ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವ ಹಾಗೂ ಗ್ರಾಮ ಪಂಚಾಯಿತಿಗಳನ್ನು ದುರ್ಬಲ ಪಡಿಸುವ ಮೂಲಕ ಸಾಮಾಜಿಕ ನ್ಯಾಯವನ್ನೇ ಅಣಕಿಸುವ ವಿಕಸಿತ ಭಾರತ ರೋಜಗಾರ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-GRAM G-2025 ಮಸೂದೆಯನ್ನು ತಿರಸ್ಕರಿಸಲು ಆಗ್ರಹಿಸಿ ಡಿ.22ರಂದು ರಾಜ್ಯದ ಎಲ್ಲಾ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದೇವೆ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕಿ ಸಪ್ನಾದೀಪ ಅವರು ಹೇಳಿದರು.
ಬೀದರ್ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಕಾರ್ಮಿಕರು ಮತ್ತು ಯಾವುದೇ ಕಾರ್ಮಿಕ ಗುಂಪುಗಳ ಜೊತೆ ಸಮಾಲೋಚನೆ ನಡೆಸದೆ ವಿಕಸಿತ ಭಾರತ ರೋಜಗಾರ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ-ಜಿರಾಮ್ ಜಿ) 2025 ಮಸೂದೆಯನ್ನು ರಚಿಸಿದೆʼ ಎಂದರು.
ʼಈ ಮಸೂದೆ ಮನರೇಗಾ -2005 ಅನ್ನು ಪೂರ್ಣ ಪ್ರಮಾಣದಲ್ಲಿ ಕಿತ್ತೊಗೆಯುವ ಹುನ್ನಾರವಾಗಿದೆ. ಉದ್ಯೋಗ ಖಾತ್ರಿಯನ್ನು ಕೇಂದ್ರ ಸರಕಾರದ ಬಿಗಿ ಮುಷ್ಟಿಯಿಂದ ಕೇಂದ್ರಿಕೃತ, ವಿವೇಚನಾಯುಕ್ತ, ಬಜೆಟ್‌ನ್ನು ನಿಯಂತ್ರಿಸುವ ಯೋಜನೆಯನ್ನಾಗಿ ಬದಲಾಯಿಸಲು ಹೊರಟಿದೆʼ ಎಂದು ವಿವರಿಸಿದರು
ʼಪುಸ್ತಾವಿತ ಮಸೂದೆಯ ಪ್ರಕಾರ ಪ್ರತಿ ವರ್ಷ ರಾಜ್ಯವಾರು ಬಜೆಟ್ ಹಂಚಿಕೆಯನ್ನು ಕೇಂದ್ರ ಸರಕಾರ ನಿರ್ಧರಿಸುತ್ತದೆ ಹಾಗೂ ಯಾವುದೇ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರಕಾರಗಳೇ ಭರಿಸಬೇಕು. ಪ್ರತಿ ರಾಜ್ಯದಲ್ಲಿ ಒದಗಿಸಲಾಗುವ ಮಾನವ ದಿನಗಳ ಸಂಖ್ಯೆಯ ಮೇಲೆ ಮಿತಿಯನ್ನು ಹೇರುತ್ತದೆ. ಈಗಿರುವ ಬಜೆಟ್‌ನಲ್ಲಿ ಕೇಂದ್ರ ಸರಕಾರವು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 50 ದಿನಗಳ ಕೆಲಸವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಬಜೆಟ್‌ನ್ನು ಕೇಂದ್ರ ಸರಕಾರವೇ ಮಿತಿಗೊಳಿಸುತ್ತ ಹಣವನ್ನು ಸಂಗ್ರಹಿಸಲು ರಾಜ್ಯಗಳ ಮೇಲೆ ಇನಷ್ಟು ಹಣದ ಹೊರೆ ಹಾಕುವ ಮೂಲಕ ಬಿಜೆಪಿ ಸರಕಾರ 125 ದಿನಗಳ ಉದ್ಯೋಗದ ಹುಸಿ ಭರವಸೆ ನೀಡುತ್ತಿದೆʼ ಎಂದು ದೂರಿದರು.
