ಬೀದರ್ ತಾಲೂಕಿನ ಇಸ್ಲಾಂಪುರ ಗ್ರಾಮದ ಬಸ್ ನಿಲುಗಡೆಯಲ್ಲಿ, ಸಾರಿಗೆ ಸಂಸ್ಥೆಯ ಬಸ್‌ಗಳನ್ನು ನಿಲ್ಲಿಸದೇ ಹೋಗುತ್ತಿರುವುದನ್ನು ಖಂಡಿಸಿ ವಿಧ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬುಧವಾರ ದಿಡೀರನೇ ಪ್ರತಿಭಟನೆ ನಡೆಸಿದ್ದಾರೆ.
ಭಾಲ್ಕಿ, ನಿಟ್ಟೂರ(ಬಿ)ದಿಂದ ಹೊರಡುವ ಬಸ್‌ಗಳು ಯರನಳ್ಳಿ, ಇಸ್ಲಾಂಪುರ ಮಾರ್ಗವಾಗಿ ಬೀದರ್‌ಗೆ ತೆರಳುತ್ತವೆ. ಆದರೆ, ಇಸ್ಲಾಂಪುರ ಗ್ರಾಮದಲ್ಲಿ ಬಸ್ ನಿಲ್ಲಿಸದೇ ಹೋಗುತ್ತಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಬೀದರ್ ನಗರಕ್ಕೆ ತೆರಳುತ್ತಾರೆ. ಸರಿಯಾದ ಸಮಯಕ್ಕೆ ಸರಕಾರಿ ಬಸ್ ಗಳು ಬಂದರೂ, ಬಸ್ಸಿನ ಚಾಲಕರು ವಿದ್ಯಾರ್ಥಿಗಳನ್ನು ನೋಡಿದ ಕೂಡಲೇ ನಿಲುಗಡೆಯಲ್ಲಿ ಬಸ್ ನಿಲ್ಲಿಸದೇ ಹೋಗುತ್ತಾರೆ. ಇದೇ ರೀತಿಯಾಗಿ ನಿತ್ಯಲೂ ಎಲ್ಲಾ ಬಸ್ ಚಾಲಕರು ಮಾಡುತ್ತಿದ್ದು, ಇದರಿಂದಾಗಿ ಎಲ್ಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದೆ’ ಎಂದು ಗ್ರಾಮದ ಮುಖಂಡ ವೈಜಿನಾಥ ಜೀರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಇಸ್ಲಾಂಪುರ ಗ್ರಾಮ ಬಸ್ ನಿಲುಗಡೆಯಲ್ಲಿ ಬಸ್ ನಿಲ್ಲಿಸಲು ಸೂಚಿಸಬೇಕು. ಈ ಮಾರ್ಗವಾಗಿ ಹೊಸ ಬಸ್ ಓಡಿಸಬೇಕು. ಸಾರಿಗೆ ಬಸ್‌ಗಳು ಇಸ್ಲಾಂಪುರ ಗ್ರಾಮದಲ್ಲಿ ಬರುವಂತೆ ಕ್ರಮ ಕೈಗೊಳ್ಳಬೇಕು
ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಣಿಕ, ಸಿದ್ದು, ಮಂಜುನಾಥ, ಸುಹಾಸಿನಿ, ಭಾಗ್ಯಜ್ಯೋತಿ, ಶಿವಾನಿ, ಸಂಗೀತಾ, ಸುನಿತಾ, ಅಶೋಕ, ಪ್ರಜ್ವಲ್, ದತ್ತು, ಸಾಯಿನಾಥ್ ಸೇರಿದಂತೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.





