ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಯನ್ನು ಬಲವಂತವಾಗಿ ಹನುಮಾನ್ ದೇವಾಸ್ಥಾನಕ್ಕೆ ಕರೆದೊಯ್ದು, ಒತ್ತಾಯವಾಗಿ ʼಜೈ ಶ್ರೀರಾಮ್ʼ ಎಂದು ಹೇಳಿಸಿ, ಹಲ್ಲೆ ಮಾಡಿರುವ ಹಾಗೂ ಜಾತಿ ನಿಂದನೆ ಮಾಡಿದ ಆರೋಪದಡಿ ಬೀದರ್ ಜಿಲ್ಲೆಯ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹುಮನಾಬಾದ್ ತಾಲೂಕಿನ ಹಣಸಗೇರಾ ಗ್ರಾಮದ ದ್ವಿತೀಯ ಪಿಯು ಓದುತ್ತಿರುವ ವಿದ್ಯಾರ್ಥಿ ದರ್ಶನ ಲಕ್ಷ್ಮಣ ಕಟ್ಟಿಮನಿ ಎಂಬುವವರು ನೀಡಿದ ದೂರಿನ ಅನ್ವಯ ಹುಮನಾಬಾದ್ ಪಟ್ಟಣದ ಅಭಿಷೇಕ ವಾಂಜರಿ, ರಿತೇಶ ರೆಡ್ಡಿ, ಸುನೀಲ ರೆಡ್ಡಿ ಹಾಗೂ ಅಭಿಷೇಕ ತೆಲಂಗ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿ ದರ್ಶನ ಫೆ.22 ರಂದು “ನೀನೇ ದೇವಾ ನೀನೇ ಎಲ್ಲಾ, ಇವನಲ್ಲಾ ಗುರು, ಅವನು ನಾವೆಲ್ಲ ಅವರ ಅಭಿಮಾನಿಗಳು ಎನ್ನುವ ʼಹನುಮಾನ, ರಾಮ ಹಾಗೂ ಡಾ.ಬಿ.ಆರ್.ಅಂಬೇಡ್ಕರ್” ಪೊಟೋ ಇರುವ ವಿಡಿಯೋ ಸ್ಟೇಟಸ್ ಇಟ್ಟುಕೊಂಡಿದ್ದ. ಇದನ್ನು ನೋಡಿದ ನಾಲ್ವರು ದರ್ಶನಗೆ ಆಟೋದಲ್ಲಿ ಹನುಮಾನ್ ದೇವಾಸ್ಥಾನಕ್ಕೆ ಕರದೊಯ್ದು, ಜೈ ಶ್ರೀರಾಮ್ ಎಂದು ಹೇಳಿಸಿ ಕಪಾಳಕ್ಕೆ ಹೊಡೆದಿದ್ದಾರೆ ಎಂದು ದೂರು ನೀಡಿದ್ದಾರೆ.
“ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದು ಜಾತಿ ನಿಂದನೆ ಮಾಡಿದ್ದು ಅಲ್ಲದೆ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿದ ನಾಲ್ವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ” ವಿದ್ಯಾರ್ಥಿ ದರ್ಶನ ದೂರಿನಲ್ಲಿ ದಾಖಲಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹುಮನಾಬಾದ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