ʼಮನರೇಗಾ ರದ್ದುಗೊಳಿಸುವ ಮೂಲಕ ಬೇಡಿಕೆ ಆಧಾರಿತ ಹಕ್ಕಿನಿಂದ ಪೂರೈಕೆ ಆಧಾರಿತ ಯೋಜನೆಯನ್ನಾಗಿ ಬದಲಾಯಿಸಲಾಗಿದೆ. ಉದ್ಯೋಗ ಖಾತ್ರಿ ಇನ್ನು ಮುಂದೆ ಒಂದು ಹಕ್ಕಲ್ಲ ಬದಲಾಗಿ ಯೋಜನೆ ಅನುಷ್ಠಾನದ ಮೇಲೆ ಕೇಂದ್ರ ಸರಕಾರದ ನಿಯಂತ್ರಣವನ್ನು ಬಿಗಿಗೊಳಿಸಲಾಗಿದೆ. ಕೇಂದ್ರ ಸರಕಾರ ಸೂಚಿಸಿದ ಆಯ್ಕೆ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕೆಲಸ ಮಾಡುವ ಹಕ್ಕು ಕಾರ್ಮಿಕರು ಪಡೆಯುತ್ತಾರೆ. ಕೇಂದ್ರ ಸರಕಾರ ಗುರುತಿಸದ ಪ್ರದೇಶದಲ್ಲಿ ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗದ ಖಾತರಿಯೇ ಇಲ್ಲʼ ಎಂದರು.
ʼಕೇಂದ್ರ ಸರಕಾರದಿಂದ ನಿರ್ಧರಿಸಲ್ಪಟ್ಟ ರಾಜ್ಯವಾರು ಬಜೆಟ್ ಹಂಚಿಕೆಗಳ ಮೂಲಕ ಮಾನವ ದಿನಗಳನ್ನು ನಿರ್ಧರಿಸಲಾಗುತ್ತದೆ. ಈ ಬಜೆಟ್ ಮಿತಿಯನ್ನು ಮೀರಿದರೆ ರಾಜ್ಯ ಸರಕಾರಗಳ ಹೊರೆಯನ್ನು ಭರಿಸಬೇಕು. ಎಂ.ಜಿ.ನರೇಗಾದಲ್ಲಿ ಕೆಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಬಜೆಟ್ ಹಂಚಿಕೆ 90-10 ರಷ್ಟಿತ್ತು. ಈ ಮಸುದೆಯಲ್ಲಿ 60-40 ರಷ್ಟಿದೆ. ಕೃಷಿ ಚಟುವಟಿಕೆ ವೇಳೆ 60 ದಿನಗಳ ಕಾಲ ಯೋಜನೆ ಸ್ಥಗಿತಗೊಳಿಸುವುದರಿಂದ ಮಹಿಳೆಯರು, ಭೂಹೀನರು ಮತ್ತು ಇತರೆ ಅಂಚಿನಲ್ಲಿರುವ ಸಮುದಾಯಗಳ ಉದ್ಯೋಗದ ಹಕ್ಕಿನಿಂದ ನಿರಾಕರಿಸಿದಂತಾಗುತ್ತದೆʼ ಎಂದು ವಿವರಿಸಿದರು.
ʼಕಾಮಗಾರಿಗಳನ್ನು ಕೇಂದ್ರ ಸರಕಾರ ತಾನೇ ನಿರ್ಧರಿಸುವ ಮೂಲಕ ಗ್ರಾಮ ಸಭೆಗಳನ್ನು ದರ್ಬಲಗೊಳಿಸಿದೆ. 73 ನೇ ತಿದ್ದುಪಡಿಯ ವಿಕೇಂದ್ರಿಕೃತ ಆಡಳಿತವನ್ನು ಗಾಳಿಗೆ ತೂರಲಾಗಿದೆ. ಡಿಜಿಟಲ್ ಹಾಜರಾತಿ NMMS ಮತ್ತು ಆಧಾರ ಕಾರ್ಡ್ ಆಧಾರಿತ ಪಾವತಿಗಳು ಎಬಿಪಿಎಸ್, ಬಯೋಮೇಟ್ರಿಕ್ ಧೃಡಿಕರಣದ ಮೂಲಕ ತಾಂತ್ರಿಕ ನಿಯಂತ್ರಣದಂತಹ ತಂತ್ರಜ್ಞಾನ ಉಪಕ್ರಮಗಳಿಂದ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರಿಗೆ ಕೆಲಸದಿಂದ ಹೊರಗಿಡಲಾಗುತ್ತಿದೆʼ ಎಂದು ಆರೋಪಿಸಿದರು.
ಇದನ್ನೂ ಓದಿ : MNREGA | ಹೇ ರಾಮ್… ಈ ಸರ್ಕಾರ ಎಷ್ಟೊಂದು ದಯಾಮಯಿ!
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಗೀತಾ ಡಿಗಾರೆ, ರೇಖಾ, ಸುರೇಖಾ, ಭೀಮ್ ಸಂಗಮ, ರಾಜಕುಮಾರ್ ಮತ್ತಿತರರಿದ್ದರು.





