ಕೆಲ ಸಂಘಟನೆ ಮುಖಂಡರು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಮಾಹಿತಿ ಕೇಳಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಅವರೊಂದಿಗೆ ಸೇರಿಕೊಂಡು ಪತ್ರಕರ್ತರು ವರದಿ ಮಾಡುತ್ತಿದ್ದಾರೆ. ಹೀಗೆ ವರದಿ ಪ್ರಕಟಿಸಿದರೆ ಪತ್ರಕರ್ತರ ವಿರುದ್ಧ ನಾನೇ ಕೇಸ್ ದಾಖಲಿಸುತ್ತೇನೆಂದು ಪತ್ರಕರ್ತರ ವಿರುದ್ಧ ಏರುಧ್ವನಿಯಲ್ಲಿ ಮಾತನಾಡಿರುವ ಶಾಸಕ ಪ್ರಭು ಚವ್ಹಾಣ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳೂರ ಒತ್ತಾಯಿಸಿದ್ದಾರೆ.
ಔರಾದ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚವ್ಹಾಣ ಅವರು ತಮ್ಮ ಭಾಷಣದಲ್ಲಿ ಸಂಘಟನೆಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಶಾಸಕ ಪ್ರಭು ಚವ್ಹಾಣ ಅವರ ಪ್ರಕಾರ ತಾಲೂಕಿನಲ್ಲಿ ನಡೆದ ಕಳಪೆ ಕಾಮಗಾರಿ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಬೆಳಕಿಗೆ ತರುವ ಸಂಘಟನೆಗಳ ಮತ್ತು ಮಾಹಿತಿ ಪಡೆದು ನ್ಯಾಯಾಲಯಗಳಲ್ಲಿ ಪಿಎಲ್ಐ ಹಾಕುವವರೆಲ್ಲ ದೇಶದ್ರೋಹಿಗಳೇ? ಶಾಸಕರ ಪ್ರತಿಯೊಂದು ಸುದ್ದಿ ಬಿತ್ತರಿಸುವ ನಿಷ್ಠಾವಂತ ಪತ್ರಕರ್ತರು ವಿರೋಧಿಗಳೇ? ಈ ಬಗ್ಗೆ ಶಾಸಕರು ಪತ್ರಕರ್ತರಿಗೆ, ಸಂಘಟನೆಗಳ ಮುಖಂಡರಿಗೆ ಕೂಡಲೇ ಕ್ಷಮೆ ಕೇಳಬೇಕುʼ ಎಂದು ಆಗ್ರಹಿಸಿದ್ದಾರೆ.
ʼನಾಲ್ಕು ಅವಧಿಗೆ ಆಯ್ಕೆಯಾದ ಶಾಸಕ ಪ್ರಭು ಚವ್ಹಾಣ ಅವರು ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಕೈಗೊಂಡಿಲ್ಲ. ಎಲ್ಲಾ ಕಾಮಗಾರಿಗಳಲ್ಲಿ ಕಮಿಷನ್ ಪಡೆದು ತಾವೇ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ತಾಲೂಕಿನಲ್ಲಿ ಜೆಜೆಎಂ ಕಾಮಗಾರಿ ಸಂಪೂರ್ಣವಾಗಿ ಹಾಳಾಗಲು ಶಾಸಕ ಚವ್ಹಾಣ ಅವರೇ ನೇರ ಕಾರಣʼ ಎಂದು ಕೊಳ್ಳೂರು ಆರೋಪಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಫೆ.3ರಂದು SIR ವಿರೋಧಿಸಿ ಚಿಂತನ-ಮಂಥನ ಸಮಾವೇಶ
ಸರ್ಕಾರಿ ಕಾರ್ಯಕ್ರಮದಲ್ಲಿ ಸಂಘಟನೆಗಳಿಗೆ ಮತ್ತು ಪತ್ರಕರ್ತರಿಗೆ ವೇದಿಕೆಯಿಂದಲೇ ಧಮ್ಕಿ ಹಾಕುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಶಾಸಕ ಪ್ರಭು ಚವ್ಹಾಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.





