ಹಲವು ಅಧಿಕಾರಿಗಳ ಸೂಕ್ಷ್ಮ ಚೆಹರೆಗಳನ್ನು ಅರಿಯಲು ಆಳವಾದ ಅಧ್ಯಯನ ಅಗತ್ಯ. ಸಾಂಸ್ಕೃತಿಕ ರಾಜಕಾರಣ, ಪ್ರಭುತ್ವದ ತಂತ್ರ , ನಡೆಗಳು ಗಂಭೀರ ಓದಿನಿಂದ ಗಟ್ಟಿಯಾಗಿ ತಿಳಿಯಬಹುದು ಎಂದು ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಹೇಳಿದರು.
ಬಸವಕಲ್ಯಾಣದ ರಥ ಮೈದಾನದಲ್ಲಿನ ಬಿಕೆಡಿಬಿ ಸಭಾ ಭವನದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಬಸವಕಲ್ಯಾಣ ಶಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ʼಜ್ಞಾನದ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಅಧಿಕಾರ ಬಳಕೆಯಾಗುವುದು. ಒಂದು ಕೃತಿ ಇಡೀ ಸಾಮಾಜಿಕ ಮತ್ತು ಸಾಂಸ್ಕೃತಿಕ ಚೆಹರೆ ಒಳಗೊಂಡಿರುತ್ತದೆ. ಗ್ರಂಥಾಲಯಗಳು ಹಲವು ಜೀನಿಯಸ್ ಗಳ ವ್ಯಕ್ತಿತ್ವ ರೂಪಿಸಿದೆ. ಒಂದು ಇಡೀ ಕಾಲಮಾನದ ಮತ್ತು ಸಮಕಾಲೀನ ಸಾಂಸ್ಕೃತಿಕ ಸಂದರ್ಭವನ್ನು ಗ್ರಂಥಾಲಯದ ಕೃತಿಗಳಲ್ಲಿ ಅಡಕವಾಗಿರುತ್ತವೆ. ಸ್ಪರ್ಧಾತ್ಮಕ ಓದು, ಸಂಶೋಧನಾ ಅಧ್ಯಯನಗಳು, ಸಾಂಸ್ಕೃತಿಕ ಶೋಧನೆಯ ದಾರಿಗಳು, ಬದುಕಿನ ಬಹುಮುಖಿ ಚಹರೆಗಳನ್ನು ಗ್ರಂಥಾಲಯದ ಮುಖೇನ ಅರಿಯಬಹುದುʼ ಎಂದರು.
ಹುಲಸೂರಿನ ತಹಶೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ʼಗ್ರಂಥಾಲಯಗಳು ಹೊಸ ಜ್ಞಾನದ ನೆಲೆಯಾಗಿವೆ. ಹಲವು ವಲಯಕ್ಕೆ ಸಂಬಂಧಿಸಿದ ಕೃತಿಗಳು ಗ್ರಂಥಾಲಯದಲ್ಲಿ ಲಭ್ಯಯಿವೆ. ಅವನ್ನು ಓದುವ ಮೂಲಕ ಹೊಸ ಜ್ಞಾನಕ್ಕೆ ತೆರೆದುಕೊಳ್ಳಬೇಕು. ಪುಸ್ತಕ ಓದಿನಿಂದ ಮಾತ್ರ ಜೀವನದಲ್ಲಿ ಬದಲಾವಣೆ ಸಾಧ್ಯʼ ಎಂದರು.
