ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಬಲಗೈ ಮೀಸಲಾತಿ ಹೋರಾಟ ಸಮಿತಿಯಿಂದ ಶುಕ್ರವಾರ ಔರಾದ್ ಬಂದ್ ಹೋರಾಟ ನಡೆಯಿತು.
ಬೆಳಿಗ್ಗೆ ಬೈಕ್ ರ‍್ಯಾಲಿ ನಡೆಸಿದ ಕಾರ್ಯಕರ್ತರು ಒಳ ಮೀಸಲಾತಿ ಅನ್ಯಾಯ ಖಂಡಿಸಿ ಘೋಷಣೆ ಕೂಗಿದರು. ಜಿಲ್ಲೆ, ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮುದಾಯದ ಜನರು ಕನ್ನಡಾಂಬೆ ವೃತ್ತ ಬಳಿ ಜಮಾಯಿಸಿದರು. ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಬಸ್ ನಿಲ್ದಾಣ ತಲುಪಿ ಸಮಾವೇಶಗೊಂಡಿತು.
ಈ ಸಂಬಂಧ ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಹೇಶ ಪಾಟೀಲ ಅವರಿಗೆ ಸಲ್ಲಿಸಿದರು.
ಮುಖಂಡರು ಮಾತನಾಡಿ, ‘ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಜಾರಿ ಮಾಡಿರುವ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಬಲಗೈ ಸಮುದಾಯವನ್ನು ಬಿ ಗುಂಪಿಗೆ ಸೇರಿಸಿ ರೋಸ್ಟರ್ ಬಿಂದುವಿನಲ್ಲಿ 9ನೇ ಸ್ಥಾನಕ್ಕೆ ಇಳಿಸಲಾಗಿದೆ. ಇದರಿಂದ ಬಲಗೈ ಸಂಬಂಧಿತ ಜಾತಿಗಳಿಗೆ ಅನ್ಯಾಯವಾಗಿದೆ. ಇಂತಹ ಅವೈಜಾನಿಕ ಮೀಸಲು ನೀತಿ ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಜನರಲ್ಲಿ ಒಡಕು ಮೂಡಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಸರ್ಕಾರ ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸದೇ ಇದ್ದರೆ ಇಡೀ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಯಲಿದೆ ಪ್ರತಿಭಟನಾಕಾರರು ಎಚ್ಚರಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಪ್ರವೀಣ್ ಕಾರಂಜೆ ಸೇರಿದಂತೆ ಪ್ರಮುಖರಾದ ಅಂಕುಶ ಗೋಖಲೆ, ಸುಭಾಷ್ ಲಾಧಾ, ಸಂತೋಷ ಸಿಂಧೆ, ದಿನೇಶ ಸಿಂಧೆ, ಪ್ರಕಾಶ ಕಾಂಬಳೆ, ಕಪೀಲ್ ಗೋಡಬೊಲೆ, ಸುನೀಲ ಮಿತ್ರಾ, ರತ್ನದೀಪ ಕಸ್ತೂರೆ, ಮಹೇಶ್ ಗೊರನಾಳಕರ್, ಗಣಪತಿ ವಾಸುದೇವ, ಸಂಜುಕುಮಾರ್ ಲಾಧಾ, ತುಕಾರಾಮ ಹಸನ್ಮುಖಿ, ಅಖಿಲೇಶ್ ಸಾಗರ, ಆನಂದ ಕಾಂಬಳೆ, ಸುನೀಲ ಮಿತ್ರಾ, ಪ್ರಕಾಶ ಬಂಗಾರೆ, ಸಂತೋಷ ಸೂರ್ಯವಂಶಿ, ಮಾರುತಿ ಜಗದಾಳೆ, ಸುನೀಲ ಭುಜಂಗ, ಉತ್ತಮ ಗಾಯಕವಾಡ, ಸೂರ್ಯಕಾಂತ ರಕ್ಷಾಳೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಬೀದರ್ | ರಾಜ್ಯ ಬಜೆಟ್ : ಯಾರು ಏನಂದ್ರು? ಇಲ್ಲಿದೆ ಪರ-ವಿರೋಧ ಅಭಿಪ್ರಾಯ





