ದೀಪಾವಳಿ ಹಬ್ಬಕ್ಕೆ ಮಣ್ಣಿನ ಹಣತೆಗಳ ಬದಲಾಗಿ ಪಿಒಪಿ ಹಣತೆಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಮಣ್ಣಿನ ಹಣತೆ ಸಿದ್ಧಪಡಿಸಿದ ಕುಂಬಾರರ ಬದುಕು ದುಸ್ತರವಾಗಿದೆ.
ದೀಪಾವಳಿ ಹಬ್ಬದ ವಿಶೇಷವೆಂದರೆ ಬೆಳಕು, ದೀಪಾವಳಿಗೆ ಹಣತೆ ಹಾಗೂ ಆಕಾಶ ಬುಟ್ಟಿಗಳದ್ದೆ ಬಲು ಜೋರು. ಒಂಬತ್ತು ದಿನಗಳ ಕಾಲ ಸಂಜೆ ಬಾಗಿಲ ಎರಡೂ ಬದಿ ಸಾಲು-ಸಾಲು ಹಣತೆಯಲ್ಲಿ ದೀಪ ಇಡಲಾಗುತ್ತದೆ. ಮನೆ ಮುಂದೆ ವಿವಿಧ ಆಕಾರ, ಬಣ್ಣದ ಬುಟ್ಟಿಗಳು ಮಿನುಗುತ್ತವೆ. ಇನ್ನೇನು ಬೆಳಕಿನ ಹಬ್ಬ ಶುರುವಾಗಿದ್ದು ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹಣತೆ, ಆಕಾಶ ಬುಟ್ಟಿಗಳ ಮಾರಾಟ ಫುಲ್ ಜೋರಾಗಿ ನಡೆಯುತ್ತಿದೆ.
ಒಂದೆರಡು ದಶಕಗಳ ಹಿಂದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕುಂಬಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಕರಕುಶಲಕರ್ಮಿಗಳಿಗೆ ಎಲ್ಲಿಲ್ಲದ ಖುಷಿ, ಸಂಭ್ರಮ ಆವರಿಸಿ ಬದುಕು ಬೆಳಕಿನ ಹಬ್ಬವಾಗಿ ಕಾಣುತ್ತಿತ್ತು. ಆದರೆ, ಆಧುನಿಕತೆ ಭರಾಟೆಯಲ್ಲಿ ಕುಂಬಾರಿಕೆ ವೃತ್ತಿಗೆ ಬೆಲೆ ಇಲ್ಲದಂತಾಗಿದೆ. ಕುಂಬಾರರು ತಯಾರಿಸಿದ ಮಣ್ಣಿನ ಹಣತೆಗಳ ಬೇಡಿಕೆ ತೀವ್ರ ಕುಸಿತದಿಂದ ದೀಪದ ಕೆಳಗೆ ಕತ್ತಲು ಎನ್ನುವಂತಾಗಿದೆ ಕುಂಬಾರರ ಬದುಕು.

