ಔರಾದ್ ತಾಲೂಕಿನ ಚಿಂತಾಕಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಶಾಲೆಯ 6ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿನಿಯರು ಸಮರ್ಪಕ ಯೋಜನೆ ಮತ್ತು ಸಮನ್ವಯದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದರು.
ಚಿಂತಾಕಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಮರೆಡ್ಡಿ ಕೌಡಾಳೆ ಮಾತನಾಡಿ, ʼಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಶಿಸ್ತು ಜೀವನದ ಯಶಸ್ಸಿನ ಮಂತ್ರಗಳಾಗಿವೆ. ಶಿಕ್ಷಣವೇ ಜೀವನವನ್ನು ರೂಪಿಸುವ ಶಕ್ತಿ, ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಿ ಉನ್ನತ ಗುರಿಗಳನ್ನು ಸಾಧಿಸಬೇಕುʼ ಎಂದು ಸಲಹೆ ನೀಡಿದರು.

ಬರುವ ಎಸ್‌ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100 ಪ್ರತಿಶತ ಅಂಕಗಳನ್ನು ಗಳಿಸುವ ವಿದ್ಯಾರ್ಥಿನಿಗೆ 10 ಸಾವಿರ ನಗದು ಬಹುಮಾನ ನೀಡುವುದಾಗಿ ಅವರು ಘೋಷಿಸಿದ ಅವರು ವಾರ್ಷಿಕ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಪ್ಯಾಡ್ ಹಾಗೂ ಪೆನ್ನುಗಳನ್ನು ವಿತರಿಸಿದರು.
ಶಿಕ್ಷಕ ಕಿಶೋರ್ ಅವರು ಮಾತನಾಡಿ, ʼಗುರು ಮತ್ತು ಶಿಷ್ಯರ ಅವಿನಾಭಾವ ಸಂಬಂಧ ಅನನ್ಯವಾಗಿದೆ. ಸತತ ಅಧ್ಯಯನ ನಿರಂತರ ಪ್ರಯತ್ನದಿಂದ ಗುರಿ ತಲುಪಲು ಸಾಧ್ಯವಿದೆ. ಎಲ್ಲ ವಿದ್ಯಾರ್ಥಿಗಳು ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕುʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | 2 ದಿನಗಳ ಸಿರಿಧಾನ್ಯ, ಫಲಪುಷ್ಪ, ಮತ್ಸ್ಯಮೇಳಕ್ಕೆ ಚಾಲನೆ ನೀಡಿದ ಸಚಿವ ಈಶ್ವರ ಖಂಡ್ರೆ
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪಂಡರಿ ಗಾಯಕವಾಡ, ಶಿಕ್ಷಕರಾದ ಕಪಿಲ್ ಡೊಂಗ್ರೆ, ರೇಣುಕಾ ಜೈಪಾಲರೆಡ್ಡಿ, ಸಿಕಂದರ್ ಮಧುಸೂದನ, ಗೌರಿ ವಿಲ್ಫ್ರೆಡ್, ಜೋತಿ ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಗ್ರಾಮಸ್ಥರು ಭಾಗವಹಿಸಿದರು.





