ಔರಾದ್ ತಾಲೂಕಿನ ಜೋಜನಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಭಾರತಿ ಲೋನಿಕರ್ ಅವರ ವಯೋನಿವೃತ್ತಿ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಸೋಮವಾರ ಅದ್ಧೂರಿಯಾಗಿ ಜರುಗಿತು.
ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪಂಡರಿ ಆಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಜೀವನದುದ್ದಕ್ಕೂ ನಿಷ್ಠೆಯಿಂದ ಬೋಧನೆ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿರುವ ಶಿಕ್ಷಕರು ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ. ಸೇವಾ ನಿವೃತ್ತಿ ಬದುಕು ಅತ್ಯಂತ ನೆಮ್ಮದಿಯಾಗಲಿʼ ಎಂದು ಹಾರೈಸಿದರು.

ಸಂತಪೂರ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಶಿವಲಿಂಗ ಹೇಡೆ ಮಾತನಾಡಿ, ʼಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ದೇಶದ ನಿರ್ಮಾತೃರು. ಕಲಿಕೆ ಜೊತೆಗೆ ಮಾನವೀಯ ಮೌಲ್ಯಗಳನ್ನು ನೀಡುವ ಕೆಲಸ ಶಿಕ್ಷಕರು ಮಾಡಬೇಕು. ಎರಡು ದಶಕಗಳ ಕಾಲ ಒಂದೇ ಶಾಲೆಯಲ್ಲಿ ಸೇವೆಗೈದ ಭಾರತಿ ಲೋನಿಕರ್ ಅವರ ಬದುಕು ಸಾರ್ಥಕವಾಗಿದೆ. ಶಿಕ್ಷಕರು ಮಕ್ಕಳ ಏಳಿಗೆಯಲ್ಲಿ ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕಿದೆʼ ಎಂದು ನುಡಿದರು.
ಶಾಲೆಯ ಮುಖ್ಯಶಿಕ್ಷಕಿ ಸವಿತಾ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ʼಶಿಕ್ಷಕಿ ಭಾರತಿ ಲೋನಿಕರ್ ಅವರು ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಜೊತೆಗೆ ಸಾಹಿತ್ಯ, ಸಂಸ್ಕೃತಿ, ಕ್ರೀಡಾ ಚಟುವಟಿಕೆಯ ಮನೋಭಾವ ಬೆಳೆಸಿ ಮಕ್ಕಳ ಅಚ್ಚುಮೆಚ್ಚಿನ ಗುರುಗಳಾದವರು. ಅವರೊಂದಿಗೆ ಸೇವೆ ಸಲ್ಲಿಸಿದ ನನಗೂ ಸಂತೃಪ್ತಿಇದೆ. ಇಷ್ಟು ವರ್ಷಗಳ ಕಾಲ ನಿಷ್ಠೆಯ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು ಅವರು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆʼ ಎಂದರು.

ಇದೇ ಸಂದರ್ಭದಲ್ಲಿ ವಯೋ ನಿವೃತ್ತಿ ಹೊಂದಿರುವ ಭಾರತಿ ಲೋನಿಕರ್ ದಂಪತಿಗೆ ವಿದ್ಯಾರ್ಥಿಗಳು, ಗ್ರಾಮಸ್ಥರು, ಗ್ರಾಮ ಪಂಚಾಯತ್ ಸದಸ್ಯರು ಮತ್ತಿತರರು ವಿಶೇಷವಾಗಿ ಗೌರವಿಸಿ ಬೀಳ್ಕೊಟ್ಟರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಇದನ್ನೂ ಓದಿ : ಬೀದರ್ | ವಕೀಲರು ಕನ್ನಡದಲ್ಲಿ ವಾದಿಸಲಿ : ವಿನಾಯಕ ವಾನಖಂಡೇ
ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾಬಾಯಿ ಮೇತ್ರೆ, ಪಿಡಿಒ ನರಸಿಂಗ್ ಮಾನೆ, ಸಿಆರ್‌ಪಿ ಶಿವಾನಂದ ಸ್ವಾಮಿ, ಸರ್ಕಾರಿ ನೌಕರರ ಸಂಘದ ನಾಮ ನಿರ್ದೇಶಿತರಾದ ಗಫರ್ ಖಾನ್, ಇಮ್ಯಾನುವೆಲ್, ಪತ್ರಕರ್ತ ಬಾಲಾಜಿ ಕುಂಬಾರ, ಶಾಲೆಯ ಶಿಕ್ಷಕರಾದ ಗೋವಿಂದ ಮಾನೆ, ಪ್ರದೀಪ ಕುಮಾರ, ಬಸವರಾಜ್ ಸ್ವಾಮಿ, ಭಾಗ್ಯವತಿ, ಶಾಲಿನಿ ಸೇರಿದಂತೆ ಗ್ರಾಮದ ಗಣ್ಯರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.





