2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಗುರುವಾರ 70 ಜನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದ್ದು, ಬೀದರ್ ಜಿಲ್ಲೆಯ ತಬಲಾ ವಾದಕ ಮಡಿವಾಳಯ್ಯಾ ಸಾಲಿ ಅವರು ʼಸಂಗೀತʼ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಗೆ ರಾಜೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ಮೂಲತಃ ಹುಮನಾಬಾದ್ ತಾಲೂಕಿನ ಅಲ್ಲೂರು ಗ್ರಾಮದಲ್ಲಿ 1955ರಲ್ಲಿ ಜನಿಸಿದ ಮಡಿವಾಳಯ್ಯಾ ಸಾಲಿ ಅವರು ಬಾಲ್ಯದಿಂದಲೇ ತಬಲಾ ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಕಲಬುರಗಿಯ ಶರಣ ಬಸವೇಶ್ವರ ಕಾಲೇಜಿನಲ್ಲಿ ಬಿಎ ಪದವಿ ಪಡೆದರು.
1994ರಿಂದ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾಗಿ ಸರ್ಕಾರಿ ಸೇವೆಗೆ ಸೇರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸಿದರು. ನಂತರ 2015ರವರೆಗೆ ಪಿಡಿಒ ಆಗಿ ಅದೇ ಗ್ರಾಮ ಪಂಚಾಯತ್‌ನಲ್ಲಿ ಸತತ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.
ಮಡಿವಾಳಯ್ಯಾ ಸಾಲಿ ಅವರು 11ನೇ ವಯಸ್ಸಿನಲ್ಲಿಯೇ ತಮ್ಮ ಸ್ವಂತ ಗ್ರಾಮವಾದ ಅಲ್ಲೂರ್ ಗ್ರಾಮದ ಚಂದ್ರಪ್ಪ ಪಾಂಚಳ ಹಾಗೂ ಸಿದ್ರಾಮಪ್ಪ ಅಲ್ಲೂರ್ ಅವರಿಂದ ಪ್ರಾಥಮಿಕ ತಬಲಾ ಶಿಕ್ಷಣ ಪಡೆದು, ಹೆಚ್ಚಿನ ಶಿಕ್ಷಣವನ್ನು ಭಾರತದಲ್ಲಿ ಖ್ಯಾತಿ ಪಡೆದ ಪಂಡಿತ ಅನೋಖಿಲಾಲ್ ಮಿಶ್ರಾ ಅವರ ಶಿಷ್ಯ ಪಂಡಿತ್ ಕೆ.ಎಸ್ ಹಡಪದ ಅವರ ಹತ್ತಿರ ಪಡೆದಿದ್ದಾರೆ. ಹೈದರಾಬಾದಿನ ಪಂಡಿತ್ ನಂದಕುಮಾರ ಬನಾರಸ್ಸಿನ, ಪಂಡಿತ್ ಮಣಿಲಾಲ್ ಮಿಶ್ರಾ, ಧಾರವಾಡದ ಪಂಡಿತ್ ಬಸವರಾಜ್ ಬೆಂಡಿಗೇರಿ ಅವರಂಥ ಗುರುಗಳಿಂದ ಅಭ್ಯಾಸ ಮತ್ತು ಮಾರ್ಗದರ್ಶನ ಪಡೆದಿದ್ದಾರೆ.
ತಬಲಾ ವಾದ್ಯದಲ್ಲಿ ವಿದ್ವತ್ತ, ಅಲಂಕಾರ ಪದವಿ ಪಡೆದಿರುವ ಇವರು 2017ರಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕಲೆ ಪ್ರದರ್ಶಿಸಿದ್ದಾರೆ. ಅಲ್ಲದೇ ನಾಡಿನ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಬಲಾ ಸಾಥ್ ನೀಡಿದ್ದಾರೆ.

ಮಡಿವಾಳಯ್ಯ ಅವರ ತಬಲಾ ಕಲೆಗೆ ಕಲಬುರಗಿಯ ಸ್ವರ ಮಾಧುರಿ ಸಂಗೀತ ವಿದ್ಯಾಲಯ ಅವರಿಂದ ‘ತಬಲಾ ಸಾಧಕ’ ಪ್ರಶಸ್ತಿ, ಬೆಂಗಳೂರಿನ ಸಂಗೀತ ನೃತ್ಯ ಅಕಾಡೆಮಿಯಿಂದ ‘ನಮ್ಮ ಸಾಧಕರು’ ಪ್ರಶಸ್ತಿ ಸೇರಿದಂತೆ ‘ಬಸವ ಕಲಾ ರತ್ನ’, ‘ಪಂ.ಕೆ.ಎಸ್. ಹಡಪದ’ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ : BREAKING | ಪ್ರಕಾಶ್ ರಾಜ್, ಪ್ರೊ. ತರೀಕೆರೆ, ಡಾ. ಚೆನ್ನಿ ಸೇರಿ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಮಡಿವಾಳಯ್ಯ ಸಾಲಿ ಅವರು ಸದ್ಯ ಹುಮನಾಬಾದ್ ಪಟ್ಟಣದಲ್ಲಿ ನೆಲೆಸಿದ್ದಾರೆ. ಬೀದರ್‌ನ ಪಂಡಿತ್ ಪಂಚಾಕ್ಷರಿ ಗವಾಯಿ ಸಂಗೀತ ವಿದ್ಯಾಲಯದಲ್ಲಿ ತಬಲಾ ಅತಿಥಿ ಉಪನ್ಯಾಸಕನಾಗಿ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ತೇಜೆಸ್ವಿನಿ ತಬಲಾ ವಿದ್ಯಾಲಯದ 210 ಜನ ವಿದ್ಯಾರ್ಥಿಗಳಿಗೆ ತಿಂಗಳಲ್ಲಿ 3 ದಿನ ಉಚಿತ ತಬಲಾ ಶಿಕ್ಷಣ ನೀಡುತ್ತಿದ್ದಾರೆ.





