ಔರಾದ್ ತಾಲೂಕಿನ ಯನಗುಂದಾ ಗ್ರಾಮದ ನಾಟಿ ವೈದ್ಯ ಬಸವರಾಜ ಘೂಳೆ ಅವರ ಹೊಲದಲ್ಲಿ ಹೋಳಿ ಹಬ್ಬದ ಪ್ರಯುಕ್ತ ವಚನ ಚಾರಿಟೇಬಲ್ ಸೊಸೈಟಿ ಹಾಗೂ ಬಸವ ಬಾಂಧವ್ಯ ಬಳಗದಿಂದ ಆಯೋಜಿಸಿದ ಮಡ್ ಬಾತ್ ಹಾಗೂ ಶರಣ ನಗೆಮಾರಿ ತಂದೆಯವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಮಣ್ಣಿನ ಸ್ನಾನದಲ್ಲಿ ಮಿಂದು ಸಂಭ್ರಮಿಸಿದರು.
ಈ ವೇಳೆ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಚಂದ್ರಕಾಂತ ನಿರ್ಮಳೆ ಮಾತನಾಡಿ, ʼನಿಸರ್ಗದ ಮಡಿಲಲ್ಲಿ ಬೆಳೆಯುವ ಅನೇಕ ಗಿಡ, ಮರ, ಬಳ್ಳಿಗಳು, ಹೂವು, ಕಾಯಿ, ಎಲೆ, ತೊಗಟೆ, ಬೇರು ಮತ್ತು ಮಣ್ಣಿನಲ್ಲಿ ಅಪಾರ ಔಷಧೀಯ ಗುಣಗಳಿವೆʼ ಎಂದರು.
ʼವಚನಕಾರ ನಗೆಮಾರಿ ತಂದೆ ಅವರು ಹಾಸ್ಯದ ಮೂಲಕ ಜ್ಞಾನಪ್ರಸಾರಗೈದ ಮಹಾನ್ ಶರಣರಾಗಿದ್ದು, ತಮ್ಮ ತಿಳಿನಗೆಯ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಿದ್ದರು. ಆತುರವೈರಿ ಮಾರೇಶ್ವರ ಅಂಕಿತನಾಮದಿಂದ ಪ್ರಸಿದ್ಧರಾಗಿದ್ದ ಅವರು ಹಾಸ್ಯ ಪ್ರವೃತ್ತಿಯ ಮೂಲಕ ಸಂದೇಶ ಸಾರಿದವರಾಗಿದ್ದರು. ಶರಣರ ಆಶಯದಂತೆ ನಮ್ಮ ಅವಗುಣಗಳನ್ನು ತೊರೆದು ಸದ್ಗುಣಗಳನ್ನು ಬೆಳೆಸಿಕೊಳ್ಳಲು ಸಜ್ಜನರ ಸಹವಾಸ ಅಗತ್ಯʼ ಎಂದರು.
ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಡಾ.ಮನ್ಮಥ ಡೊಳೆ ಮಾತನಾಡಿ, ʼಪ್ರಕೃತಿದತ್ತವಾಗಿ ದೊರೆಯುವ ಅನೇಕ ವಸ್ತುಗಳು ಔಷಧೀಯ ಗುಣಗಳಿಂದ ಕೂಡಿವೆ. ಮಡ್ಬಾತ್ (ಮಣ್ಣಿನ ಸ್ನಾನ) ನೈಸರ್ಗಿಕ ಚಿಕಿತ್ಸಾ ವಿಧಾನವಾಗಿದ್ದು, ಚರ್ಮದ ಆರೋಗ್ಯ ಕಾಪಾಡಲು, ಕಾಂತಿ ಹೆಚ್ಚಿಸಲು, ಚರ್ಮರೋಗ ತಡೆಯಲು ಹಾಗೂ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯಕವಾಗುತ್ತದೆ. ಇದು ನೋವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆʼ ಎಂದರು.