ʼಹೊಸ ಪೀಳಿಗೆ ಪುಸ್ತಕ ಓದುವಲ್ಲಿ ನಿರಾಸಕ್ತಿ ಹೊಂದಿದ್ದಾರೆ. ವಾರದ ಒಂದು ದಿನದ ಶಾಲಾ ಅವಧಿ ಗ್ರಂಥಾಲಯದಲ್ಲಿ ಮಕ್ಕಳು ಓದಿನಲ್ಲಿ ಕಡ್ಡಾಯವಾಗಿ ಕಳೆಯಬೇಕು. ವಿದ್ಯಾರ್ಥಿಗಳ ಜೊತೆ ಪೋಷಕರು ಓದುವ ಹವ್ಯಾಸ ರೂಢಿಸಿಕೊಳ್ಳಬೇಕುʼ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಸಿದ್ಧಾರ್ಥ ಭಾವಿಕಟ್ಟಿ ಮಾತನಾಡಿ, ʼಗ್ರಂಥಾಲಯ ಜಾತಿ ಭೇದ ಮತ್ತು ಲಿಂಗಭೇದ ಮೀರಿದ ಸ್ಥಳ. ಎಲ್ಲ ವಯೋಮಾನದ ಓದುಗರಿಗೆ ಪ್ರವೇಶ ಇರುವ ಜಾಗವಿದು. ಪಠ್ಯ ಪುಸ್ತಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು ನಮ್ಮ ಗ್ರಂಥಾಲಯದಲ್ಲಿ ಲಭ್ಯಯಿವೆ. ಕೆಕೆಆರ್ ಡಿಯ ಎರಡು ಕೋಟಿ ರುಪಾಯಿಗಳ ಅನುದಾನದಲ್ಲಿ ಬಸವಕಲ್ಯಾಣದಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಾಣ ನಡೆಯುತ್ತಿದೆ. ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯದ ಸದಸ್ಯರಾಗಿʼ ಎಂದರು.
ಇದೇ ಸಂದರ್ಭದಲ್ಲಿ ಬಸವಕಲ್ಯಾಣ ಗ್ರಂಥಾಲಯ ಸಹಾಯಕ ನಿಂಗಪ್ಪ ತುಂಬಗಿ ಉತ್ತಮ ಗ್ರಂಥಾಲಯ ಸೇವಾ ಪುರಸ್ಕಾರ, ವರ್ಷಾ ಮಚ್ಚೇಂದ್ರ ಗಾಯಕವಾಡ ಹಾಗೂ ಶಾಂತಯ್ಯ ಸ್ವಾಮಿ ಮಠ ಅವರನ್ನು ಉತ್ತಮ ಓದುಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಪ್ರಯುಕ್ತ ಜಿಲ್ಲಾ ಕೇಂದ್ರ ಗ್ರಂಥಾಲಯ ಆಯೋಜಿಸಿದ್ದ ಚಿತ್ರ ಕಲೆ, ಭಾಷಣ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಇದನ್ನೂ ಓದಿ : ಬೀದರ್ | ರೈತರ ಹೋರಾಟಕ್ಕೆ ಜಯ : ಟನ್ ಕಬ್ಬಿಗೆ ₹2,950 ಬೆಲೆ ನಿಗದಿ : 8 ದಿನಗಳ ಧರಣಿ ಅಂತ್ಯ
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಪ್ರಭು ಬಿರಾದಾರ, ಲೋಕೇಶ ಕನಕ, ಮಲ್ಲಿಕಾರ್ಜುನ ಛೆತ್ರೆ, ಕಾಲಕಾಲೇಶ್ವರ, ಮಹಾದೇವ ಮಾನೆ, ರಘು, ನಿಂಗಣ್ಣ ಗಚ್ಚಿನಮನಿ, ಝರೆಪ್ಪ ಶಿಂಧೆ, ಶಿವಕುಮಾರ ಫುಲಾರಿ, ಮಹಾಂತಪ್ಪ ರಾಂಪುರೆ ಮೊದಲಾದವರಿದ್ದರು. ತಾಲೂಕು ಗ್ರಂಥಾಲಯದ ನಿಂಗಪ್ಪ ತುಂಬಗಿ ಸ್ವಾಗತಿಸಿದರು. ದೀಪಕ ಕಮತರ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ನಿರೂಪಿಸಿದರು. ಅಂಬರೀಶ್ ಮೇತ್ರೆ ವಂದಿಸಿದರು.





