ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಹಂಚಿಕೆಯಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಇದು ಸರಿಪಡಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.
ಔರಾದ(ಬಿ) ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ನಡೆದ ಬಂಜಾರಾ ಸಮಾವೇಶ ಹಾಗೂ ಒಳ ಮೀಸಲಾತಿ ಕುರಿತ ಚಿಂತನ- ಮಂಥನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ʼಕಾಂಗ್ರೆಸ್ ಸರ್ಕಾರ ತೀವ್ರ ಹಿಂದುಳಿದಿರುವ ಬಂಜಾರಾ, ಭೋವಿ, ಕೊರಮ, ಕೊರಚ ಸಮಾಜಗಳನ್ನು ಕಡೆಗಣಿಸುತ್ತಾ ಬಂದಿದೆ. ಹಿಂದೊಮ್ಮೆ ಈ ಸಮಾಜಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರ ಹಾಕುವ ಪ್ರಯತ್ನ ಮಾಡಿತ್ತು. ಆದರೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಅದು ಸಾಧ್ಯವಾಗಲಿಲ್ಲʼ ಎಂದರು.
ʼಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಈ ನಾಲ್ಕೂ ಸಮುದಾಯಗಳಿಗೆ ಶೇ 4.5ರಷ್ಟು ಮೀಸಲಾತಿ ಕೊಟ್ಟಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಈ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ನಿರೀಕ್ಷೆಯಿತ್ತು. ಆದರೆ ನಾಲ್ಕು ಸಮುದಾಯಗಳೊಂದಿಗೆ ಇನ್ನೂ 59 ಸಮುದಾಯಗಳನ್ನು ಸೇರಿಸಿ ಬರೀ ಶೇ 5ರಷ್ಟು ಮೀಸಲಾತಿ ಕೊಟ್ಟು ಘೋರ ಅನ್ಯಾಯ ಮಾಡಿದೆʼ ಎಂದು ಆಕ್ರೋಶ ಹೊರಹಾಕಿದರು.
ʼನ್ಯಾಯಮೂರ್ತಿ ನಾಗಮೋಹನದಾಸ್ ವರದಿಯ ಬಗ್ಗೆ ಆರಂಭದಿಂದಲೂ ಅಪಸ್ವರಗಳು ಕೇಳಿಸಿದ್ದವು. ಅವೈಜ್ಞಾನಿಕ ಮತ್ತು ದೋಷಪೂರಿತ ವರದಿಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದೆಂದು ಎಷ್ಟೇ ಹೋರಾಟ ಮಾಡಿದ್ದರೂ ಜನತೆಯ ಕೂಗನ್ನು ಕಿವಿಗೆ ಹಾಕಿಕೊಳ್ಳದೆ ಮನಸ್ಸಿಗೆ ತೋಚಿದಂತೆ ಒಳ ಮೀಸಲಾತಿಯನ್ನು ವರ್ಗೀಕರಣ ಮಾಡಿದ್ದಾರೆ. ಈ ಬಗ್ಗೆ ಸಮಾಜ ಬಾಂಧವರು ಜಾಗೃತರಾಗಬೇಕುʼ ಎಂದು ಹೇಳಿದರು.
ʼರಾಜ್ಯದಲ್ಲಿ ಬಂಜಾರ ಸಮುದಾಯವು ಇನ್ನೂ ಸಾಕಷ್ಟು ಹಿಂದುಳಿದಿದೆ. ವಲಸೆ, ಅನಕ್ಷರತೆ, ಬಡತನದಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ನಾನು ಸಮಾಜದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದೇನೆ. ಸಮಾಜ ಬಾಂಧವರು ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೇ ಗೌರವಯುತವಾಗಿ ಬದುಕಬೇಕು. ಯಾವುದೇ ದೂರು ದುಮ್ಮಾನಗಳಿಗೆ ಆಸ್ಪದ ಕೊಡಬಾರದುʼ ಎಂದು ತಿಳಿಸಿದರು.
ʼಬಂಜಾರಾ ಸಮಾಜದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ಐಎಎಸ್, ಐಪಿಎಸ್, ಎಂಜಿನಿಯರ್, ವೈದ್ಯಕೀಯ ವೃತ್ತಿಯಂತಹ ಉನ್ನತ ಹುದ್ದೆಗಳನ್ನು ಪಡೆಯಬೇಕೆಂಬ ಕನಸಿದೆ. ಬಡವರು, ಅನಾಥ ಮಕ್ಕಳು ಪ್ರತಿಭಾವಂತರಿದ್ದರೂ ಓದಲು ಸಾಧ್ಯವಾಗದತಂಹ ಮಕ್ಕಳಿದ್ದರೆ ನನ್ನ ಗಮನಕ್ಕೆ ತನ್ನಿ ಅಂಥವರ ಸಹಕಾರಕ್ಕೆ ನಾನು ಸದಾ ಸಿದ್ಧನಿದ್ದೇನೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಯಾವ ಹುದ್ದೆಗೂ ಸಲ್ಲಿಕೆಯಾಗದ ನಾಮಪತ್ರ : ಪತ್ರಕರ್ತರ ಸಂಘಕ್ಕೆ ಪುನಃ ಚುನಾವಣೆ
ಸಮಾಜದ ಮುಖಂಡರಾದ ಮಾರುತಿ ಚವ್ಹಾಣ, ಪ್ರತೀಕ ಚವ್ಹಾಣ, ಪ್ರದೀಪ ಪವಾರ, ಸಚಿನ ರಾಠೋಡ, ಸುಜಿತ ರಾಠೋಡ, ಧನಾಜಿ ರಾಠೋಡ, ಸೂರ್ಯಕಾಂತ ಪವಾರ, ಪ್ರಹ್ಲಾದ ರಾಠೋಡ, ಸೋನಾಜಿ ರಾಠೋಡ, ಬಾಬು ರಾಠೋಡ ಕೋರೆಕಲ್, ವಸಂತ ರಾಠೋಡ ಮೆಡಪಳ್ಳಿ, ರಮೇಶ ಜಾಧವ ಮಾಳೆಗಾಂವ, ಕಾಳಿದಾಸ ಆಡೆ, ಸೋನು ರಾಠೋಡ, ಬಸವರಾಜ ನಾಯಕ್, ಬಾಬು ರಾಠೋಡ, ಶಿವಾಜಿ ರಾಠೋಡ, ಸಂಜೀವ ಚವ್ಹಾಣ, ಸಂಜೀವ ರಾಠೋಡ, ಬಬನ್ ಚವ್ಹಾಣ, ರಾಮದೇವ ಕಾರಬಾರಿ, ಲಕ್ಷ್ಮಣ ಜಾಧವ, ಜಿಲ್ಲಾ ಪಂಚಾಯತ, ತಾಲ್ಲೂಕು ಪಂಚಾಯತ, ಗ್ರಾಮ ಪಂಚಾಯತ್ ಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಬಂಜಾರಾ ಕ್ರಾಂತಿದಳದ ಅಧ್ಯಕ್ಷರು, ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.





