ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರಿರುವ ಹೆಚ್ಚಿನ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು ಎಂದು ಅಮೃತ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಅಮೃತ ಮಹೋತ್ಸವ ಸಮಿತಿ ಮತ್ತು ಹಿರೇಮಠ ಸಂಸ್ಥಾನದ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿ, ʼಬಸವ ಜಯಂತಿ, ವಚನ ಜಾತ್ರೆ-2026, ಡಾ.ಚನ್ನಬಸವ ಪಟ್ಟದ್ದೇವರು 27ನೇ ಸ್ಮರಣೋತ್ಸವ ಮತ್ತು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಏ.10, 11 ಮತ್ತು 12 ರಂದು ವಾಲಿಬಾಲ್ ಪಂದ್ಯಾವಳಿ ಜರುಗಲಿವೆ’ ಎಂದರು.
‘ಇಂದಿನ ದಿನಗಳಲ್ಲಿ ಯುವಕರು ಮೊಬೈಲ್, ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಇದರಿಂದ ದೈಹಿಕ ಪರಿಶ್ರಮ ಕಡಿಮೆಯಾಗಿ ವಿವಿಧ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.ಇದರಿಂದ ಹೊರಬರಲು ಉತ್ತಮ ಆರೋಗ್ಯ ಶೈಲಿ ಮೈಗೂಡಿಸಿಕೊಳ್ಳಲು ಕ್ರೀಡೆಗಳು ಪೂರಕವಾಗಿವೆ. 3 ದಿವಸ ನಡೆಯಲಿರುವ ವಾಲಿಬಾಲ್ ಪಂದ್ಯಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.
ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಕ್ರೀಡೆ ಮಾನಸಿಕ, ದೈಹಿಕ ವೃದ್ಧಿಯೊಂದಿಗೆ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ’ ಎಂದು ತಿಳಿಸಿದರು.
ನೇತೃತ್ವ ವಹಿಸಿದ್ದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಇಂದಿನ ಯುವಶಕ್ತಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕ್ರೀಡೆಗಳಲ್ಲಿ ಭಾಗವಹಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕ್ರೀಡೆಗೆ ಉತ್ತೇಜನ ನೀಡುವ ಸದಾಶಯದೊಂದಿಗೆ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ತಂಡಗಳು ಪಾಲ್ಗೊಂಡು ಸದುಪಯೋಗ ಪಡೆದು ಕೊಳ್ಳಬೇಕುʼ ಎಂದು ತಿಳಿಸಿದರು.
ವಾಲಿಬಾಲ್ ಪಂದ್ಯಾವಳಿಯ ಅಧ್ಯಕ್ಷ ವಿಲಾಸ ಬಕ್ಕಾ ಮಾತನಾಡಿ, ‘ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನಗಳನ್ನು ನಿಗದಿಪಡಿಸಲಾಗಿದ್ದು, ಪ್ರಥಮ ಬಹುಮಾನವಾಗಿ 75,075, ದ್ವಿತೀಯ ಬಹುಮಾನ 51,075, ತೃತೀಯ ಬಹುಮಾನ 31,075 ಮತ್ತು ನಾಲ್ಕನೇ ಬಹುಮಾನ 21,075 ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಇದನ್ನೂ ಓದಿ : ಕಲ್ಯಾಣ ಕರ್ನಾಟಕ | 3 ವರ್ಷ, 5,100 ಪ್ರಕರಣ; ಮಹಿಳೆಯರ ನಾಪತ್ತೆ ಹಿಂದೆ ಕಳ್ಳಸಾಗಣೆಯ ಕರಿನೆರಳು?!
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಚನ್ನಬಸವ ಪಟ್ಟದ್ದೇವರು ಬ್ಯಾಂಕ್‌ನ ವ್ಯವಸ್ಥಾಪಕ ಗಣಪತಿ ಬಾವುಗೆ, ಪತ್ರಕರ್ತ ಜಯರಾಜ ಪಾತ್ರೆ, ದೈಹಿಕ ಶಿಕ್ಷಕ ಚೆನ್ನವೀರ ಚಕ್ರಸಾಲಿ ಸೇರಿದಂತೆ ಹಲವರು ಇದ್ದರು.





