ಆಧುನಿಕ ಯುಗವು ತಾಂತ್ರಿಕ, ವೈಜ್ಞಾನಿಕ ಕೌಶಲ್ಯದ ನಾಗಾಲೋಟದ ವೇಗದಲ್ಲಿ ಸಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಹತ್ವದ ಪಾತ್ರವಹಿಸುತ್ತಿದೆ. ಆರೋಗ್ಯಕರ, ಸಾಮರಸ್ಯ ಸಮಾಜ ನಿರ್ಮಾಣ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಬೀದರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ನುಡಿದರು.
ಬೀದರ ವಿಶ್ವವಿದ್ಯಾಲಯದ ವತಿಯಿಂದ ಭಾಲ್ಕಿ ತಾಲ್ಲೂಕಿನ ಮಳಚಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ʼಹಳ್ಳಿಗಳಲ್ಲಿ ಆರೋಗ್ಯಕರ ಹವಾಗುಣವಿರುತ್ತದೆ. ಕೆಲವೊಮ್ಮೆ ಜನರು ದುಶ್ಚಟಕ್ಕೆ ಬಲಿಯಾಗುತ್ತಾರೆ. ಜನರಲ್ಲಿ ಕುಡಿತ, ಜೂಜು ಮುಂತಾದ ದುಶ್ಚಟಗಳನ್ನು ಬಿಡಿಸುವ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ಯುವಕರು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಬೇಕಾಗಿದೆ. ಜನರಿಗೆ ಸಾಮರಸ್ಯದ ಬದುಕು ಇಂದು ಅನಿವಾರ್ಯವಾಗಿದೆ, ದ್ವೇಷವಿಲ್ಲದ ಸಹೋದರತ್ವದ ಸಮಾಜ ನಿರ್ಮಿಸುವಲ್ಲಿ ಯುವ ಜನಾಂಗ ಶ್ರಮಿಸಲಿʼ ಎಂದರು.
ಬೀದರ್ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ ಮಾತನಾಡಿ, ʼರಾಷ್ಟ್ರೀಯ ಸೇವಾ ಯೋಜನೆಯ ಮುಖಾಂತರ ಯುವಕರು ತಮ್ಮ ಪ್ರತಿಭೆ, ಪಾಂಡಿತ್ಯ, ಸಾಮರ್ಥ್ಯ ಅಭಿವ್ಯಕ್ತಿಸಲು ಅವಕಾಶವಿದೆ. ಅನೇಕು ಸಾಧಕರು ಗ್ರಾಮೀಣ ಪ್ರದೇಶದವರಾಗಿದ್ದಾರೆ. ನಾವು ಗ್ರಾಮೀಣ ಪರಿಸರದಿಂದ ಬಂದವರು ಎಂಬ ಕೀಳರಿಮೆಯನ್ನು ಮರೆತು ಯುವಕರು ಸದೃಢ ಸಮಾಜ ಕಟ್ಟುವಲ್ಲಿ ಮುಂದಾಗಬೇಕುʼ ಎಂದರು.
ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅಬ್ದುಲ್ ಸತ್ತಾರಸಾಬ್ ಮಾತನಾಡಿ, ʼಯುವಕರಿಂದ ಸಾಮರಸ್ಯ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. ಯುವಕರು ನಿಗದಿತ ಗುರಿಯೊಂದಿಗೆ ಸಾಧನೆಯ ಮಾರ್ಗದಲ್ಲಿರಬೇಕುʼ ನುಡಿದರು.
ʼರಾಷ್ಟ್ರೀಯ ಸೇವಾ ಯೋಜನೆಯಂತಹ ಕಾರ್ಯಕ್ರಮಗಳಿಂದ ಯುವಜನತೆ ಜನರೊಂದಿಗೆ ಬೆರೆಯಲು ಸಹಕಾರಿಯಾಗುತ್ತದೆ. ಸಮಾಜದಲ್ಲಿನ ಸಮಸ್ಯೆಗಳನ್ನು ಅರಿತು ಸೇವೆ ಮಾಡಲು ಸಹಕಾರಿಯಾಗುತ್ತದೆ ಎಂದು ಬೀದರ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಸಚಿನ್ ಶಿವರಾಜ ಅಭಿಪ್ರಾಯಪಟ್ಟರು.