ಕಪ್ಪು, ಜೇಡಿ ಮಣ್ಣಿನ ಹಣತೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಕುಂಬಾರರು, ಇದೀಗ ಪಿಂಗಾಣಿ ಹಣತೆ ತರಿಸಿಕೊಂಡು ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಮಣ್ಣಿನ ಹಣತೆ ಅಗತ್ಯವಿದ್ದಷ್ಟು ಪೂರೈಕೆ ಇಲ್ಲದಿರುವುದು ಒಂದು ಕಾರಣವಾದರೆ, ಮಾರುಕಟ್ಟೆಗೆ ಪಿಒಪಿ ಹಣತೆ ಲಗ್ಗೆಯಿಟ್ಟ ಹಿನ್ನೆಲೆ ಮಣ್ಣಿನ ಹಣತೆ ಬೇಡಿಕೆ ಕಳೆದುಕೊಂಡಿದೆ, ಇದರಿಂದ ಹೆಚ್ಚಿನ ಆದಾಯ ಇಲ್ಲದೆ ಕುಂಬಾರರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಪಿಂಗಾಣಿ ಹಣತೆಗೆ ಹೆಚ್ಚಿದ ಬೇಡಿಕೆ :
ಈ ಹಿಂದೆ ಕುಂಬಾರರು ಮನೆಯಲ್ಲಿ ಸಿದ್ಧಪಡಿಸಿದ ಮಣ್ಣಿನ ಹಣತೆಗಳಿಗೆ ಭಾರಿ ಬೇಡಿಕೆಯಿತ್ತು. ಖರೀದಿಸುವವರ ಸಂಖ್ಯೆಯೂ ಗಣನೀಯವಾಗಿತ್ತು. ಒಬ್ಬೊಬ್ಬರು ಕನಿಷ್ಠ 40-50 ಹಣತೆ ಖರೀದಿಸುತ್ತಿದ್ದರು. ಈಗ ಆ ಕಾಲವಿಲ್ಲ. ಮಣ್ಣಿನ ಹಣತೆ ಖರೀದಿಸುವವರ ಸಂಖ್ಯೆ ಬೆರಳೆಣಿಕೆಗೆ ಕುಸಿದಿದೆ. ಜನರು ಮಣ್ಣಿನ ಹಣತೆ ಬದಲು ಪಿಂಗಾಣಿ ದೀಪ ಖರೀದಿಗೆ ಮುಗಿಬಿದ್ದಿದ್ದಾರೆ. ಇತ್ತೀಚೆಗೆ ಪಿಂಗಾಣಿ ದೀಪಗಳೂ ಮರೆಯಾಗುತ್ತಿದ್ದು ಗ್ರಾಹಕರು ಎಲ್ಇಡಿ ದೀಪಗಳಿಗೆ ಮೋರೆ ಹೋಗುತ್ತಿರುವ ಕಾರಣ ಕುಂಬಾರರಿಗೆ ಬೆಳಕಿನ ಹಬ್ಬ ಸಂಭ್ರಮವಾಗಿ ಉಳಿದಿಲ್ಲ.
ಅನ್ಯ ರಾಜ್ಯಗಳಿಂದ ಹಣತೆ ಆಮದು :
ಆಧುನಿಕತೆಗೆ ತಕ್ಕಂತೆ ಕುಂಬಾರರು ತಮ್ಮ ವೃತ್ತಿ ಬದುಕಿನಲ್ಲಿ ಬದಲಾವಣೆ ಕಂಡುಕೊಂಡಿದ್ದಾರೆ. ತಾವು ತಯಾರಿಸಿದ ಮಣ್ಣಿನ ಹಣತೆಗೆ ಬೇಡಿಕೆ ಇಲ್ಲದ ಕಾರಣ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಚೀನಿ ಮಣ್ಣಿನ ಹಣತೆಗಳು, ಹೊಳಪಿನ ಮೈಮಾಟವುಳ್ಳ ವೈವಿಧ್ಯಮಯ ಕಲಾಕೃತಿಯ ಪಿಂಗಾಣಿ ಹಣತೆಗಳನ್ನು ನೆರೆಯ ಮಹಾರಾಷ್ಟ್ರದ ಲಾತೂರ, ಪುಣೆಯಿಂದ ಆಮದು ಮಾಡಿಕೊಳ್ಳಲು ಶುರುಮಾಡಿದ್ದಾರೆ.
