ಜೀವನದಲ್ಲಿ ಯಶಸ್ಸು ಗಳಿಸಲು ಶಿಕ್ಷಣ ಎಷ್ಟು ಮುಖ್ಯ ಇದೆಯೋ ಅದೇ ರೀತಿ ಕ್ರೀಡೆಯೂ ಅಷ್ಟೆ ಮುಖ್ಯವಾಗಿದೆ. ಹೆಣ್ಣುಮಕ್ಕಳು ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡು ಮಾನಸಿಕ, ದೈಹಿಕವಾಗಿ ಸದೃಢವಾಗಬೇಕು ಬಸವಕಲ್ಯಾಣ ತಹಸೀಲ್ದಾರ್ ದತ್ತಾತ್ರೇಯ ಗಾದಾ ಹೇಳಿದರು.
ಬಸವಕಲ್ಯಾಣದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತಾಲ್ಲೂಕಿನ ವಿವಿಧ ಇಲಾಖೆಯ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಿಶೋರಿಯರಿಗೆ ಕ್ರೀಡಾ ಸ್ಪರ್ಧೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರೂಪ ಎಸ್ ಕೋಟೆಗೌಡರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಕ್ರೀಡೆಯಲ್ಲಿ ಹೆಣ್ಣು-ಗಂಡು ಎಂದು ಭೇದಭಾವ ಮಾಡದೆ ಎಲ್ಲರೂ ಭಾಗವಹಿಸಿ ಸಬಲರಾಗಬೇಕುʼ ಎಂದರು.
ಸಂಸ್ಥೆಯ ನಿರ್ದೇಶಕಿ ಸರಸ್ವತಿ ಅವರು ಪ್ರಾಸ್ತಾವಿಕ ಮಾತನಾಡಿ, ʼಸಂಸ್ಥೆಯು ಹದಿಹರೆಯದ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದು, ಕ್ರೀಡೆಯಲ್ಲಿ ಹೆಣ್ಣು ಮಕ್ಕಳು ಹೆಚ್ಚು ತೊಡಗಿಸಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು ಸ್ವಾವಲಂಬನೆ ಬದುಕು ನಡೆಸಬೇಕುʼ ಎಂದರು.
ತಾಲೂಕಾ ಪಂಚಾಯತ ಇಒ ರಮೇಶ ಸುಲ್ಪಿ ಮಾತನಾಡಿ, ʼಸಂಸ್ಥೆಯು ಮಹಿಳೆಯರಿಗೆ ಮತ್ತು ಮಕ್ಕಳಿಗೋಸ್ಕರ ಟೇಲರಿಂಗ್, ಕಂಪ್ಯೂಟರ್ ತರಬೇತಿ ಸೇರಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಇಂದು ಕಿಶೋರಿಯರಿಗಾಗಿ ಕ್ರೀಡೆ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನಿಯʼ ಎಂದು ನುಡಿದರು.
ಇದನ್ನೂ ಓದಿ : ಬೀದರ್ | ಲಂಚ ಕೇಳಿದ ಆರೋಪ : ಗ್ರಾಮ ಲೆಕ್ಕಿಗ ಅಮಾನತು
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜೋಸ್ ವಿ.ಕೆ, ಖಜಾಂಚಿ ಸಂತೋಷಕುಮಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿನಿಯರು ಭಾಗವಹಿಸಿದರು.





