ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಸಲ್ಲಿಸುತ್ತಿರುವ ಸೇವೆ ಅನುಪಮ. ಅಂತಹ ಪೂಜ್ಯರು 75ವಸಂತಗಳನ್ನು ಪೂರೈಸುತ್ತಿರುವುದು ಸಂತಸದ ಸಂಗತಿ. ಅವರ ಅಮೃತ ಮಹೋತ್ಸವ ಐತಿಹಾಸಿಕವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರು ಆಗಿರುವ ಈಶ್ವರ ಖಂಡ್ರೆ ಹೇಳಿದರು.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಹಿರೇಮಠ ಸಂಸ್ಥಾನ, ಅಮೃತ ಮಹೋತ್ಸವ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬಸವಣ್ಣನವರ ಜಯಂತ್ಯುತ್ಸವ, ವಚನ ಜಾತ್ರೆ-2026, ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ ಮತ್ತು ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ʼಭಾಲ್ಕಿಯಲ್ಲಿ ಮುಂದಿನ ತಿಂಗಳು ಏಪ್ರಿಲ್‌ನಲ್ಲಿ ಮೂರು ದಿವಸ ಐತಿಹಾಸಿಕವಾಗಿ ಸಮಾರಂಭ ಜರುಗಲಿದೆ. ಈಗಾಗಲೇ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು, ಸುತ್ತೂರು, ತುಮಕೂರು, ಆದಿಚಿಂಚನಗಿರಿ ಶ್ರೀ, ರವಿಶಂಕರ್ ಗುರೂಜಿ ಸೇರಿ ನಾಡಿನ ನಾನಾ ಮಠಾಧೀಶರು, ಗಣ್ಯರನ್ನು ಭೇಟಿಯಾಗಿ ಈ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಬಸವಲಿಂಗ ಪಟ್ಟದ್ದೇವರು ಅನೇಕ ವಿಧಾಯಕ ಕಾರ್ಯಗಳ ಮೂಲಕ ಶ್ರೀಮಠದ ಕೀರ್ತಿ ರಾಜ್ಯ, ರಾಷ್ಟ್ರ ವ್ಯಾಪಿ ಪಸರಿಸುವ ಕೆಲಸ ಮಾಡಿದ್ದಾರೆ. ಪಕ್ಷಾತೀತ ಮತ್ತು ಜಾತ್ಯತೀತವಾಗಿ ಎಲ್ಲರೂ ಸೇರಿ ಐತಿಹಾಸಿಕವಾಗಿ ಆಚರಿಸೋಣ. ಎಲ್ಲರೂ ಭಾಗವಹಿಸುವ ನಿರೀಕ್ಷೆಯಿದೆʼ ಎಂದರು.
ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ʼನಾಡಿನಾದ್ಯಂತ ಬಸವತತ್ವ ಪ್ರಚಾರ ಮತ್ತು ಪ್ರಸಾರ ಮಾಡುವಲ್ಲಿ ಹಿರೇಮಠ ಸಂಸ್ಥಾನದ ಕೊಡುಗೆ ದೊಡ್ಡದಿದೆ. ಶತಾಯಷಿ ಚನ್ನಬಸವ ಪಟ್ಟದ್ದೇವರು ಅಪ್ಪಟ ಬಸವತತ್ವ ಅನುಯಾಯಿ ಆಗಿದ್ದರು. ಅವರ ದಾರಿಯಲ್ಲೇ ಪರಮ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ನಡೆದು ಈ ಭಾಗದ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಅವರ ಅಮೃತ ಮಹೋತ್ಸವ ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸೋಣʼ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼಭಕ್ತರ ಒತ್ತಾಸೆಗೆ ಮಣಿದು ಅಮೃತ ಮಹೋತ್ಸವ ಆಚರಿಸಿಕೊಳ್ಳಲು ಒಪ್ಪಿಗೆ ನೀಡಿದ್ದೇನೆʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಬಲಗೈ ಸಮುದಾಯದ ಹೋರಾಟಗಾರರ ಮೇಲೆ ಪ್ರಕರಣ : ಡಿವಿಪಿ ಖಂಡನೆ
ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಹಣಮಂತರಾವ ಚವ್ಹಾಣ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ತಾಲೂಕು ಬಿಜೆಪಿ ಅಧ್ಯಕ್ಷ ವೀರಣ್ಣ ಕಾರಬಾರಿ, ಪ್ರಮುಖರಾದ ಝರೆಪ್ಪ, ಅಮರ ಜಲ್ದೆ, ಮಹಾದೇವ ಬೇಲೂರೆ, ಕಾಶಿನಾಥ ಲದ್ದೆ, ಪ್ರಶಾಂತ ಕೊಟಗೀರಾ, ದೀಪಕ ಸಿಂಧೆ ಸೇರಿದಂತೆ ಹಲವರು ಇದ್ದರು.