ʼನಾವು ತಯಾರಿಸುವ ಮಣ್ಣಿನ ಹಣತೆಗೆ ಹೆಚ್ಚಿನ ಗ್ರಾಹಕರ ಬೇಡಿಕೆಯಿಲ್ಲ. ಕಾಲಕ್ಕೆ ತಕ್ಕಂತೆ ನಾವು ಗ್ರಾಹಕರಿಗೆ ಆಕರ್ಷಣೆಯಾಗಿ ಕಾಣುವ ವೈವಿಧ್ಯಮಯ ಕಲಾಕೃತಿಯ ಪಿಂಗಾಣಿ ಹಣತೆಗಳು ಆಮದು ಮಾಡಿಕೊಳ್ಳುತ್ತಿದ್ದೇವೆ. ಮಹಾರಾಷ್ಟ್ರದ ಲಾತೂರ್, ಪುಣೆ ಹಾಗೂ ಗುಜರಾತ್ ರಾಜ್ಯಗಳಿಂದ ವಿವಿಧ ಪ್ರಕಾರದ ಹಣತೆಗಳು ಖರೀದಿಸುತ್ತಿದ್ದೇವೆʼ ಎಂದು ಬಸವಕಲ್ಯಾಣದ ನಾಗರಾಜ ಕುಂಬಾರ ರಾಜೇಶ್ವರ ಹೇಳುತ್ತಾರೆ.

ʼದೀಪಾವಳಿ ವೇಳೆ ಬೀದರ್ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಹಣತೆ ಮಾರಾಟ ಮಾಡಲಾಗುತ್ತಿದೆ. ದೀಪಾವಳಿ ಹಬ್ಬದ ನಾಲ್ಕು ದಿನ ಮುಂಚೆ ಹಾಗೂ ಹಬ್ಬದ ನಂತರ ಕೆಲದಿನ ಉತ್ತಮ ವ್ಯಾಪಾರ ನಡೆಯುತ್ತದೆ. ಮನೆಯಲ್ಲಿ ನಾವು ತಯಾರಿಸಿದ ಮಣ್ಣಿನ ಹಣತೆಗೆ ಹೆಚ್ಚು ಬೇಡಿಕೆಯಿದ್ದರೆ ಅಧಿಕ ಆದಾಯ ಗಳಿಸಲು ಸಾಧ್ಯ. ಆದರೆ, ಜನ ಆಕರ್ಷಕವಾಗಿ ಕಾಣುವ ಪಿಂಗಾಣಿ ಹಣತೆಯನ್ನೇ ಹೆಚ್ಚು ನೆಚ್ಚಿಕೊಳ್ಳುವ ಕಾರಣ ಅಲ್ಪಸ್ವಲ್ಪ ಆದಾಯಕ್ಕೆ ತೃಪ್ತಿ ಪಡಬೇಕಾಗಿದೆʼ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ʼನಾನು ಎಂ.ಎ., ಬಿ.ಇಡ್ ಪದವೀಧರ. ಕೆಲ ದಿನಗಳ ಖಾಸಗಿ ಕಾಲೇಜಿನಲ್ಲಿ ಬೋಧಿಸಿದ್ದೇನೆ. ಆದರಿಂದ ಜೀವನ ನಿರ್ವಹಣೆ ಅಸಾಧ್ಯವೆಂದು ನಮ್ಮ ಕುಂಬಾರಿಕೆ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೇನೆ. ಬೇಸಿಗೆ, ದಸರಾ, ದೀಪಾವಳಿ ಸಂದರ್ಭದಲ್ಲಿ ಮಾತ್ರ ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ನಾವೂ ಕುಂಬಾರಿಕೆಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳುವ ಅಗತ್ಯವಿದೆ. ಅದಕ್ಕೆ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಿ ತರಬೇತಿ ನೀಡಬೇಕು. ಉತ್ಪಾದನೆ, ಮಾರಾಟಕ್ಕೆ ಸ್ಥಳ ಗುರುತಿಸಿ ನೀಡಬೇಕುʼ ಎಂದು ಮನವಿ ಮಾಡಿದರು.