ನಾಟಿ ವೈದ್ಯ ಬಸವರಾಜ ಘೂಳೆ ಮಾತನಾಡಿ, ʼನಮ್ಮ ಪೂರ್ವಜರು ಹೂವುಗಳಿಂದಲೇ ಬಣ್ಣ ತಯಾರಿಸಿ ಹೋಳಿ ಆಚರಿಸುತ್ತಿದ್ದರು. ಆದರೆ ಇಂದಿನ ಮಾರುಕಟ್ಟೆಯಲ್ಲಿ ಲಭ್ಯವಾಗುವ ರಸಾಯನಿಕಯುಕ್ತ ಬಣ್ಣಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ರಸಾಯನಿಕ ಬಣ್ಣಗಳನ್ನು ತೊರೆದು ನೈಸರ್ಗಿಕ ಬಣ್ಣಗಳನ್ನು ಬಳಕೆಗೆ ಒತ್ತು ನೀಡಬೇಕುʼ ಎಂದು ಕರೆ ನೀಡಿದರು.
ವಚನ ಚಾರಿಟೇಬಲ್ ಸೊಸೈಟಿ ತಾಲೂಕು ಸಂಚಾಲಕ ಡಿ.ಡಿ.ಬೊಳಿಗಾವೆ ಮಾತನಾಡಿ, ʼಮಡ್ಬಾತ್ ಎಂದರೆ ಮಣ್ಣಿನ ಸ್ನಾನವೆಂದು ಪ್ರಸಿದ್ಧವಾಗಿದೆ. ಕೆಲಸದ ಒತ್ತಡದಲ್ಲಿಯೂ ತಮ್ಮ ಬಿಡುವಿನ ವೇಳೆಯಲ್ಲಿ ಪ್ರವಾಸಿ ತಾಣಗಳಿಗೆ ತೆರಳಿ ಮಣ್ಣಿನ ಸ್ನಾನ ಮಾಡುತ್ತಾರೆ. ಅಲ್ಲಿ ಶುಲ್ಕ ವಿಧಿಸಲಾಗುತ್ತದೆ. ಯನಗುಂದಾದಲ್ಲಿ ಪ್ರತಿವರ್ಷ ಸಾರ್ವಜನಿಕವಾಗಿ ಉಚಿತವಾಗಿ ಮಡ್ಬಾತ್ ವ್ಯವಸ್ಥೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆʼ ಎಂದರು.
ಇದನ್ನೂ ಓದಿ : ಬೀದರ್ | ಗ್ರಾಪಂ ಮಾಜಿ ಅಧ್ಯಕ್ಷೆಗೆ ಇಲ್ಲ ಸ್ವಂತ ಸೂರು : ಅನ್ನ-ಆಸರೆಗೆ ವೃದ್ಧ ದಂಪತಿ ಪರದಾಟ!
ಕಾರ್ಯಕ್ರಮದಲ್ಲಿ ಭೀಮಾಶಂಕರ ಜೀರ್ಗೆ, ವೀರೇಶ ಅಲ್ಮಾಜೆ, ಧನರಾಜ ಪೀಟ್ರೆ, ಗುರುರಾಜ ಯಾದವ, ರಾಜಕುಮಾರ ಬಿರಾದಾರ, ಶರಣಪ್ಪಾ ಚಿಟ್ಮೆ, ಶಿವಕುಮಾರ ಮಜಗೆ, ಗುರುಪಾದಪ್ಪಾ ಕೋರೆ, ಸಂಜುಕುಮಾರ ವಳಂಡೆ, ಅಂಬಾದಾಸ ನೆಳಗೆ, ಮಲ್ಲಿಕಾರ್ಜುನ, ಟೆಕರಾಜ್, ಆನಂದ ದ್ಯಾಡೆ, ಅಮರ ಸ್ವಾಮಿ, ಕೃಷ್ಣ ಪಾಟೀಲ್, ಪ್ರಶಾಂತ ಮಜಗೆ, ಪ್ರಶಾಂತ ಮುಳ್ಳೆ, ರಮೇಶ ಪಾಂಚಾಳ, ಮಹಾದೇವ ಸಿಂಧೆ, ವಿಜಯಕುಮಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮಲ್ಲಿಕಾರ್ಜುನ ಟಂಕಸಾಲೆ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಗಜಾನನ್ ಮಳ್ಳಾ ಸ್ವಾಗತಿಸಿದರು. ಜಗನ್ನಾಥ ದೇಶಮುಖ ನಿರೂಪಿಸಿದರು. ಅಂಬಾದಾಸ ನೆಳಗೆ ವಂದಿಸಿದರು.