ಬೀದರ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯ್ಕ.ಟಿ. ಮಾತನಾಡಿ, ʼದೇಶದ ಭವಿಷ್ಯ ಯುವಕರ ಮೇಲಿದೆ. ಅವರು ಮನಸ್ಸು ಮಾಡಿದರೆ ಏನಾದರೂ ಸಾಧಿಸಬಲ್ಲರು. ಯುವಕರು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಸಮಾಜದಲ್ಲಿ ಜಾಗೃತಿ ಮೂಡಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಯುವಕರು ಸಮಾಜದ ಋಣವನ್ನು ತೀರಿಸುವಲ್ಲಿ ಮುಂದಾಗಬೇಕಾಗಿದೆʼ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಬೀದರ ವಿವಿ ಆಡಳಿತ ಕುಲಸಚಿವೆ ಸುರೇಖಾ ಮಾತನಾಡಿ, ʼಯುವಶಕ್ತಿ ದೇಶದ ಶಕ್ತಿಯಾಗಿದೆ. ಹೀಗಾಗಿ ಅವರ ಮೇಲೆ ತುಂಬಾ ಜವಾಬ್ದಾರಿಯಿದೆ. ಇಂದಿನ ನಾಗಾಲೋಟದ ಯುಗದಲ್ಲಿ ಯುವ ಜನಾಂಗ ಸಂಕ್ರಮಣದ, ಒತ್ತಡದ, ಸ್ಪರ್ಧೆಯ ಯುಗದಲ್ಲಿ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ. ಯುವಕರು ಶ್ರಮಜೀವಿಗಳಾಗಿ ಸಮಾಜದ ಸದೃಢ ಆಸ್ತಿಯಾಗಬೇಕಾಗಿದೆʼ ಎಂದರು.
ಮಳಚಾಪೂರ ಸಿದ್ಧಾರೂಢ ಮಠದ ಪೀಠಾಧಿಪತಿ ಡಾ.ಸದ್ರೂಪಾನಂದ ಭಾರತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಬೀದರ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಡಾ.ರವೀಂದ್ರನಾಥ ವಿ.ಗಬಾಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ವೈಷ್ಣವಿ ಪಾಟೀಲ್, ಮಳಚಾಪೂರ ಗ್ರಾಮ ಪಂಚಾಯತ ಅಧ್ಯಕ್ಯೆ ಲಕ್ಷ್ಮೀ ಪಾಟೀಲ, ಉಪಾಧ್ಯಕ್ಷೆ ಜಗದೇವಿ ಅಮೃತ ರಾಜನಾಳೆ, ಗ್ರಾಮ ಪಂಚಾಯತ ಸದಸ್ಯ ಶರಣಪ್ಪ ಲಗಶೆಟ್ಟಿ, ಪಿಡಿಒ ಶಿವಕುಮಾರ ಸೀತಾ, ಮುಖ್ಯ ಶಿಕ್ಷಕಿ ಲಕ್ಷ್ಮೀ, ಪ್ರೌಢಶಾಲೆ ಮುಖ್ಯ ಗುರು ಚಿತ್ರಲೇಖಾ ಪ್ರಮುಖರಾದ ಶೋಭಾ ಪಾಟೀಲ, ಅಶೋಕ ಗುಮ್ಮೆ, ಮಲ್ಲಿಕಾರ್ಜುನ ಜ್ಯಾಂತೆ, ವಿಶ್ವನಾಥ ಗುಮ್ಮೆ, ಪ್ರಭು ಪಾಟೀಲ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
ಎನ್‌ಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ.ರಾಮಚಂದ್ರ ಗಣಾಪೂರ ಸ್ವಾಗತಿಸಿದರು. ಸೋನಿಯವರು ಪ್ರಾರ್ಥಿಸಿದರು, ಸೋನಿ ಹಾಗೂ ಸಂಗಡಿಗರಿದ ಎನ್‌ಎಸ್‌ಎಸ್ ಗೀತೆ ಹಾಡಿದರು. ಅಭಿಷೇಕ ವಂದಿಸಿದರು, ಗಣೇಶ ವಡ್ಡೆ ನಿರೂಪಿಸಿದರು.