ಪರಿಸರಸ್ನೇಹಿ ದೀಪಾವಳಿ ಆಚರಿಸಿ:
ದೀಪಾವಳಿ ಹಬ್ಬದ ದಿನ, ಹಬ್ಬದ ನಂತರವೂ ಒಂಬತ್ತು ದಿನಗಳವರೆಗೆ ಮನೆ, ಅಂಗಡಿಗಳ ಮುಂದೆ ಹಣತೆಯಲ್ಲಿ ಎಣ್ಣೆದೀಪ ಹಚ್ಚುವುದು ವಾಡಿಕೆ. ಇದಕ್ಕಾಗಿ ಗ್ರಾಹಕರು ಡಜನ್ ಲೆಕ್ಕದಲ್ಲಿ ಹಣತೆ ಖರೀದಿಸುತ್ತಾರೆ. ಈಗ ಮಾರುಕಟ್ಟೆಯಲ್ಲಿ 1 ಡಜನ್ ಮಣ್ಣಿನ ಹಣತೆಗಳಿಗೆ ₹30 ರಿಂದ ₹40 ಬೆಲೆಯಿದೆ. 1 ಡಜನ್ ಪಿಂಗಾಣಿ ಹಣತೆಗಳ ಬೆಲೆ ₹120-140 ಇದೆ. ಇನ್ನು ವಿವಿಧ ಕಲಾಕೃತಿಯ ಬಣ್ಣದ ಹಣತೆಯ ಆಕಾರ, ಬಣ್ಣಕ್ಕೆ ಅನುಗುಣವಾಗಿ ಬೆಲೆಯಿದೆ. ಪ್ರತಿದಿನ ₹3 -4 ಸಾವಿರ ವ್ಯಾಪಾರ ಆಗುತ್ತದೆ. ನಾವೇ ಸಿದ್ದಪಡಿಸಿದ ಹಣತೆ ಹೆಚ್ಚು ಮಾರಾಟವಾದರೆ ನಮಗೆ ಹೆಚ್ಚಿನ ಆದಾಯವಾಗುತ್ತಿತ್ತು, ಆದರೆ ಬೇರೆಡೆಯಿಂದ ಖರೀದಿಸಿ ಮಾರಾಟ ಮಾಡುವ ನಮಗೆ ಎಲ್ಲಾ ಖರ್ಚು ವೆಚ್ಚ ತೆಗೆದರೆ ತಕ್ಕಮಟ್ಟಿಗೆ ಆದಾಯ ಗಳಿಸಲು ಸಾಧ್ಯವಿಲ್ಲ ಎಂಬುದು ಕುಂಬಾರಿಕೆ ಕರಕುಶಲಕರ್ಮಿಗಳ ಅಭಿಮತ.
ʼದೀಪಾವಳಿ ಎಂದರೆ ದೀಪದ ಹಬ್ಬ. ದೀಪದ ಅಲಂಕಾರಕ್ಕೆ ಬದಲಾಗಿ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್, ಪಿಂಗಾಣಿ, ಬಲ್ಬ್ ಗಳ ಬಳಕೆ ಹೆಚ್ಚಾಗುತ್ತಿದೆ. ಇದು ಸರಿಯಲ್ಲ. ಅನಾವಶ್ಯಕ ಪ್ಲಾಸ್ಟಿಕ್ ಬಳಕೆ ಮತ್ತು ತ್ಯಾಜ್ಯದಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಮಣ್ಣಿನ ಹಣತೆಯಲ್ಲಿ ಎಣ್ಣೆ ಹಾಕಿ, ಹತ್ತಿಯಿಂದ ತಯಾರಿಸಲ್ಪಟ್ಟ ಬತ್ತಿಯಿಂದ ದೀಪ ಬೆಳಗಿದರೆ ಅದು ಪರಿಸರಕ್ಕೆ ಪೂರಕವಾಗಿದ್ದು ಮಾಲಿನ್ಯ ಶುದ್ಧಗೊಳಿಸಲು ಸಹಕಾರಿಯಾಗುತ್ತದೆ. ವಿದ್ಯುತ್ ದೀಪಾಲಂಕಾರದಿಂದ ಕೆಲವೆಡೆ ಶಾರ್ಟ್ ಸರ್ಕ್ಯೂಟ್‌ನಿಂದ ಅನಾಹುತ ಸಂಭವಿಸಿದ ಉದಾಹರಣೆಗಳಿವೆʼ ಎಂದು ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ರೈತರು ಕೈಗೆ ಬಂದ ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಪಸ್ವಲ್ಪ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ದರ ಇಲ್ಲ. ಸರ್ಕಾರದ ಬೆಳೆ ಹಾನಿ ಪರಿಹಾರದ ನಿರೀಕ್ಷೆಯಲ್ಲಿರುವ ರೈತರ ಮೊಗದಲ್ಲಿ ಮಂದಹಾಸ ಕಾಣೆಯಾಗಿದೆ. ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬ ಬರದ ನಡುವೆಯೂ ಆಚರಿಸಲು ಸಜ್ಜಾಗಿದ್ದಾರೆ.
