ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಪರಸ್ಪರ ಗೌರವವನ್ನು ಬಲಪಡಿಸುವ ಉದ್ದೇಶದಿಂದ ಔರಾದ್ ತಾಲೂಕಿನ ಬೋರ್ಗಿ(ಜೆ) ಗ್ರಾಮದಲ್ಲಿ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸಲಾಯಿತು.
ಯುವ ಚಿಂತಕ ಉಮಾಕಾಂತ ವಿಳಾಸಪೂರೆ ಅವರು ಮಾತನಾಡಿ, ʼಪವಿತ್ರ ರಂಜಾನ್ ಮಾಸದಲ್ಲಿ ಸರ್ವಧರ್ಮ ತತ್ವದ ಸಾರವನ್ನು ತಿಳಿದುಕೊಳ್ಳಲು ಇಂತಹ ಸೌಹಾರ್ದತೆಯ ಕೂಟಗಳು ಅತ್ಯಂತ ಅವಶ್ಯಕವಾಗಿವೆ. ನಮ್ಮ ಗ್ರಾಮದಲ್ಲಿ ಹಿರಿಯರು ಹಿಂದಿನಿಂದಲೂ ಎಲ್ಲಾ ಸಮುದಾಯದವರು ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದಿಂದ ಬದುಕಿದ್ದಾರೆ. ಅದೇ ಪರಂಪರೆಯನ್ನು ಮುಂದುವರೆಸುವ ಜವಾಬ್ದಾರಿ ಯುವಕರ ಮೇಲಿದೆʼ ಎಂದು ಹೇಳಿದರು.

ವಿವಿಧ ಸಮುದಾಯದ ಮುಖಂಡರು ಮಾತನಾಡಿ, ʼಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಬೆಳೆಸಲು ಸರ್ವಧರ್ಮ ತತ್ವದ ಸಾರವನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ವಿಭಿನ್ನ ಧರ್ಮಗಳ ಸಾರ ಒಂದೇ ಮಾನವೀಯ ಮೌಲ್ಯಗಳನ್ನು ಸಾರುತ್ತದೆ ಎಂಬುದನ್ನು ಜನರಿಗೆ ತಿಳಿಸಲು ಸೌಹಾರ್ದ ಕೂಟಗಳಂತಹ ಕಾರ್ಯಕ್ರಮಗಳು ಮುಖ್ಯ ಪಾತ್ರವಹಿಸುತ್ತವೆʼ ಎಂದರು.
ಇದನ್ನೂ ಓದಿ : ಬೀದರ್ | ಮಹಿಳಾ ದಿನಾಚರಣೆ : ಕ್ಯಾನ್ಸರ್ ಗೆದ್ದ ಮಹಿಳೆಗೆ ಸನ್ಮಾನ
ಕಾರ್ಯಕ್ರಮದಲ್ಲಿ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ, ಸಾಮಾಜಿಕ ಚಿಂತಕ ಜಗದೀಶ್ವರ ಬಿರಾದಾರ ಸೇರಿದಂತೆ ಪ್ರಮುಖರಾದ ಅಯುಬಖಾನ್ ಪಾಟಿಲ್, ಸಂಗಮೇಶ ಕೌಟಗೆ, ಚನ್ನಪ್ಪಾ ಬಿರಾದಾರ ಶಾಮರಾವ ಜೈನಾಪುರೆ, ಸಿದ್ದಪ್ಪಾ ಉಜ್ಜಣಗೆ, ಶೇಖ್ ಖಲಿಲ್ ಅನೇಕರಿದ್ದರು.





