ಪ್ರವಾದಿಯವರ 1,500 ನೇ ಜನ್ಮದಿನಾಚರಣೆಯ ಅಂಗವಾಗಿ ಡಿ. 7ರಂದು ಶರಣರ ನಾಡು ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಸೂಫಿ-ಸಂತರ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯದ ಮುಖ್ಯ ಸಚೇತಕ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ತಿಳಿಸಿದರು.
ಗುರುವಾರ ಬೀದರ್ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ʼಪ್ರವಾದಿಯವರ 1500ನೇ ವಾರ್ಷಿಕೋತ್ಸವ ಆಚರಣೆ ಈಗಾಗಲೇ ಹುಬ್ಬಳ್ಳಿ ಮತ್ತು ಕೊಪ್ಪಳ ನಗರಗಳಲ್ಲಿ ಆಚರಿಸಲಾಗಿದ್ದು, ಮೂರನೇ ಸಮಾವೇಶವನ್ನು ಬಸವಕಲ್ಯಾಣದಲ್ಲಿ ನಡೆಸಲಾಗುತ್ತಿದೆʼ ಎಂದರು.
ʼಅಂತರರಾಷ್ಟ್ರೀಯ ಖ್ಯಾತಿಯ ವ್ಯಕ್ತಿ ಮೌಲಾನಾ ಮುಹಮ್ಮದ್ ಒಬೈದುಲ್ಲಾ ಖಾನ್ ಆಜ್ಮಿ, ರಾಜ್ಯಸಭೆಯ ಮಾಜಿ ಸದಸ್ಯ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ, ಮಂಡಳಿಯ ಸದಸ್ಯ ಮೌಲಾನಾ ಅಬು ತಾಲಿಬ್ ರಹಮಾನಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಕ್ಫ ಕಮಿಟಿ ಅಧ್ಯಕ್ಷರು ಹಾಗೂ ಹಜರತ್ ಹಫೀಜ್ ಅಲಿ ಮುಹಮ್ಮದ್ ಅಲ್ ಹುಸೈನಿ, ಖ್ವಾಜಾ ಬಂದಾ ನವಾಜ್ ದರ್ಗಾದ ಸಜ್ಜಾದಾ ಅವರನ್ನು ಅಭಿನಂದಿಸಲಾಗುವುದುʼ ಎಂದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಮಾಜಿ ಎಂಎಲ್ಸಿ ಅರವಿಂದ್ ಕುಮಾರ್ ಅರಳಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ನಾಸಿರ್ ಹುಸೇನ್, ಉತ್ತರ ಪ್ರದೇಶದ ಉಸ್ತುವಾರಿ ಸಂಸದ ಇಮ್ರಾನ್ ಮಸೂದ್, ತೆಲಂಗಾಣದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮೊಹಮ್ಮದ್ ಅಜರೋದ್ದೀನ್ (ಹೈದ್ರಾಬಾದ್) ಮತ್ತು ಕೆಕೆಆರ್‌ಡಿಬಿ ಅಧ್ಯಕ್ಷರು ಮತ್ತು ಶಾಸಕ ಡಾ. ಅಜಯ್ ಸಿಂಗ್ ಭಾಗವಹಿಸಲಿದ್ದಾರೆ.
ಮಹಾರಾಷ್ಟ್ರ ರಾಜ್ಯ ಹಾಗೂ ತೆಲಂಗಾಣದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. 1500ನೇ ಭವ್ಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆಯಲಿರುವ ಸೂಫಿ-ಸಂತರ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವರು ಕೋರಿದರು.
ಇದನ್ನೂ ಓದಿ : ಬೀದರ್ | 2026ರ ಜನವರಿ ಒಳಗೆ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಹಣ ಬಿಡುಗಡೆಗೊಳಿಸಿ : ಲಕ್ಷ್ಮಣ ದಸ್ತಿ
ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನ್ನಾನ್ ಸೇಠ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಸಯ್ಯದ್ ಅಲಿ ಖಾದ್ರಿ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.





