗೆ ದೇವಸ್ಥಾನದ ಒಳಗೆ ಬಿಡಲಿಲ್ಲ. ಅವಾಗ ಹೊರಗಡೆಯಿಂದ ಕೀರ್ತನೆ ಹಾಡುಗಳು ಹಾಡುತ್ತಿರುವಾಗ ಶ್ರೀ ಕೃಷ್ಣನೇ ಗೋಡೆ ಒಡೆದು ಮೂರ್ತಿ ತಿರುಗಿಸಿ ದರ್ಶನ ನೀಡಿದರು ಎನ್ನಲಾಗುತ್ತದೆ. ಭಕ್ತಿ ಎನ್ನುವುದು ಅಂತರಾಳದಲ್ಲಿ ಇರಬೇಕೇ ಹೊರತು ತೋರಿಕೆಗಲ್ಲʼ ಎಂದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ ಬೀದರನ ಉಪನ್ಯಾಸಕ ಡಾ.ಸಂಗಪ್ಪಾ ತೌಡಿ ವಿಶೇಷ ನೀಡಿ, ʼ ಪ್ರಸ್ತುತ ಸಮಾಜಕ್ಕೆ ಕನಕದಾಸರ ವಿಚಾರಗಳು ಅತ್ಯಂತ ಪರಿಣಾಕಾರಿಯಾಗಿ ಪಾತ್ರ ನಿರ್ವಹಿಸುತ್ತವೆ. ʼನಾನು ಎನ್ನುವ ಅಹಂಕಾರ ಹೋದಲ್ಲಿ ಅಂಥವರಿಗೆ ಮಾತ್ರ ಸ್ವರ್ಗ ಅಥವಾ ಮುಕ್ತಿಯನ್ನು ಪ್ರಾಪ್ತವಾಗುತ್ತದೆʼ ಎನ್ನುವ ಕನಕದಾಸರ ನುಡಿ ವಾಸ್ತವಿಕತೆ ಬಿಂಬಿಸುತ್ತದೆ. ʼಜ್ಞಾನಿಗಳಿಗೆ ಕನಕನ ಬೆಡಗು ತಿಳಿಯಲೇ ಇಲ್ಲ. ಇಂತಹ ಸಂದರ್ಭಗಳಿಂದ ಕನಕನ ತೇಜಸ್ಸು ಇನ್ನುಷ್ಠು ಮಿರುಗ ತೊಡಗಿತ್ತು. ಅಜ್ಞಾನಿಗಳ ಮುಖವು ಕಬ್ಬಿಣದಂತೆ ಜಂಗು ಹಿಡಿದು ಹೋಯಿತು. ಇಂತಹ ಲೋಕದ ಸತ್ಯಗಳನ್ನು ಕನಕದಾಸರು ನಮಗೆ ನೀಡಿದ್ದಾರೆʼ ಎಂದು ಪ್ರತಿಪಾದಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಪೂಜೆ ಸಲ್ಲಿಸಿ ನಂತರ ಬೊಮಗೊಂಡೇಶ್ವರ ವೃತ್ತ ಬಳಿ ಕನಕದಾಸರ ಭಾವಚಿತ್ರ ಹೊತ್ತ ರಥ ಮೆರವಣಿಗೆಗೆ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಶಾಸಕ ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ಬಂಡೇಪ್ಪ ಖಾಶಂಪೂರ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಚಾಲನೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಔಧತಪೂರ ಮಠದ ಮಚೇಂದ್ರ ಮುತ್ಯಾ, ಬೀದರ ತಹಸಿಲ್ದಾರ್ ರವೀಂದ್ರ ದಾಮಾ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜುಕುಮಾರ ಅತಿವಾಳೆ, ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಮುಖಂಡರಾದ ಬಾಬುರಾವ ಮಲ್ಕಾಪುರೆ, ಪಂಡಿತರಾವ ಚಿದ್ರಿ, ಪೀರಪ್ಪಾ ಔರಾದೆ, ಸಂಗಪ್ಪ ಮಲ್ಕಾಪುರೆ, ಸಂತೋಷ ಜೋಳದಾಪಕೆ, ಹನುಮಂತ ಮಲ್ಕಾಪುರೆ, ರಾಜಕುಮಾರ ಕಂದಗೂಳೆ ಸೇರಿದಂತೆ ಸಮಾಜದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಪಿಡಿಒ ಹುದ್ದೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ನಿಯೋಜನೆ