ಬೇಸಿಗೆ, ದಸರಾ, ದೀಪಾವಳಿ ಸಂದರ್ಭದಲ್ಲಿ ಮಣ್ಣಿನ ಪರಿಕರಗಳ ಮಾರಾಟಕ್ಕೆ ನಿಗದಿತ ಸ್ಥಳ ಇಲ್ಲದ ಕಾರಣ ಬೀದರ್ ನಗರದ ನೆಹರು ಕ್ರೀಡಾಂಗಣ ಮುಂಭಾಗ, ಸಾಯಿ ಸ್ಕೂಲ್ ಮುಂಭಾಗದ ರಸ್ತೆ ಬದಿ ಸೇರಿದಂತೆ ನಗರದ ವಿವಿಧೆಡೆ ರಸ್ತೆ ಬದಿ ತಾತ್ಕಾಲಿಕ ಅಂಗಡಿ ನಿರ್ಮಿಸಿಕೊಂಡು ವ್ಯಾಪಾರ ನಡೆಸಬೇಕಾಗಿದೆ.
ಇದನ್ನೂ ಓದಿ : ಬೀದರ್ | ಉಸ್ತುವಾರಿ ಸಚಿವರ ಭರವಸೆ : 7 ದಿನಗಳ ಧರಣಿ ಕೈಬಿಟ್ಟ ರೈತರು
ಪ್ರತಿವರ್ಷ ಪಟಾಕಿ ಮಾರಾಟಗಾರರಿಗೆ ಸಾಯಿ ಸ್ಕೂಲ್ ಮುಂಭಾಗದಲ್ಲಿ ಸ್ಥಳ ಗುರುತಿಸಿ ಮಳಿಗೆ ಸ್ಥಾಪಿಸಲು ಅನುಮತಿ ನೀಡುವ ಜಿಲ್ಲಾಡಳಿತ ಹಣತೆ ಮಾರಾಟಕ್ಕೆ ತಾತ್ಕಾಲಿಕ ಮಳಿಗೆ ಸ್ಥಾಪಿಸಿಕೊಳ್ಳಲು ಸೂಕ್ತ ಜಾಗ ಗುರುತಿಸುತ್ತಿಲ್ಲ. ರಸ್ತೆ ಬದಿಯೇ ಅಂಗಡಿ ಹಾಕಿಕೊಂಡು ಹಣತೆ ವ್ಯಾಪಾರ ಮಾಡುತ್ತಿದ್ದೇವೆ. ಕುಂಬಾರಿಕೆ ವ್ಯಾಪಾರಸ್ಥರಿಗೂ ಜಿಲ್ಲಾಡಳಿತ ಸೂಕ್ತ ಜಾಗ ಗುರುತಿಸಿ ಮಾರಾಟಕ್ಕೆ ಅನುಕೂಲ ಮಾಡಿಕೊಡಬೇಕು” ಎಂದು ಹಣತೆ ಮಾರಾಟಗಾರ ಸಿದ್ದು ರಘುನಾಥ ಗಾದಗಿ ಒತ್ತಾಯಿಸಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




