ಇಂದಿನ ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕ ಓದಬೇಕು. ಜ್ಞಾನವೇ ಎಲ್ಲದಕ್ಕೂ ಮುಖ್ಯ ಎಂದು ಸಿದ್ಧಾರ್ಥ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಪ್ರಭು ಹೇಳಿದರು.
ಬೀದರ್ ನಗರದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ ಹಿರಿಯ ಸಾಹಿತಿ ಎಸ್.ಎಂ.ಜನವಾಡಕರ್ ಅವರ ಬದುಕು-ಬರಹ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್.ಎಂ.ಜನವಾಡಕರ್ ಅವರು ಜಿಲ್ಲೆಯ ಹಿರಿಯ ಸಾಹಿತಿಗಳಲೊಬ್ಬರು. ಜಿಲ್ಲೆಯ ವಿಶೇಷತೆ ಕುರಿತು ಅವರ ಬರಹಗಳಲ್ಲಿ ಹಿಡಿದಿಟ್ಟಿದ್ದಾರೆ. ಬೌದ್ಧ ಸಾಹಿತ್ಯಕ್ಕೆ ಅವರ ಕೊಡುಗೆ ಇದೆ. ಇಂದಿನ ಮಕ್ಕಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕುʼ ಎಂದರು.
ಯುವ ಸಾಹಿತಿ ಪವನ ಬಾಲೇರ ಮಾತನಾಡಿ, ʼಎಸ್ ಎಂ ಜನವಾಡಕರ್ ಅವರು ಅನೇಕ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ನಾಡು-ನುಡಿ ಭಾಷೆ ಕುರಿತು ಅವರ ಬರಹಗಳಲ್ಲಿ ಕಾಣಬಹುದುʼ ಎಂದರು.
ಹಿರಿಯ ಕಥೆಗಾರರ ಗುರುನಾಥ ಅಕ್ಕಣ್ಣಾ ಮಾತನಾಡಿ, ʼಸಾಹಿತಿಗಳು ಸಮಾಜದ ಕಣ್ಣು, ಕಿವಿಯಾಗಬೇಕು. ರವಿ ಕಾಣದು ಕವಿ ಕಂಡನು ಎಂಬಂತೆ ಸಮಾಜದ ಅಂಕುಡೊಂಕುಗಳನ್ನು ಬರಹಗಾರ ತಿದ್ದುವ ಕೆಲಸ ಮಾಡಬೇಕು. ಸಮಾಜ ಪರಿವರ್ತನೆಯಲ್ಲಿ ಸಾಹಿತಿಗಳ ಪಾತ್ರ ಮುಖ್ಯವಾಗಿದೆʼ ಎಂದರು.
ಚುಟುಕು ಸಾಹಿತಿ ಪುಷ್ಪ ಕನಕ ಮಾತನಾಡಿ, ʼಬಹುತೇಕ ಬರಹಗಾರರು ಎಲ್ಲ ಪ್ರಕಾರದ ಸಾಹಿತ್ಯ ರಚನೆ ಅಸಾಧ್ಯ. ಆದರೆ ಜನವಾಡಕರ್ ಅವರು ಬುದ್ಧ ಸಾಹಿತ್ಯ ಸೇರಿದಂತೆ ವಿವಿಧ ಪ್ರಕಾರದಲ್ಲಿ ಸಾಹಿತ್ಯ ರಚಿಸಿದ್ದಾರೆʼ ಎಂದರು.
ಶಬನಮ್ ಟ್ರಸ್ಟ್ ಅಧ್ಯಕ್ಷೆ ಡಾ.ಮಕ್ತುಂಬಿ ಎಂ. ಅವರು ಮಾತನಾಡಿ, ʼಎಸ್.ಎಂ.ಜನವಾಡಕರ್ ಅವರು ಅತಿ ಹೆಚ್ಚು ಸಾಹಿತ್ಯ ಬರೆದು ಸಮಾಜಕ್ಕೆ ನೀಡಿದ್ದಾರೆ. ತಮ್ಮ ವೃತಿಯೊಂದಿಗೆ ಪ್ರವೃತಿಯಿಂದ ಸಾಹಿತ್ಯದ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಸಾಧನೆ ಎಲ್ಲರಿಗೂ ಪ್ರೇರಣೆ ನೀಡಲಿʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಪಿಡಿಒ ಹುದ್ದೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ನಿಯೋಜನೆ
ಕಾರ್ಯಕ್ರಮದಲ್ಲಿ ನಾಗಶಟ್ಟಪ್ಪ ಜೋತ್ಯಪ್ಪ , ಗುಂಡಪ್ಪ ಸೇರಿದಂತೆ ಕಾಲೇಜಿನ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಸುಲೋಚನಾ ನಿರೂಪಿಸಿದರು. ಏಕನಾಥ ಸ್ವಾಗತಿಸಿದರು. ಪ್ರೀಯಂಕಾ ವಂದಿಸಿದರು.





